ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮೇಜರ್‌ ಕೋರ್ಸ್‌ ‘ಕೌಶಲ ಸ್ನೇಹಿ’

ಉದ್ಯೋಗದ ಅವಶ್ಯಕತೆಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಿದ ಸೇಂಟ್‌ ಅಲೋಷಿಯಸ್‌ ಕಾಲೇಜು
Last Updated 23 ಜೂನ್ 2022, 6:25 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯಾರ್ಥಿಗಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವಂತೆ ನಗರದ ಸೇಂಟ್‌ ಅಲೋಷಿಯಸ್‌ ಸ್ವಾಯತ್ತ ಕಾಲೇಜು ‘ಕನ್ನಡ ಮೇಜರ್’ ಕೋರ್ಸ್‌ಗೆ ಹೊಸ ರೂಪ ನೀಡಿದೆ. ‘ಕನ್ನಡ ಮೇಜರ್‌’ ಪಠ್ಯ ವಿಷಯದ ಜೊತೆಗೆ ಸೃಜನಾತ್ಮಕ ಸಂವಹನ ವಿಷಯವನ್ನೂ ಕಲಿಸುವ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳೂ ಹೆಚ್ಚಿನ ಉದ್ಯೋಗಾವಕಾಶ ಪಡೆಯುವುದಕ್ಕೆ ಪೂರಕವಾಗುವಂತೆ ಈ ಕೋರ್ಸ್‌ ಅನ್ನು ‘ಕೌಶಲಸ್ನೇಹಿ’ಯನ್ನಾಗಿ ಪರಿವರ್ತಿಸಲಾಗಿದೆ.

ಕಾಲೇಜಿನ ಪ್ರಾಂಶುಪಾಲರಾದ ಫಾ.ಪ್ರವೀಣ್‌ ಮಾರ್ಟಿಸ್‌, ‘ಕನ್ನಡ ಮೇಜರ್‌ ವಿದ್ಯಾರ್ಥಿಗಳು ಪಠ್ಯವನ್ನು ಮಾತ್ರ ಕಲಿಯುತ್ತಿದ್ದರು. ಗದ್ಯ, ಪದ್ಯಗಳಿಗೆ ಮತ್ತಷ್ಟು ಸೃಜನಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಪ್ರಸ್ತುತಪಡಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದ್ದೇವೆ. ಅದಕ್ಕಾಗಿ ರಂಗ ಅಧ್ಯಯನ ಕೇಂದ್ರವನ್ನೂ ಜೋಡಿಸಿಕೊಂಡಿದ್ದೇವೆ. ಈ ರೀತಿಯ ವಿಭಿನ್ನ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಅವರ ಸೃಜನಶೀಲ ಬೆಳವಣಿಗೆಗೂ ಅವಕಾಶ ಸಿಗಲಿದೆ’ ಎಂದರು.

‘ವಿಜ್ಞಾನ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಕಲಿಯಲು ಅವಕಾಶ ಇದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಆನ್ವಯಿಕ ವಿಷಯಗಳನ್ನು ಕಲಿಸಲಾಗುತ್ತದೆ. ಆದರೆ ಸಾಹಿತ್ಯ ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳಿಲ್ಲ. ಕನ್ನಡ ಮೇಜರ್‌ ಪಠ್ಯವನ್ನು ಆನ್ವಯಿಕವಾಗಿ ಕಲಿಸುವ ಮೂಲಕ ಕಲಿಕೆಯನ್ನು ನಾಲ್ಕು ಗೋಡೆಗಳಾಚೆಗೆ ತರುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮಹಾಲಿಂಗ ಭಟ್‌.

‘ಕನ್ನಡ ಮೇಜರ್‌ ಪುನರುಜ್ಜೀವನಗೊಳಿಸುವ ಬಗ್ಗೆ ಶೈಕ್ಷಣಿಕ ವಲಯದಲ್ಲಿ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ನಾವು ಈ ಪ್ರಯತ್ನ ಮಾಡಿದ್ದೇವೆ. ಪೋಸ್ಟರ್ ರಚನೆ, ಕಲೆ, ಸಿನಿಮಾ, ಸಂಪಾದನೆ, ದೃಶ್ಯ ಸಂವಹನ, ಡಿಜಿಟಲ್‌ ಸಂವಹನದಂತಹ ಕೌಶಲಗಳನ್ನೂ ನಾವು ಕಲಿಸುತ್ತೇವೆ. ಅಂತಿಮ ವರ್ಷಕ್ಕೆ ರೆಪರ್ಟರಿ ರೀತಿ, ಪರಿಪೂರ್ಣ ತಂಡವಾಗಿ ಕಾರ್ಯಕ್ರಮ ನಡೆಸಿಕೊಡುವ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆ. ಕಲಾತ್ಮಕ ಅಭಿವ್ಯಕ್ತಿಯನ್ನು ಬಯಸುವ ಉದ್ಯೋಗಗಳನ್ನು ಪಡೆಯುವಲ್ಲಿ ಈ ಕೌಶಲಗಳು ನೆರವಾಗುತ್ತವೆ’ ಎಂದು ಅವರು ತಿಳಿಸಿದರು.

‘ಪಂಜೆ ಮಂಗೇಶರಾಯರ ‘ನಾಗರಹಾವು’ ಪದ್ಯ ಅಥವಾ ಪಂಪನ ಕಾವ್ಯವನ್ನು ಬೆಳಿಗ್ಗೆ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೀನಾಸಂ ಪದವೀಧರರು ಸಂಜೆ 4 ಗಂಟೆ ಬಳಿಕ ಪ್ರಾಯೋಗಿಕ ತರಗತಿ ನಡೆಸುತ್ತಾರೆ.ಒಂದೇ ಪಾಠವನ್ನು ವಿದ್ಯಾರ್ಥಿಗಳು ಎರಡು ವಿಧದಲ್ಲಿ ಕಲಿಯುತ್ತಾರೆ. ‘ಗೋಂದುಲು’ ನಾಟಕವನ್ನು ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳೇ ಅದನ್ನು ರಂಗರೂಪಕ್ಕಿಳಿಸುತ್ತಾರೆ. ತರಗತಿಯಲ್ಲಿ ಪದ್ಯಕ್ಕೆ ಪೋಸ್ಟರ್‌ ರಚಿಸುತ್ತಾರೆ. ಗದ್ಯವನ್ನು ಸಂಭಾಷಣೆ ರೂಪಕ್ಕಿಳಿಸುತ್ತಾರೆ. ತರಗತಿ ಕೋಣೆಯ ಕಲಿಕೆ ಜೊತೆಗೆ ಪಠ್ಯದ ಸೃಜನಾತ್ಮಕ ಅಭಿವ್ಯಕ್ತಿಯ (ಕ್ರಿಯೇಟಿವ್‌ ಕಮ್ಯುನಿಕೇಷನ್‌) ಪ್ರಯೋಗ ವಿದ್ಯಾರ್ಥಿಗಳಲ್ಲಿ ಹೊಸ ವಿಶ್ವಾಸ ಮೂಡಿಸಲಿದೆ’ ಎಂದು ಅವರು ವಿವರಿಸಿದರು.

‘ವಾರದಲ್ಲಿ ಮೂರು ದಿನ ಸಂಜೆ 4ರಿಂದ 5.30ರವರೆಗೆ ಹೆಚ್ಚುವರಿ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಬಿ.ಎ ಪದವಿ ಪ್ರಮಾಣಪತ್ರದ ಜೊತೆಗೆ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣಪತ್ರವನ್ನೂ ಪಡೆಯುತ್ತಾರೆ. ಸ್ನಾತಕೋತ್ತರ ಅಧ್ಯಯನ ಮುಂದುವರಿಸುವುದಕ್ಕೂ ಈ ಕೋರ್ಸ್‌ ಪೂರಕವಾಗಿದೆ. ಮೊದಲ ವರ್ಷ ಕನಿಷ್ಠ 30 ವಿದ್ಯಾರ್ಥಿಗಳನ್ನು ಕೋರ್ಸ್‌ಗೆ ದಾಖಲಿಸಿಕೊಳ್ಳುವ ಉದ್ದೇಶವಿದೆ‘ ಎಂದರು.

ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ. ಕನ್ನಡ ಮೇಜರ್‌ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿಯನ್ನೂ ನೀಡಲಿದೆ.

****

ಶಿವರಾಮ ಕಾರಂತರ, ಕುವೆಂಪು ಅವರ ಸಾಹಿತ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಆ ಮೇರು ಸಾಹಿತಿಗಳಂತೆಯೇ ತಾವೂ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ
ಫಾ.ಪ್ರವೀಣ್‌ ಮಾರ್ಟಿಸ್‌, ಸೇಂಟ್‌ ಅಲೋಷಿಯಸ್‌ ಕಾಲೇಜಿನ ಪ್ರಾಂಶುಪಾಲ

***

ಕೋರ್ಸ್‌ನ ವಿಶೇಷತೆಗಳೇನು?

* ಸಾಹಿತ್ಯದ ಜೊತೆಗೆ ನಟನೆ, ಬರವಣಿಗೆ, ಸಂಭಾಷಣೆ ರಚನೆ, ಸಿನಿಮಾ ಅಧ್ಯಯನ, ಮಾಧ್ಯಮ ಸಂವಹನ, ಕಾರ್ಯಕ್ರಮ ನಿರೂಪಣೆ, ರೇಡಿಯೊ ಸಂವಹನ, ಸೃಜನಾತ್ಮಕ ಬರವಣಿಗೆ, ಸಾಹಿತ್ಯ ಮತ್ತು ಕಲಾ ವಿಮರ್ಶೆಗಳನ್ನೂ ಕಲಿಸಲಾಗುತ್ತದೆ.

* ರಂಗಾಯಣ, ನೀನಾಸಂ, ರಾಷ್ಟ್ರೀಯ ನಾಟಕ ಶಾಲೆಗಳಲ್ಲಿ (ಎನ್‌ಎಸ್‌ಡಿ) ಅಳವಡಿಸಿಕೊಳ್ಳಲಾದ ಆಯ್ದ ಪಠ್ಯಕ್ರಮವನ್ನು ಈ ಕೋರ್ಸ್‌ಗೆ ಬಳಸಲಾಗುತ್ತಿದೆ

* ಇತಿಹಾಸ, ರಾಜಕೀಯ ವಿಜ್ಞಾನ, ಇಂಗ್ಲಿಷ್ ಮೇಜರ್, ಜರ್ನಲಿಸಂ, ಸಮಾಜವಿಜ್ಞಾನ ಗಳನ್ನೂ ಕನ್ನಡ ಮೇಜರ್ ಜೊತೆ ವಿದ್ಯಾರ್ಥಿಯು ಅಭಿರುಚಿಗೆ ಅನುಗುಣವಾಗಿ ಆರಿಸಬಹುದು

* ಕನ್ನಡ ಮೇಜರ್‌ ಜೊತೆಗೆ ರಂಗ ಅಧ್ಯಯನದಲ್ಲಿ ಡಿಪ್ಲೊಮಾ ಅಧ್ಯಯನ

* ಪದವಿ ಮುಗಿಯುವಾಗ ಡಿಪ್ಲೊಮಾ ಪದವಿ ಜೊತೆಜೊತೆಗೇ‌. ಮೂರು ವರುಷದಲ್ಲಿ ಪದವಿ ಮತ್ತು ಕ್ರಿಯೇಟಿವ್ ಕಮ್ಯುನಿಕೇಶನ್ ಡಿಪ್ಲೊಮಾ.

* ನೀನಾಸಂ ಪದವೀಧರರು ಕ್ರಿಯೇಟಿವ್ ಕಮ್ಯುನಿಕೇಶನ್ ಕಲಿಸುವ ಅಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT