ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಸಂಘಸಂಸ್ಥೆ, ಸ್ಥಳೀಯರಿಂದ ಸಂಪರ್ಕ ಬೆಸೆಯುವ ಕಾರ್ಯ

Last Updated 7 ಆಗಸ್ಟ್ 2022, 6:25 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕು ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆ ಮುಂದುವರಿದಿದ್ದು, ಶನಿವಾರವೂ ದಿನವಿಡೀ ಸುರಿಯಿತು.

ಸುಳ್ಯ ತಾಲೂಕಿನಾದ್ಯಂತ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಮುಂದುವರಿದಿದೆ. ನದಿ, ತೋಡು, ಹಳ್ಳಗಳಲ್ಲಿ ನೀರಿನ ಮಟ್ಟದ ಹೆಚ್ಚಿದ್ದು, ಹೊಳೆ ಅಕ್ಕ-ಪಕ್ಕದ ಪ್ರದೇಶಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಶನಿವಾರ ಬೆಳಿಗ್ಗೆ ವೇಳೆ ಜಲಾವೃತಗೊಂಡಿದ್ದು, ಬಳಿಕ ನೀರಿನ ಮಟ್ಟ ಇಳಿಕೆಗೊಂಡಿದೆ.

ಸಂಪರ್ಕ ಬೆಸೆಯುವ ಕಾರ್ಯ: ಭಾರಿ ಮಳೆಗೆ ನಲುಗಿದ್ದ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಹಾಗೂ ಬಾಳುಗೋಡು ಭಾಗದಲ್ಲಿ ಸಂಪರ್ಕ ಕಡಿತಗೊಂಡ ಕಡೆಗಳಲ್ಲಿ ಸಂಪರ್ಕ ಬೆಸೆಯುವ ಕಾರ್ಯ ಸಂಘಸಂಸ್ಥೆಗಳ, ಸ್ಥಳೀಯರ ಸಹಕಾರದಲ್ಲಿ ನಡೆಯುತ್ತಿದೆ.

ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸೇವಾಭಾರತಿ, ಸ್ಥಳೀಯರ ಸಹಕಾರದಲ್ಲಿ ಪಾಲನಿರ್ಮಾಣ ಕಾರ್ಯವನ್ನು ತಡರಾತ್ರಿ ವರೆಗೂ ನಿರ್ವಹಿಸಿ ಆ ಭಾಗದ ಸುಮಾರು 12 ಮನೆಗಳಿಗೆ ಸಂಪರ್ಕ ಬೆಸೆಯುವ ಕಾರ್ಯ ನಡೆಸಿದ್ದಾರೆ. ತಾಲ್ಲೂಕಿನ ಎಲ್ಲಾ ಕಡೆಗಳಲ್ಲೂ ಸಂಪರ್ಕ ಕಡಿತ ಕಡೆಗಳಲ್ಲಿ ಸಂಪರ್ಕ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಮಳೆ ಇಳಿಮುಖ: ಕಲ್ಮಕಾರು, ಹರಿಹರ ಪಲ್ಲತ್ತಡ್ಕ ಭಾಗದಲ್ಲಿ ಎರಡು ದಿನಗಳಿಂದ ಮಳೆಯ ಬಿರುಸು ಕಡಿಮೆ ಮಾಡಿದ್ದು, ಹೊಳೆ, ತೋಡುಗಳಲ್ಲಿ ನೀರಿನ ಮಟ್ಟ ಇಳಿಕೆಗೊಂಡಿದೆ. ಸೇವಾ ಕಾರ್ಯ, ಸಂಪರ್ಕ ಕೆಲಸಗಳು ಇದರಿಂದ ವೇಗ ಪಡೆದಿದೆ. ಗ್ರಾಮಗಳಲ್ಲಿ ಆಗಿರುವ ಹಾನಿಗಳ ಬಗ್ಗೆ ಮಾಹಿತಿ ಕಲೆಹಾಕುವ ಕಾರ್ಯವನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಪರಿಹಾರ ನೀಡುವ ಕಾರ್ಯವೂ ವೇಗ ಪಡೆದಿದೆ. ನೆರೆ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಆಹಾರ ಪೂರೈಸುವ ಕಾರ್ಯ ನಡೆಯುತ್ತಿದೆ.

ನೆರವಿಗೆ ಮನವಿ: ಮಳೆಯಿಂದ ಸಂತ್ರಸ್ತರಾಗಿರುವ ಜನರಿಗೆ ನೆರವು ನೀಡಲು ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ಈಗಾಗಲೇ ಆಹಾರ ಕಿಟ್ ಸೇರಿದಂತೆ ಇತರೆ ನೆರವು ನೀಡುತ್ತಿರುವುದು ನಡೆಯುತ್ತಿದೆ. ಸ್ವಯಂ ಸೇವಕರಾಗಿ ಸೇರಿದಂತೆ ಇತರೆ ಕಾರ್ಯಗಳಿಗೆ ಮಳೆಹಾನಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರು ತೆರಳಬಹುದಾಗಿದೆ ಹಾಗೂ ಅಲ್ಲಿನ ಜನರಿಗೆ ನೆರವಾಗಬಹುದು’ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕನ್ನಡಿಹೊಳೆ ಸೇತುವೆ ಬದಿ ಕುಸಿತ

ಸುಬ್ರಹ್ಮಣ್ಯ: ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕನ್ನಡಿ ಹೊಳೆ ಸೇತುವೆ ಒಂದು ಬದಿ ಕುಸಿತ ಉಂಟಾಗಿದೆ.

ಸುಬ್ರಹ್ಮಣ್ಯ-ಗುತ್ತಿಗಾರ ಸಂಪರ್ಕ ರಸ್ತೆಯ ಕನ್ನಡಿ ಹೊಳೆ ಸೇತುವೆಗೆ ಕೆಲ ದಿನಗಳ ಹಿಂದೆ ಸುರಿದ ಮಳೆಯ ನೆರೆ ನೀರಿಗೆ ಸೇತುವೆಯ ಒಂದು ಬದಿಯ ತಡೆಗೋಡೆಗೆ ಹಾನಿಯಾಗಿದ್ದು, ಅಲ್ಪ ಕುಸಿತ ಕಂಡಿದೆ. ಕುಸಿತ ಭಾಗಕ್ಕೆ ದೇವಳದ ವತಿಯಿಂದ ಕಲ್ಲುಗಳನ್ನು ಹಾನಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT