ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆ

ದೂರದ ಬೈಕಂಪಾಡಿಗೆ ತೆರಳಲು ವರ್ತಕರ ಹಿಂದೇಟು: ಮನವೊಲಿಕೆ ಯತ್ನ
Last Updated 5 ಏಪ್ರಿಲ್ 2020, 15:00 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೆಂಟ್ರಲ್‌ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಸಗಟು ವ್ಯಾಪಾರಸ್ಥರು ನಿರಾಕರಿಸಿದ್ದು, ನೆಹರೂ ಮೈದಾನ, ಸರ್ವಿಸ್‌ ಬಸ್‌ ನಿಲ್ದಾಣ ಇಲ್ಲವೇ ಕರಾವಳಿ ಉತ್ಸವ ಮೈದಾನದಲ್ಲಿ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿ, ಮೂರು ದಿನ ಕಳೆದರೂ ವ್ಯಾಪಾರಸ್ಥರು ಇನ್ನೂ ಸ್ಥಳಾಂತರಗೊಂಡಿಲ್ಲ. ಶುಕ್ರವಾರ ರಾತ್ರಿ 11ರಿಂದ ನಸುಕಿನ ಜಾವ 4 ಗಂಟೆಯವರೆಗೆ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಸಗಟು ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಹಾಗಾಗಿ ಸಗಟು ವ್ಯಾಪಾರಸ್ಥರು ಮಂಗಳೂರು ನಗರ ಪ್ರವೇಶಿಸುವ ಸ್ಥಳಗಳಲ್ಲಿ ಲಾರಿ ನಿಲ್ಲಿಸಿ ಅಲ್ಲಿಂದಲೇ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದರು.

ಸಗಟು ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಬಹುದೇ ಎನ್ನುವ ಕುರಿತು ಚರ್ಚಿಸಲು ಶನಿವಾರ ಸಗಟು ಮಾರಾಟಗಾರರ ಸಭೆ ನಡೆಸಿದ್ದು, ಬೈಕಂಪಾಡಿ ನಗರದಿಂದ ಬಹಳಷ್ಟು ದೂರದಲ್ಲಿದೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಎಂಬ ಕಾರಣ ನೀಡಿ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ.

ಅಲ್ಲದೇ ನಗರ ವ್ಯಾಪ್ತಿಯಲ್ಲಿಯೇ ಪರ್ಯಾಯ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮ್ಮದ್ ಕುಂಞಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಮುಗಿಯುವ ತಾತ್ಕಾಲಿಕ ಅವಧಿಗೆ ಮಾತ್ರ ಈ ವ್ಯವಸ್ಥೆ ಆಗಿರುವುದರಿಂದ, ಬದಲಿ ಮೂರು ಜಾಗಗಳಲ್ಲಿ ಸಗಟು ವ್ಯಾಪಾರಕ್ಕೆ ಅನುಮತಿ ನೀಡಬಹುದು. ಅಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು. ಇದಲ್ಲದೆ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಪ್ರತ್ಯೇಕವಾಗಿ ದಿನ ಬಿಟ್ಟು ದಿನ ಮಾರಾಟ ಮಾಡುವ ಬಗ್ಗೆಯೂ ಚಿಂತನೆ ನಡೆಸಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಜಿಲ್ಲಾಡಳಿತವು ಸಗಟು ವ್ಯಾಪಾರವನ್ನು ಬೈಕಂಪಾಡಿಯಲ್ಲೇ ನಡೆಸಬೇಕೆಂಬ ನಿಲುವನ್ನು ಹೊಂದಿದ್ದು, ವ್ಯಾಪಾರಸ್ಥರ ಮನವೊಲಿಸುವ ಯತ್ನ ಮುಂದುವರಿಸಿದೆ.

ಸಚಿವ ಕೋಟಭೇಟಿ

ಈ ಮಧ್ಯೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಬೈಕಂಪಾಡಿ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಎಪಿಎಂಸಿಯಲ್ಲಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಸಗಟು ವ್ಯಾಪಾರಿಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಜನರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವ್ಯಾಪಾರಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಭಾನುವಾರವೂ ಜನರ ಓಡಾಟ ವಿರಳ

ಭಾನುವಾರ ಜನರಿಂದ ತುಂಬಿರುತ್ತಿದ್ದ ನಗರದ ಸೆಂಟ್ರಲ್‌ ಮಾರ್ಕೆಟ್‌ ಈ ವಾರ ಬಿಕೋ ಎನ್ನುತ್ತಿತ್ತು. ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದ್ದು, ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆ ತೆರೆದಿತ್ತು. ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಜತೆಗೆ ಮೀನಿನ ದರ ಕೂಡ ದುಬಾರಿಯಾಗಿತ್ತು.

ಔಷಧ ಅಂಗಡಿಗಳು, ನಗರದ ಬೃಹತ್ ಮಾಲ್‌ಗಳ ದಿನಸಿ ಮಳಿಗೆಗಳು ತೆರೆದಿದ್ದವು. ಆದರೆ ಅಲ್ಲೂ ಜನರ ಸಂಖ್ಯೆ ಕಡಿಮೆಯಾಗಿತ್ತು. ನಗರದ ಕೆಲವು ಕಡೆ ರಸ್ತೆ ಬದಿ ಹಣ್ಣು ಹಂಪಲು, ತರಕಾರಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು.

ನಗರದ ಹಲವು ಕಡೆ ಮಧ್ಯಾಹ್ನದವರೆಗೆ ಆಟೋ ರಿಕ್ಷಾಗಳು ಓಡಾಡಿವೆ. ಪಡಿತರ ಹಾಗೂ ಅಂಗಡಿಗಳಿಂದ ತರಕಾರಿ, ದಿನಸಿ ಸಾಮಗ್ರಿ ಕೊಂಡೊಯ್ಯುವವರು ರಿಕ್ಷಾಗಳಲ್ಲಿಯೇ ತೆರಳುತ್ತಿದ್ದರು. ಖಾಸಗಿ ವಾಹನಗಳ ಸಂಚಾರ ನಿಷೇಧಿಸಿರುವುದರಿಂದ ವಾಹನ ಸಂಚಾರ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT