ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವಿಕೃತೀಕರಣ: ಪುಂಡಿಕಾಯಿ

ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇತಿಹಾಸ ಪರಂಪರೆ ಉಳಿಸಿ ಕಾರ್ಯಕ್ರಮ
Last Updated 18 ಸೆಪ್ಟೆಂಬರ್ 2019, 13:54 IST
ಅಕ್ಷರ ಗಾತ್ರ

ಮಂಗಳೂರು: ‘ಇತಿಹಾಸದ ಪ್ರಜ್ಞೆ ಇಲ್ಲದೇ ನಡೆಯುವ ಪ್ರಕ್ರಿಯೆಗಳಿಂದ ಕರಾವಳಿಯಲ್ಲಿ ಸಾಂಸ್ಕೃತಿಕ ವಿಕೃತೀಕರಣವು ಹೆಚ್ಚಾಗುತ್ತಿದೆ’ ಎಂದು ಇತಿಹಾಸ ಸಂಶೋಧಕ ಪುಂಡಿಕಾಯಿ ಗಣಪಯ್ಯ ಭಟ್‌ ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗವು ಆಯೋಜಿಸಿದ ‘ಇತಿಹಾಸ ಪರಂಪರೆ ಉಳಿಸಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಪರಂಪರೆ, ಇತಿಹಾಸ, ಸ್ಥಳೀಯ ಅಧ್ಯಯನ ಇಲ್ಲದವರು ಮೌಢ್ಯದಲ್ಲಿ ಏನೋ ಸಲಹೆ ನೀಡುತ್ತಾರೆ. ಅದರಂತೆ ನಮ್ಮದೇ ಪರಂಪರೆಯನ್ನು ಕೆಡವಿ ಇನ್ನೇನೋ ಕಟ್ಟುತ್ತಿದ್ದೇವೆ. ನಮ್ಮ ಪರಂಪರೆ, ಇತಿಹಾಸವನ್ನು ಜ್ಯೋತಿಷ್ಯ, ಮೌಢ್ಯ, ಭಕ್ತಿ ಮತ್ತಿತರ ಹೆಸರಿನಲ್ಲಿ ನಾವೇ ನಾಶ ಮಾಡಬಾರದು’ ಎಂದರು.

‘ನಮ್ಮ ಇತಿಹಾಸದ ಬಗ್ಗೆ ನಾವೇ ಜಾಣ ಮರೆವು ಮಾಡುತ್ತಿದ್ದೇವೆಯೋ? ಅಥವಾ ಗೊಂದಲಗಳಿಂದಾಗಿ ಹೀಗಾಗುತ್ತಿದೆಯೇ? ಆಧುನಿಕತೆಯ ಅತಿ ಆಸಕ್ತಿಯಿಂದ ಹೀಗಾಗುತ್ತಿದೆಯೋ? ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ, ನಮ್ಮ ಪರಂಪರೆ ಇತಿಹಾಸವನ್ನು ಉಳಿಸಿಕೊಂಡು ಮುನ್ನಡೆದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

‘ಇತಿಹಾಸದ ಬಗ್ಗೆ ಅವಜ್ಞೆ, ಅಸಡ್ಡೆ, ಜಾಣ ಮೆರವಿನ ಕಾರಣದಿಂದಾಗಿ ನಿರ್ಲಕ್ಷ್ಯವು ಹೆಚ್ಚಾಗುತ್ತಿದೆ. ಇದು ನಮ್ಮನ್ನೇ ನಾವು ನಾಶಪಡಿಸುವಂತಿದೆ’ ಎಂದರು.

ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ,‘ನಮ್ಮ ಇತಿಹಾಸವನ್ನು ನಾವು ಪ್ರೀತಿ–ವಿಶ್ವಾಸದಿಂದ ನೋಡಬೇಕು. ಆ ಬಗ್ಗೆ ನಾವೇ ವಿಮರ್ಶೆ –ವಿಶ್ಲೇಷಣೆ ಮಾಡಿಕೊಳ್ಳಬೇಕು. ಆಗ ನಾವು ಉತ್ತಮ ಹೆಜ್ಜೆ ಇಡಲು ಸಾಧ್ಯ’ ಎಂದರು.

‘ಪರಂಪರೆಯ ಅರಿವು ಹಾಗೂ ಸ್ಥಳೀಯತೆಯ ಬಗ್ಗೆ ಒಲವು ಇರಬೇಕು. ಮೂಢನಂಭಿಕೆ, ಜ್ಯೋತಿಷ್ಯ, ಭವಿಷ್ಯ ಕೇಳಿ ನಮ್ಮ ಪರಂಪರೆಯ ಕುರುಹುಗಳನ್ನು ನಾವೇ ನಾಶ ಮಾಡಬಾರದು’ ಎಂದರು.

‘ದಾಖಲಾಗಿರುವ ಇತಿಹಾಸವನ್ನು ತಿದ್ದಬೇಕು– ತಿದ್ದಬಾರದು ಎಂಬ ಎರಡು ವಾದಗಳಿವೆ. ಹೀಗಾಗಿ, ವಿದ್ಯಾರ್ಥಿಗಳು ಸತತ ಅಧ್ಯಯನ, ಅರಿವು ಹಾಗೂ ಸೂಕ್ಷ್ಮ ಪ್ರಜ್ಞೆಯ ಮೂಲಕ ಇತಿಹಾಸದ ಅಧ್ಯಯನ ಮಾಡಿ ಹೆಜ್ಜೆ ಇಡಬೇಕು’ ಎಂದರು.

ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ. ಮಾತನಾಡಿ, ‘ಜಿಲ್ಲೆಯು ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿದ್ದು, ಇಲ್ಲಿನ ಹಾಗೂ ವಿಶ್ವವಿದ್ಯಾಲಯ ಕಾಲೇಜಿಗೆ ಸಂಬಂಧಿಸಿದ ಮಾಹಿತಿಗಳು ಚೆನ್ನೈನಲ್ಲಿರುವ ಪತ್ರಾಗಾರದಲ್ಲಿದೆ. ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಅಧ್ಯಯನ ನಡೆಸಬೇಕು’ ಎಂದರು.

‘ಇತಿಹಾಸದ ಅಧ್ಯಯನ ಮತ್ತು ಅರಿವು ವೃತ್ತಿಗಿಂತಲೂ ಹೆಚ್ಚಾಗಿ ಪ್ರತಿಯೊಬ್ಬರ ಪ್ರವೃತ್ತಿಯಾಗಬೇಕು’ ಎಂದು ಆಶಿಸಿದರು.

ಸ್ನಾತಕ ಇತಿಹಾಸ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಸಿ., ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಡಾ.ಗಣಪತಿ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT