ಭಾನುವಾರ, ಸೆಪ್ಟೆಂಬರ್ 25, 2022
29 °C
ಕೂದಲು ದಾನ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿಯಿಂದ ಸಂಗ್ರಹ; ಕ್ಯಾನ್ಸರ್‌ ರೋಗಿಗಳಿಗೆ ವಿಗ್ ಮಾಡಲು ಬಳಕೆ

ಕೂದಲು ದಾನ ಶಿಬಿರ: ಭರವಸೆಯ ಬೀಜ ಬಿತ್ತಿದ ಯುವಸಮೂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಶಕ್ತಿನಗರದಲ್ಲಿರುವ ಶಕ್ತಿ ಪಿಯು ಕಾಲೇಜು ಆವರಣದಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಚಟುವಟಿಕೆಗಳು ಗರಿಗೆದರಿದ್ದವು. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯವೊಂದಕ್ಕೆ ಸಿದ್ಧರಾಗಿದ್ದರೆ, ಅಲ್ಲಿಗೆ ಬಂದಿದ್ದವರು ‘ದಾನ’ದ ಮೂಲಕ ವಿದ್ಯಾರ್ಥಿಗಳ ಬೆನ್ನುತಟ್ಟಲು ಸಜ್ಜಾಗಿದ್ದರು.

ಕಿಮೊಥೆರಪಿಗೆ ಒಳಗಾಗಿ ಕೂದಲು ಕಳೆದುಕೊಂಡ ಕ್ಯಾನ್ಸರ್‌ ರೋಗಿಗಳಿಗಾಗಿ ಕಾಲೇಜು ವಿದ್ಯಾರ್ಥಿಗಳ ಸಂಘಟನೆ ‘ಸೀಡ್ಸ್ ಆಫ್‌ ಹೋಪ್’ ಆಯೋಜಿಸಿದ್ದ ಕೂದಲು ದಾನ–ಸಂಗ್ರಹ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ಕೂದಲನ್ನು ನೀಡಿದರು. ಮುಳಿಯ ಫೌಂಡೇಷನ್‌ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಸಂಗ್ರಹವಾದ ಕೂದಲಿನಿಂದ ವಿಗ್ ತಯಾರಿಸಿ ವಿತರಿಸಲಾಗುತ್ತದೆ.

ಪುತ್ತೂರಿನ 9 ವಿದ್ಯಾರ್ಥಿಗಳು 2020ರಲ್ಲಿ ಆರಂಭಿಸಿದ ಸೀಡ್ಸ್ ಆಫ್ ಹೋಪ್ ಸಂಘಟನೆಯಲ್ಲಿ ಈಗ 14 ಮಂದಿ ಸದಸ್ಯರು ಇದ್ದಾರೆ. ಈ ಹಿಂದೆ ಪುತ್ತೂರು ಮತ್ತು ಕಾರ್ಕಳದಲ್ಲಿ ಶಿಬಿರ ಆಯೋಜಸಿ 300 ಮಂದಿಯಿಂದ ಕೂದಲು ಸಂಗ್ರಹ ಮಾಡಿ 15 ವಿಗ್‌ ವಿತರಿಸಲಾಗಿದೆ. ಪ್ರತಿ ವಿಗ್ ತಯಾರಿಸಲು 8ರಿಂದ 10 ದಾನಿಗಳ ಕೂದಲು ಅಗತ್ಯ. ಒಂದು ವಿಗ್‌ ತಯಾರಿಕೆಗೆ ₹ 8 ಸಾವಿರದಿಂದ ₹ 10 ಸಾವಿರ ವೆಚ್ಚವಾಗುತ್ತದೆ. 

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಸಲಹೆಗಾರ ರಮೇಶ್ ಕೆ ಅಧ್ಯಕ್ಷತೆ ವಹಿಸಿದ್ದರು. ಜೀವನ ಕೌಶಲ ತರಬೇತುಗಾರ್ತಿ ವಂದನಾ ಕಾಮತ್‌, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ರೋಹನ್ ಚಂದ್ರ ಗಟ್ಟಿ, ಮುಳಿಯ ಫೌಂಡೇಷನ್‌ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ‘ಸೀಡ್ಸ್ ಆಫ್‌ ಹೋಪ್’ನ ಆದ್ಯ ಸುಲೋಚನಾ, ಕನ್ಯಾ ಶೆಟ್ಟಿ, ಸೃಜನ್ ಕೃಷ್ಣ, ಶ್ರೀಲತಾ ಕಾಮತ್ ಮತ್ತು ಪ್ರದ್ಯುಮ್ನ ರಾವ್ ಇದ್ದರು.

ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ: ಡಾ.ರೋಹನ್‌ಚಂದ್ರ

ಕ್ಯಾನ್ಸರ್‌ ಚಿಕಿತ್ಸೆಯ ಮೂರು ಘಟ್ಟಗಳಲ್ಲಿ ಪ್ರಮುಖವಾದದ್ದು ಕಿಮೊಥೆರಪಿ. ಈ ಸಂದರ್ಭದಲ್ಲಿ ಜೀವಕೋಶಗಳು ನಾಶವಾಗಿ ಕೂದಲು ಉದುರುತ್ತದೆ. ಎಲ್ಲ ಪ್ರಕ್ರಿಯೆ ಪುರ್ಣಗೊಂಡಾಗ ಕೂದಲು ಪೂರ್ತಿ ಉದುರುತ್ತದೆ. ಅದು ಸಹಜ ಸ್ಥಿತಿಗೆ ಬರಲು ತುಂಬ ಸಮಯ ಬೇಕಾಗುತ್ತದೆ. ಗುಣಮುಖರಾದ ರೋಗಿ ಈ ಅವಧಿಯಲ್ಲಿ ಮುಜುಗರದಲ್ಲಿ ದಿನದೂಡುತ್ತಾರೆ. ವಿಗ್ ಧರಿಸುವುದರಿಂದ ಮುಜುಗರವನ್ನು ಇಲ್ಲದಾಗಿಸಬಹುದು. ವಿಗ್ ತಯಾರಿಸಲು ಕೂದಲು ಬೇಕು. ಇದಕ್ಕಾಗಿ ಕೂದಲು ಸಂಗ್ರಹಿಸಲು ವಿದ್ಯಾರ್ಥಿ ಸಮೂಹ ಆಸಕ್ತಿ, ಕಾಳಜಿ ವಹಿಸಿರುವುದು ಅಭಿನಂದನೀಯ ಕಾರ್ಯ. ಈ ಕಾರ್ಯದ ಮೂಲಕ ಅವರು ಕ್ಯಾನ್ಸರ್‌ನಿಂದ ಗುಣಮುಖರಾದವರ ಸಮಸ್ಯೆ ಬಗ್ಗೆ ಮತ್ತು ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ಸಮಾಜ ಪರಿವರ್ತನೆಯಲ್ಲಿ ದೊಡ್ಡ ಪಾತ್ರ ವಹಿಸಲು ನೆರವಾಗಬಹುದು.

- ಡಾ.ರೋಹನ್ ಚಂದ್ರ ಗಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ವೈದ್ಯ

 ಈ ವರೆಗೆ ನಾನೇನಾದರೂ ಖರ್ಚು ಮಾಡಿದ್ದರೆ ಅದೆಲ್ಲವೂ ಪಾಲಕರ ಸಂಪಾದನೆ. ಇವತ್ತು, ನನ್ನದೇ ತಲೆಯಲ್ಲಿ ಬೆಳೆದ ಕೂದಲನ್ನು ಮನತುಂಬಿ ದಾನ ಮಾಡಿದ್ದೇನೆ. ಕೂದಲು ಸೌಂದರ್ಯಕ್ಕಾಗಿ ಮಾತ್ರ ಇರುವುದು. ದಾನ ಮಾಡಿದ ಕೂದಲು ಮತ್ತೆ ಬೆಳೆಯುತ್ತದೆ. ಆದ್ದರಿಂದ ಇದರಲ್ಲಿ ಕಳೆದುಕೊಳ್ಳುವಂಥಾದ್ದು ಏನೂ ಇಲ್ಲ.
- ಮೌನ, ವಿದ್ಯಾರ್ಥಿನಿ–ದಾನಿ

ತುಂಬ ಖುಷಿಯಿಂದ ಕೂದಲು ದಾನ ಮಾಡಿದ್ದೇನೆ. ದಾನದ ನಂತರ ಮನಸ್ಸು ತುಂಬಿ ಬಂದಿದೆ. ಕೂದಲು ಸ್ವಲ್ಪ ಕಡಿಮೆಯಾದರೂ ಯಾವ ಬಗೆಯ ಬೇಸರವೂ ಆಗಲಿಲ್ಲ. ಕ್ಯಾನ್ಸರ್‌ ರೋಗಿಗಳು ನಾವು ಬದುಕುವ ಸಮಾಜದಲ್ಲೇ ಬದುಕುವವರು. ಅವರಿಗೆ ನಾವಲ್ಲದೆ ಬೇರೆ ಯಾರೂ ದಾನ ಮಾಡಲು ಆಗದು.
- ಶ್ರೀಜ, ಅಧ್ಯಾಪಕಿ–ದಾನಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.