ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳಿಗೆ ಬೇಕಿದೆ ಕಡಿವಾಣ

ನಗರದಲ್ಲಿ ಮಿತಿಮೀರಿದೆ ಶ್ವಾನಗಳ ಉಪಟಳ – ಅಸಹಾಯಕತೆ ವ್ಯಕ್ತಪಡಿಸುತ್ತಿದೆ ಪಾಲಿಕೆ
Last Updated 14 ಅಕ್ಟೋಬರ್ 2019, 7:03 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಬೀದಿನಾಯಿಗಳ ಉಪಟಳ ಮಿತಿ ಮೀರುತ್ತಿದ್ದು, ಕೆಲ ಪ್ರದೇಶಗಳಲ್ಲಿ ಜನರು ನಿರಾಂತಕವಾಗಿ ಮನೆಗಳಿಂದ ಹೊರಬರಲು ಭಯ ಪಡುತ್ತಿದ್ದಾರೆ. ರಸ್ತೆಗಳಲ್ಲಿ, ವೃತ್ತಗಳಲ್ಲಿ, ವಸತಿ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಸಂಚರಿಸು
ವುದರಿಂದ ವಾಹನ ಸವಾರರು, ಪಾದಚಾರಿಗಳು, ಮಕ್ಕಳು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.

ನಗರದಲ್ಲಿ ಎಲ್ಲಿ ನೋಡಿದರೂ ನಾಯಿಗಳ ಹಿಂಡು ಕಾಣಸಿಗುತ್ತವೆ. ಜನದಟ್ಟಣೆ ಇರುವ ಪ್ರದೇಶಗಳಲ್ಲೂ ನಿರ್ಭೀತಿಯಿಂದ ಓಡಾಡುವ ಬೀದಿ ನಾಯಿಗಳನ್ನು ನೋಡಿ ಜನರೇ ಅವುಗಳಿಗೆ ದಾರಿ ಬಿಟ್ಟು ನಿಲ್ಲುವ ಪರಿಸ್ಥಿತಿ ಇದೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಓಡಿ ಅಥವಾ ಹಿಂಬಾಲಿಸಿಕೊಂಡು ಬಂದು ಬೈಕ್‌ ಸವಾರರು ಆಯತಪ್ಪಿ ಬೀಳುವ ಪ್ರಸಂಗಗಳು ಮಾಮೂಲಿಯಾಗಿವೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ವಾರ್ಡ್‌ಗಳಿದ್ದು, ಪ್ರತಿ ಗಲ್ಲಿಯಲ್ಲೂ ಬೀದಿನಾಯಿಗಳ ಉಪಟಳ ಇದೆ. ಪ್ರತಿ ವಾರ್ಡ್‌ನಲ್ಲಿ ಅಂದಾಜು 200 ರಿಂದ 300 ಬೀದಿ ನಾಯಿಗಳು ಓಡಾಡುತ್ತಿವೆ. ಕೆಲವು ವಾರ್ಡ್‌ಗಳಲ್ಲಂತೂ ಅದಕ್ಕಿಂತಲೂ ಹೆಚ್ಚೇ ಇವೆ. ಗುಂಪು–ಗುಂಪಾಗಿ ಸುತ್ತಾಡುವ ಈ ನಾಯಿಗಳು ವಾಹನಗಳ ನಿಲುಗಡೆ ಜಾಗದಲ್ಲಿ, ಮೈದಾನದಲ್ಲಿ, ಹೋಟೆಲ್‌, ರೆಸ್ಟೋರೆಂಟ್‌ ಸಮೀಪ ಆಶ್ರಯ ಪಡೆದಿರುವುದನ್ನು ಕಾಣಬಹುದು.

‘ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಿಲ್ಲ. ಯಾವ ಬೀದಿಯಲ್ಲಿ ಹೋದರೂ ನಾಯಿಗಳು ಕಾಣಸಿಗುತ್ತದೆ. ಪಾಂಡೇಶ್ವರ ಸುತ್ತಮುತ್ತ ಬೀದಿ ನಾಯಿಗಳು ಮೈಮೇಲೆಯೇ ಬರುತ್ತದೆ. ಅದರಲ್ಲೂ ಅಪರಿಚಿತರು, ಅಲ್ಲಿನ ನಿವಾಸಿಗಳ ಸಂಬಂಧಿಕರು ಈ ನಾಯಿಗಳಿಂದಾಗಿ ಮನೆಗೆ ಬರಲು ಹೆದರುತ್ತಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರುತ್ತಾರೆ ಪಾಂಡೇಶ್ವರ ನಿವಾಸಿ ಪ್ರವೀಣ್‌ ಸಾಲ್ಯಾನ್‌ ಕಿರೋಡಿ.

‘ನಗರದಲ್ಲಿ ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯಗಳು ಕೂಡ ನಾಯಿಗಳ ಹಾವಳಿಗೆ ಕಾರಣ. ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಜನರು ಕೂಡ ರಸ್ತೆ ಬದಿ, ಖಾಲಿ ನಿವೇಶನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೇ ತ್ಯಾಜ್ಯಗಳನ್ನು ಎಸೆಯುತ್ತಾರೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳುತ್ತಾರೆ ಕಂಕನಾಡಿ ನಿವಾಸಿ ರವಿಕುಮಾರ್.

‘ಬೆಳ್ಳಂಬೆಳಿಗ್ಗೆ ಬೀದಿ ನಾಯಿಗಳು ಆಹಾರ ಹುಡುಕಿ
ಕೊಂಡು ರಸ್ತೆಯುದ್ದಕ್ಕೂ ಹೋಗುತ್ತವೆ. ರಸ್ತೆ ಬದಿಯಲ್ಲಿರುವ ಕಸದ ರಾಶಿಯನ್ನು ಚೆಲ್ಲಾಪಿಲ್ಲಿ ಮಾಡಿ ಅದರಲ್ಲಿ ಆಹಾರ ಹುಡುಕುತ್ತವೆ. ಕಸದೊಂದಿಗೆ ಮೀನಿನ
ಮುಳ್ಳು, ಕೋಳಿ ಎಲುಬು ಇದ್ದರೆ ವಾಸನೆಯಿಂದ ಪತ್ತೆ ಹೆಚ್ಚುವ ನಾಯಿಗಳು, ಅದನ್ನು ಎಳೆದಾಡುತ್ತದೆ. ನಂತರ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ನಾವು ಅದನ್ನೂ
ಹೆಕ್ಕಿ ಕೊಂಡೊಯ್ಯುತ್ತೇವೆ’ ಎನ್ನುತ್ತಾರೆ ಪೌರಕಾ
ರ್ಮಿಕರೊಬ್ಬರು.

‘ನಗರದಲ್ಲಿ ಬೀದಿನಾಯಿಗಳ ಹಾವಳಿ ಇರುವುದು ನಿಜ. ಈ ಬಗ್ಗೆ ನಿತ್ಯ ದೂರುಗಳು ಬರುತ್ತಿವೆ. ಬೀದಿನಾಯಿಗಳನ್ನು ಕೊಲ್ಲಲು ಅಥವಾ ಸ್ಥಳಾಂತರಮಾಡಲು ಅವಕಾಶ ಇಲ್ಲ. ನಾಯಿಗಳ ಸಂಖ್ಯೆ ತಗ್ಗಿಸಲು ಕೆಲವು ಮಾರ್ಗದರ್ಶಿ ಸೂತ್ರಗಳ ಪ್ರಕಾರವೇ ನಡೆದುಕೊಳ್ಳಬೇಕಾಗಿದೆ. ಬೀದಿನಾಯಿಗಳ ನಿಯಂತ್ರಣ ಸಂಬಂಧಿಸಿದಂತೆ ಪಾಲಿಕೆಯು ಶಕ್ತಿ ನಗರದ ಅನಿಮಲ್‌ ಕೇರ್‌ ಟ್ರಸ್ಟ್‌ ಜತೆ ಒಪ್ಪಂದ ಮಾಡಿಕೊಂಡಿದೆ. ನಾಯಿಗಳ ಸಂಖ್ಯೆ ತಗ್ಗಿಸಲು ಅವರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಆದರೂ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವಿಚಾರದಲ್ಲಿ ಪಾಲಿಕೆಯೂ ಅಸಹಾಯಕವಾಗಿದೆ’ ಎನ್ನುತ್ತಾರೆ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ.

‘ಬೀದಿನಾಯಿಗಳಿಂದ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಬೀದಿನಾಯಿಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಪಾಲಿಕೆಯು ಒಂದು ಖಾಸಗಿ ಸಂಸ್ಥೆಗೆ ನೀಡಿದೆ. ಅದು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಈ ಬಗ್ಗೆ ಶೀಘ್ರದಲ್ಲೇ ಪಾಲಿಕೆ ಆಯುಕ್ತರೊಂದಿಗೆ ಸಭೆ ಕರೆಯಲಾಗುವುದು. ಎರಡು ಅಥವಾ ಮೂರು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳುವ ಕುರಿತು ಪರಿಶೀಲಿಸಲಾಗುವುದು’ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ವೈ. ಶೆಟ್ಟಿ ಹೇಳಿದ್ದಾರೆ.

****

ಬೀದಿ ನಾಯಿಗಳ ಸ್ಥಳಾಂತರ ಅಥವಾ ಒಂದೇ ಕಡೆ ಕೂಡಿಟ್ಟು ಪೋಷಿಸುವ ಕುರಿತು ಕಾನೂನಿನ ತೊಡಕುಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಪಾಲಿಕೆ ಆಯುಕ್ತರ ಜತೆಯೂ ಚರ್ಚಿಸಿದ್ದೇನೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆಯುತ್ತಿದ್ದೇನೆ.

ಡಾ.ಭರತ್‌ ವೈ. ಶೆಟ್ಟಿ ,ಮಂಗಳೂರು ಉತ್ತರ ಶಾಸಕ

****

ಬೀದಿನಾಯಿಗಳಿಗೆ ಸಂಬಂಧಿಸಿದಂತೆ ಆಗಾಗ ದೂರುಗಳು ಬರುತ್ತಿವೆ. ಪಾಲಿಕೆ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂಧಪಟ್ಟ ಇಲಾಖೆಯವರ ಜತೆ ಚರ್ಚಿಸಿ, ಕಾನೂನಿನ ಇತಿಮಿತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇನೆ.

-ಡಿ. ವೇದವ್ಯಾಸ ಕಾಮತ್‌ ,ಮಂಗಳೂರು ದಕ್ಷಿಣ ಶಾಸಕ

****

ಬೀದಿನಾಯಿಗಳ ನಿಯಂತ್ರಣಕ್ಕೆ ಅರಿವೇ ಮದ್ದು. ಪಾಲಿಕೆಯಿಂದ ಜಾಗೃತಿ ಕಾರ್ಯಕ್ರಮ ಮಾಡಬೇಕು. ಅಲ್ಲದೆ, ತಿಂಗಳಿಗೆ ಎರಡು ಕಡೆ ಶಿಬಿರವನ್ನು ಆಯೋಜಿಸಿ, ಸಾಕು ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು. ಜತೆಗೆ ರೇಬಿಸ್‌ ನಿರೋಧಕ ಲಸಿಕೆ ಹಾಕಿಸಬೇಕು.

-ಸುಮಾ ಆರ್‌.ರಾವ್ ,ಅನಿಮಲ್‌ ಕೇರ್‌ ಟ್ರಸ್ಟ್‌ನ ಟ್ರಸ್ಟಿ

****

ಪಾಂಡೇಶ್ವರದ ಬಳಿ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ. ದ್ವಿಚಕ್ರ ಹಾಗೂ ಕಾರುಗಳನ್ನು ಈ ನಾಯಿಗಳು ಬೆನ್ನಟ್ಟುತ್ತವೆ. ಒಂದು ನಾಯಿ ಹಿಂದಟ್ಟಿದರೆಅದರ ಹಿಂದೆ ಹತ್ತಾರು ನಾಯಿಗಳು ಏಕಕಾಲದಲ್ಲಿ ದಾಳಿ ಮಾಡುತ್ತವೆ.ಹಲವು ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದು ಇದೆ.

-ಪ್ರವೀಣ್‌ ಸಾಲ್ಯಾನ್‌ ಕಿರೋಡಿ ,ಮಂಗಳೂರು ನಿವಾಸಿ

ಅನಿಮಲ್‌ ಕೇರ್‌ಟ್ರಸ್ಟ್‌ನವರು ಹೇಳುವುದೇನು?
‘ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ 12 ವರ್ಷಗಳಿಂದ ಮಹಾನಗರ ಪಾಲಿಕೆಯ ಸಹಕಾರದಲ್ಲಿ ಅನಿಮಲ್‌ ಕೇರ್‌ ಟ್ರಸ್ಟ್‌ ಪ್ರಯತ್ನಿಸುತ್ತಿದೆ.ಆದರೆ, ನಿರೀಕ್ಷಿತ ಫಲಿತಾಂಶ ದೊರಕುತ್ತಿಲ್ಲ. ಇದಕ್ಕೆ ಸಾಕು ನಾಯಿಗಳ ಮನೆಯವರೇ ಕಾರಣ’ ಎಂದು ಆರೋಪಿಸುತ್ತಾರೆ ಟ್ರಸ್ಟ್‌ನ ಸದಸ್ಯೆ ಸುಮಾ ಆರ್. ನಾಯಕ್‌.

‘ಕಾನೂನಿನಲ್ಲಿ ಬೀದಿನಾಯಿಗಳನ್ನು ಸ್ಥಳಾಂತರ ಮಾಡಲು ಅವಕಾಶವಿಲ್ಲ. ಒಂದು ನಿರ್ದಿಷ್ಟ ಸ್ಥಳದಿಂದ ಹೆಣ್ಣು ಅಥವಾ ಗಂಡು ನಾಯಿಯನ್ನು ತಂದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ಅದೇ ಸ್ಥಳದಲ್ಲಿ ಬಿಡುವುದು ನಮ್ಮ ಕಾರ್ಯಕ್ರಮ. ‌ಪ್ರತಿ ತಿಂಗಳು ಸರಾಸರಿ 130 ರಿಂದ 140 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಟ್ರಸ್ಟ್‌ ಮೂಲಕ ಮಾಡಲಾಗುತ್ತದೆ. ಹೆಣ್ಣು ಮತ್ತು ಗಂಡು ನಾಯಿಗಳಿಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ರೇಬಿಸ್‌ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಮಂಗಳೂರು ನಗರದಲ್ಲಿರುವ ಶೇ 70ಕ್ಕೂ ಅಧಿಕ ಬೀದಿ ನಾಯಿಗಳಿಗೆ ಈ ಚಿಕಿತ್ಸೆ ಮಾಡಿದ್ದು, ಗುರುತಿಗಾಗಿ ಅವುಗಳ ಕಿವಿಯನ್ನು ‘v’ ಆಕಾರದಲ್ಲಿ ಹರಿಯಲಾಗುತ್ತದೆ’

‘ಜನರು ಸಾಕು ನಾಯಿಗಳಿಗೆ ಹುಟ್ಟಿದ ಮರಿಗಳು ಬೀದಿಗಳಲ್ಲಿ, ಮಾರ್ಕೆಟ್‌ಗಳಲ್ಲಿ ಜನರು ಎಸೆದು ಹೋಗುತ್ತಾರೆ. ಪ್ರತಿದಿನ ಅಲ್ಲಿ ನಾಯಿಗಳನ್ನು ಎಸೆದಿದ್ದಾರೆ, ಇಲ್ಲಿ ತಂದು ಹಾಕಿದ್ದಾರೆ ಎಂದು ಕರೆಗಳುಬರುತ್ತಿವೆ. ಕೇಂದ್ರ ಮಾರುಕಟ್ಟೆ, ಉರ್ವ, ಜೆಪ್ಪು, ಕೃಷ್ಣಪುರ, ಕಾಟಿಪಳ್ಳಮಾರ್ಕೆಟ್‌, ಮಂಗಳಾದೇವಿ ಮುಂದಾದ ಕಡೆಗಳಲ್ಲಿ ಬೆಳಿಗ್ಗೆ ನಾಯಿಮರಿಗಳು ತೊಟ್ಟೆಯಲ್ಲಿ, ಬುಟ್ಟಿಯಲ್ಲಿ, ಗೋಣಿಗಳಲ್ಲಿ ತಂದು ಎಸೆಯುತ್ತಾರೆ. ಈ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ತಪ್ಪಿತಸ್ಥರನ್ನು ಕಂಡುಹಿಡಿಯಬಹುದು. ಹೀಗಾಗಿ, ಬೀದಿನಾಯಿಗಳಿಗಿಂತ ಮೊದಲು ಸಾಕು ಸಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಬೀದಿ ನಾಯಿಗಳು ನಿಯಂತ್ರಣಕ್ಕೆ ಬರುತ್ತದೆ’ ಎಂಬುದು ಅವರ ವಾದ.

ಬಹುತೇಕ ಮಂದಿ ಮನೆಯಲ್ಲಿ ಸಾಕುವ ಗಂಡುನಾಯಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುತ್ತಿಲ್ಲ. ಹೆಣ್ಣು ನಾಯಿಗೆ ಮಾತ್ರ ಮಾಡಿಸುತ್ತಾರೆ. ಈ ಮನೋಭಾವ ಸರಿಯಲ್ಲ. ಎರಡೂ ನಾಯಿಗೂ ಈ ಶಸ್ತ್ರಚಿಕಿತ್ಸೆ ಮಾಡಬೇಕು. ಅಲ್ಲದೆ, ಪ್ರತಿ ವರ್ಷ ಸಾಕು ನಾಯಿಗೂ ರೇಬಿಸ್‌ ನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕು. ಜನರು ಎಚ್ಚೆತ್ತುಕೊಳ್ಳದಿದ್ದರೆ ಈ ಬೀದಿನಾಯಿಗಳನ್ನು ನಿಯಂತ್ರಿಸು ವುದು ಕಷ್ಟಸಾಧ್ಯ ಎಂಬುದು ಅವರ ಅಭಿಪ್ರಾಯ.

ಕಸವೇ ಆಹಾರ: ‘ಮಂಗಳೂರು ನಗರದಲ್ಲಿರುವ ಶೇ 70ಕ್ಕೂ ಅಧಿಕ ಬೀದಿನಾಯಿಗಳಿಗೆ ಕಸ, ತ್ಯಾಜ್ಯವೇ ಆಹಾರವಾಗಿದೆ. ಶೇ 30ರಷ್ಟು ನಾಯಿಗಳಿಗೆ ಕೆಲವರು ಆಹಾರ ಹಾಕುತ್ತಿದ್ದಾರೆ. ಅದಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಾರೆ. ನಮ್ಮ ಬೀದಿಯ ನಾಯಿಗಳಿಗೆ ಆಹಾರ ಹಾಕಿದರೆ ಅದಕ್ಕೆ ನಮ್ಮ ಪರಿಚಯವಾಗುತ್ತದೆ. ಅಲ್ಲದೆ, ಬೇರೆ ಪ್ರದೇಶದ ನಾಯಿಗಳನ್ನು ಬರಲು ಬಿಡುವುದಿಲ್ಲ. ಹೀಗಾಗಿ, ನಮ್ಮ ಪ್ರದೇಶದ ಸುರಕ್ಷತೆಯೂ ಆಗುತ್ತದೆ. ಈ ದೃಷ್ಟಿಕೋನದಲ್ಲಿ ಜನರು ಯೋಚಿಸಬೇಕು’ ಎಂದು ಹೇಳುತ್ತಾರೆ ಸುಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT