ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸಲು ಪ್ರೇರಿಸುವ ‘ಮಾಸ್ಕೆಟೀಯರ್ಸ್’

ಕೊರೊನಾ ವೈರಸ್‌ ನಿಯಂತ್ರಣಕ್ಕೆ ವಿದ್ಯಾರ್ಥಿಗಳ ಅಭಿಯಾನ
Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ಕೊರನಾ ಸೋಂಕು ವ್ಯಾಪಕವಾಗಿರುವ ಸಂದರ್ಭದಲ್ಲಿ ಮುಖಗವಸು ಧರಿಸುವ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಇಲ್ಲಿನ ಸೇಂಟ್ ಆಗ್ನೆಸ್‌ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳ ತಂಡ ವಿಶೇಷ ಅಭಿಯಾನ ಆರಂಭಿಸಿದೆ.

ವಿಶೇಷವಾಗಿ ಸಾರ್ವಜನಿಕ ಸ್ಥಳಗಳು, ಅದರಲ್ಲೂ ಯುವಪೀಳಿಗೆಗೆ ಮಾಸ್ಕ್‌ ಧರಿಸಲು ಪ್ರೇರಣೆ ನೀಡುವ ಉದ್ದೇಶದಿಂದ ‘#IAMMASKETEER’ ಅಭಿಯಾನ ಶುರು ಮಾಡಿದ್ದು, ತಮ್ಮ ಕುಟುಂಬದವರು, ಪ್ರೀತಿ–ಪಾತ್ರರು ಮತ್ತು ಸುತ್ತಲಿನ ಜನರ ಸುರಕ್ಷತೆ ಮತ್ತು ರಕ್ಷಣೆಗಾಗಿ ಮುಖಗವಸುಗಳನ್ನು ಧರಿಸುವುದರ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಈ ಅಭಿಯಾನದ ಮೂಲಕ ನಾಗರಿಕರು ಮುಖಗವಸು ಧರಿಸುವುದಷ್ಟೇ ಅಲ್ಲ, ತಮ್ಮ ಮುಖಗವಸುಗಳನ್ನು ತಾವೇ ತಯಾರಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

‘ಕೋವಿಡ್‌–19 ರೋಗದಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸುವುದು ಅತ್ಯಂತ ಅವಶ್ಯಕ. ಆದರೆ, ತಮ್ಮ ಮುಖ ಮುಚ್ಚುತ್ತದೆ ಎಂಬ ಕಾರಣಕ್ಕೆ ಕೆಲ ಯುವಕರು ಮಾಸ್ಕ್‌ ಧರಿಸಲು ಹಿಂದೇಟು ಹಾಕುತ್ತಾರೆ. ಇದು ಅತ್ಯಂತ ಅಪಾಯಕಾರಿ. ಇಂತಹ ಜನರ ಮನೋಭಾವ ಬದಲಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ಸೇಂಟ್ ಆಗ್ನೆಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಂಸರಾಜ್‌ ಗಟ್ಟಿ.

ಈ ಕಾರ್ಯಕ್ಕೆ ಬೆಂಬಲ ನೀಡಿರುವ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ವೆನಿಸ್ಸಾ, ‘ವಿದ್ಯಾರ್ಥಿಗಳ ಈ ಪ್ರಯತ್ನ ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಅಭಿಯಾನದ ಮೂಲಕ ತಮ್ಮವರು ಹಾಗೂ ಇತರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಸ್ಕ್‌ ತಯಾರಿಸಿ ಅಭಿಯಾನ

‘ಮಾಸ್ಕೇಟೀಯರ್ಸ್‌’ ಅಭಿಯಾನದ ಭಾಗವಾಗಿರುವ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಕ್ರಿಸ್ತಾ ಮೇರಿ ಒಂದು ಹೆಜ್ಜೆ ಮುಂದೆ ಹೋಗಿ, ಸ್ವತಃ ಮಾಸ್ಕ್‌ ತಯಾರಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಅತ್ತಿಗೆಯಿಂದ ಮಾಸ್ಕ್ ಹೊಲೆಯುವುದನ್ನು ಕಲಿತೆ. ಆರಂಭದಲ್ಲಿ ಮನೆಯವರಿಗಾಗಿ ಮಾಸ್ಕ್‌ ಸಿದ್ಧಪಡಿಸಿದೆ. ಇದೀಗ ಅಗತ್ಯ ಇರುವವರಿಗಾಗಿ ಮಾಸ್ಕ್‌ ತಯಾರಿಸುತ್ತಿದ್ದೇನೆ’ ಎಂದು ಕ್ರಿಸ್ತಾ ಮೇರಿ ಹೇಳುತ್ತಾರೆ.

ಕೋಟ್‌

ಸ್ವಯಂರಕ್ಷಣೆಗೆ ಆಯುಧ ಬಳಸುವ ಯೋಧ ಎಂಬ ಅರ್ಥ ಕೊಡುವ ‘ಮಸ್ಕೆಟೀ’ ಶಬ್ದದಿಂದ ಪ್ರೇರಿತರಾಗಿ ‘ಮಾಸ್ಕೇಟೀಯರ್ಸ್‌’ ಅಭಿಯಾನ ಆರಂಭಿಸಿದೆವು.

ಹಂಸರಾಜ್‌ ಗಟ್ಟಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT