ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ

ಹೆಚ್ಚುತ್ತಿರುವ ತಾಪಮಾನ; ಜಲಮೂಲಗಳಲ್ಲಿ ನೀರಿನ ಪ್ರಮಾಣ ಇಳಿಕೆ
Last Updated 28 ಮಾರ್ಚ್ 2021, 10:30 IST
ಅಕ್ಷರ ಗಾತ್ರ

ಮಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಜಲಮೂಲಗಳನ್ನು ಭದ್ರಪಡಿಸಿಕೊಳ್ಳಲು ಆಡಳಿತ ಕಠಿಣ ಹೆಜ್ಜೆ ಹಾಕಿದೆ.

ನಗರ ಹಾಗೂ ಗ್ರಾಮೀಣ ಭಾಗಗಳ ಜಲ ಸಂಗ್ರಹಾಗಾರಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ನೀರು ಪೋಲಾಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆದಿದೆ. ನೀರಿನ ಲಭ್ಯತೆ ಆಧರಿಸಿ, ಪೂರೈಕೆ ಮಾಡುವಂತೆ ಅವರು ಸೂಚಿಸಿದ್ದಾರೆ.

‘ನೇತ್ರಾವತಿ ನದಿಗೆ ಅಡ್ಡಲಾಗಿ ತುಂಬೆಯಲ್ಲಿ ಕಟ್ಟಿರುವ ಕಿಂಡಿ ಅಣೆಕಟ್ಟೆಯಲ್ಲಿ 6 ಮೀಟರ್ ನೀರು ಸಂಗ್ರಹವಿತ್ತು. ಎರಡು ದಿನಗಳಿಂದ ಈ ಮಟ್ಟ 5.7 ಮೀಟರ್‌ಗೆ ಇಳಿಕೆಯಾಗಿದೆ. ಇಲ್ಲಿಂದಲೇ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಪ್ರತಿದಿನ 160 ಎಂಎಲ್‌ಡಿ ನೀರು ಎತ್ತಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಗಾಲ ಆರಂಭವಾಗುವವರೆಗೆ ನಗರಕ್ಕೆ ಪ್ರತಿದಿನ ನೀರು ಪೂರೈಕೆ ತೊಂದರೆಯಾಗದು’ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

‘ತುಂಬೆಯಲ್ಲಿ ನೀರಿನ ಒಳಹರಿವು ಕಡಿಮೆಯಾದರೆ ಸಮಸ್ಯೆಯಾಗುತ್ತದೆ. ನೀರಿನ ಮಟ್ಟ ಕ್ಷೀಣಿಸಿದಲ್ಲಿ, ಶಂಭೂರಿನ ಎಎಂಆರ್‌ ಅಣೆಕಟ್ಟೆಯಿಂದ ತುಂಬೆಗೆ ನೀರು ಹರಿಸಬೇಕಾಗುತ್ತದೆ. ಸುತ್ತಮುತ್ತ ಅಕ್ರಮ ಪಂಪ್‌ಸೆಟ್‌ಗಳ ಬಳಕೆಯಾಗದಂತೆ ನಿಗಾವಹಿಸಲು ಮಹಾನಗರ ಪಾಲಿಕೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಅಲ್ಲದೆ, ನಗರ ವ್ಯಾಪ್ತಿಯಲ್ಲಿ ನೀರಿನ ವಿತರಣೆಯಲ್ಲಿ ಅಚ್ಚುಕಟ್ಟಿನ ಕ್ರಮವಹಿಸುವಂತೆ ತಿಳಿಸಲಾಗಿದೆ. ಮೇ ತಿಂಗಳ ವೇಳೆಗೆ ಜಲಕ್ಷಾಮ ಎದುರಾದರೆ, ಮೂರು ಝೋನ್‌ಗಳಾಗಿ ವಿಂಗಡಿಸಿ, ಟ್ಯಾಂಕರ್ ಮೂಲಕ ನೀರು ಸರಬರಾಜಿಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆಗಾಲ ಆರಂಭಕ್ಕೆ ಮುಂಚೆ ಬೇಸಿಗೆಯ ನಡುವಿನ ಅವಧಿಯಲ್ಲಿ ಮಳೆಯಾದರೆ ಮೇ ಅಂತ್ಯದವರೆಗೆ ನೀರಿನ ಸಮಸ್ಯೆ ಎದುರಾಗದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ, ಮುಂಬರುವ ಬೇಸಿಗೆ ಎದುರಿಸಲು ಈಗಾಗಲೇ ಎಲ್ಲ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಕ್ರಿಯಾಯೋಜನೆ ರೂಪಿಸುವಂತೆ ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರತಿಕ್ರಿಯಿಸಿದರು.

‘ಈಗಾಗಲೇ ಇರುವ ಬೋರ್‌ವೆಲ್‌ಗಳನ್ನು ವ್ಯವಸ್ಥಿತಗೊಳಿಸುವಂತೆ ಮತ್ತು ಹೊಸ ಬೋರ್‌ವೆಲ್ ಕೊರೆಯಲು ಅವಕಾಶವಿದ್ದರೆ ಪ್ರಸ್ತಾವ ಸಲ್ಲಿಸಲು, ಲಭ್ಯವಿರುವ ಜಲಮೂಲಗಳನ್ನು ಗುರುತಿಸಲು ತಿಳಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಮಳೆಗಾಲ ಆರಂಭವಾಗುವವರೆಗೂ ಮಂಗಳೂರು ನಗರಕ್ಕೆ ಪ್ರತಿದಿನ ನೀರು ಪೂರೈಕೆಗೆ ಸಮಸ್ಯೆಯಾಗದು.
ಪ್ರೇಮಾನಂದ ಶೆಟ್ಟಿ,
ಮೇಯರ್

ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶ ಗುರುತಿಸಿ, ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ ಪೂರೈಸುವಂತೆ ಸೂಚಿಸಲಾಗಿದೆ.
– ಡಾ. ಕುಮಾರ್
ಜಿಲ್ಲಾ ಪಂಚಾಯಿತಿ ಸಿಇಒ

ನೀರು ಉಳಿಸಲು ಆಗಬೇಕಾಗಿದ್ದು ಏನು ?

* ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಪಂಪ್‌ಸೆಟ್‌ ಬಳಕೆ ನಿಯಂತ್ರಣ

* ತುಂಬೆಯಿಂದ ನಗರಕ್ಕೆ ಬರುವ ಮಾರ್ಗ ಮಧ್ಯೆ ನೀರು ಪೋಲಾಗುವುದನ್ನು ತಡೆಯುವುದು

* ವಾಹನ ತೊಳೆಯಲು, ಅಂಗಳ ಸ್ವಚ್ಛತೆಗೆ ಕುಡಿಯುವ ನೀರು ಬಳಕೆಗೆ ತಡೆ

* ಅಕ್ರಮ ನಲ್ಲಿ ಸಂಪರ್ಕ ಪತ್ತೆ ಮಾಡಿ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT