ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹೆದ್ದಾರಿ ದುರಸ್ತಿ ಪಡಿಸಿ– ಇಲ್ಲವೇ ಸುಂಕ ಸಂಗ್ರಹ ನಿಲ್ಲಿಸಿ: ಆಗ್ರಹ

ಜನಪ್ರತಿನಿಧಿಗಳ ಅಣಕು ಶವಯಾತ್ರೆ: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ
Last Updated 19 ಜುಲೈ 2022, 4:34 IST
ಅಕ್ಷರ ಗಾತ್ರ

ಮಂಗಳೂರು: ‘ಬೈಂದೂರಿನಿಂದ ತಲಪಾಡಿಯವರಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ವಾಹನ ಸಂಚಾರ ದುಸ್ತರವಾಗುವಂತಹ ಹೊಂಡ, ಗುಂಡಿಗಳು ನಿರ್ಮಾಣವಾಗಿವೆ. ಈ ದುಃಸ್ಥಿತಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಕರಾವಳಿಯ ಉಭಯ ಜಿಲ್ಲೆಗಳ ಸಂಸದರು ಹಾಗೂ ಶಾಸಕರುಗಳು ಹಾಗೂಗುತ್ತಿಗೆ ಕಂಪನಿಗಳು ನೇರ ಹೊಣೆ’ ಎಂದು ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.

ವಾಹನಗಳಿಂದ ಸುಂಕ ಸಂಗ್ರಹಿಸುವ ಹೆದ್ದಾರಿಗಳು ಸದಾ ಸುಸ್ಥಿತಿಯಲ್ಲಿರಬೇಕು. ಅವುಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸದೆ ಸುಂಕ ಪಾವತಿಸುವ ವಾಹನ ಸವಾರರನ್ನು ಅಪಾಯಕ್ಕೆ ತಳ್ಳುವುದು ಕ್ರಿಮಿನಲ್ ಅಪರಾಧ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣದಾಸೆ ತೊರೆದು ವಾಹನ ಚಲಾಯಿಸುವ ಸ್ಥಿತಿ ಇದೆ. ಅಪಾಯಕಾರಿ ಗುಂಡಿಗಳನ್ನು ತಕ್ಷಣ ಮುಚ್ಚದಿದ್ದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೆದ್ದಾರಿಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಅಣಕು ಶವಯಾತ್ರೆ, ಭೂತ ದಹನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.

‘ಭಾರಿ ಲಾಭ ತಂದುಕೊಡುವ ಟೋಲ್ ರಸ್ತೆ ನಿರ್ಮಾಣ, ನಿರ್ವಹಣೆ, ಸುಂಕ ಸಂಗ್ರಹದ ಗುತ್ತಿಗೆ ಪಡೆದ ಕಂಪನಿಗಳೇ ಹೆದ್ದಾರಿಯನ್ನು ನಿರ್ವಹಿಸಬೇಕು ಎಂದು ಟೋಲ್ ಗುತ್ತಿಗೆ ನಿಯಮ ಹೇಳುತ್ತದೆ. ಕಳಪೆ ಡಾಂಬರೀಕರಣ, ಗುಣಮಟ್ಟವಿಲ್ಲದ ಚರಂಡಿ, ಸರ್ವಿಸ್ ರಸ್ತೆಗಳನ್ನು ನಿರ್ಮಿಸಿರುವುದು ಮಳೆಗಾಲದಲ್ಲಿ ಬಯಲಾಗಿದೆ. ಮಳೆಗಾಲಕ್ಕೆ ಮುನ್ನವೇ ದುರಸ್ತಿ ಕಾರ್ಯವನ್ನೂ ನಡೆಸಿಲ್ಲ. ‘ವಿಪರೀತ ಮಳೆಯಿಂದ ರಸ್ತೆಗಳು ಹಾಳಾಗಿವೆ. ಮಳೆಗಾಲದಲ್ಲಿ ಡಾಂಬರು, ಕಾಂಕ್ರಿಟೀಕರಣ ಸಾಧ್ಯವಿಲ್ಲ. ಮಳೆ ಕಡಿಮೆಯಾದ ಮೇಲೆ ದುರಸ್ತಿಗೊಳಿಸಲಾಗುವುದು’ ಎಂಬ ಸಿದ್ಧ ಉತ್ತರವನ್ನು ಎನ್‌ಎಚ್‌ಎಐ ಅಧಿಕಾರಿಗಳು ನೀಡುತ್ತಿದ್ದಾರೆ. ಇಂತಹ ಹೊಣೆಗೇಡಿ ಹೇಳಿಕೆಗಳಿಗೆ ಜಿಲ್ಲಾಡಳಿತದ ಅಧಿಕಾರಿಗಳು, ಸಂಸದ ಹಾಗೂ ಶಾಸಕರು ತಲೆ ಅಲ್ಲಾಡಿಸುವುದು ಸಮರ್ಥನೀಯವಲ್ಲ’.

‘ಉಭಯ ಜಿಲ್ಲೆಗಳ ಟೋಲ್ ಪ್ಲಾಜಾಗಳಲ್ಲಿ ದಿನವೊಂದಕ್ಕೆ ₹ ಕೋಟಿಗೂ ಹೆಚ್ಚು ‌ಸುಂಕ ಸಂಗ್ರಹವಾಗುತ್ತದೆ. ಸುಂಕ ಸಂಗ್ರಹಿಸುವ ಕಂಪನಿಗಳಿಂದ ಅಥವಾ ಎನ್ಎಚ್‌ಎಐನಿಂದ ಹೆದ್ದಾರಿಯನ್ನು ದುರಸ್ತಿ ಮಾಡಿಸುವ ಶಾಸನಬದ್ಧ ಅಧಿಕಾರ ಜಿಲ್ಲಾಡಳಿತಕ್ಕಿದೆ. ಆದರೂ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಹಾಗೂ ಶಾಸಕರು ಮೌನ ವಹಿಸಿದ್ದಾರೆ’.

‘ಜನ ಸುಮ್ಮನಿದ್ದರೆ ಅಕ್ಟೋಬರ್‌ವರೆಗೂ ಹೆದ್ದಾರಿಗಳು ತೇಪೆಯನ್ನೂ ಕಾಣುವುದಿಲ್ಲ. ಹೆದ್ದಾರಿಯು ಸಂಚಾರಯೋಗ್ಯವಾಗುವವರೆಗೆ ಸುಂಕ ಸಂಗ್ರಹಕ್ಕೆ ನಿಷೇಧ ಹೇರಬೇಕು. ಹೆದ್ದಾರಿ ಗುಂಡಿಗಳನ್ನು ಮುಚ್ಚಲು ತುರ್ತು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯ’ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT