ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ದೇಶ ಭಕ್ತಿ ಪಾಠ ಕಲಿಯಬೇಕಿಲ್ಲ: ವಿ.ಆರ್‌.ಸುದರ್ಶನ್‌

’ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು ಖಚಿತ’
Last Updated 5 ಏಪ್ರಿಲ್ 2019, 12:48 IST
ಅಕ್ಷರ ಗಾತ್ರ

ಮಂಗಳೂರು: ದೇಶ ಭಕ್ತಿಯ ಬಗ್ಗೆ ಬಿಜೆಪಿಯಿಂದ ಕಾಂಗ್ರೆಸ್‌ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಬಿಜೆಪಿ ದೇಶದ ಅಧಿಕಾರದ ಚುಕ್ಕಾಣೆ ಹಿಡಿದಾಗಲೆಲ್ಲ ಭಯೋತ್ಪಾದನೆ ಕೃತ್ಯಗಳು ಹೆಚ್ಚು ನಡೆದಿವೆ. ಕಾರ್ಗಿಲ್‌ ಯುದ್ಧ, ಕಂದಹಾರ್ ಘಟನೆ, ಸಂಸತ್‌ ಮೇಲೆ ದಾಳಿ ನಡೆದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌ ಹೇಳಿದರು.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಪ್ರಣಾಳಿಕೆ ‘ಕಾಂಗ್ರೆಸ್ ಅನುಷ್ಠಾನಕ್ಕೆ ತರಲಿದೆ’ ಬಿಡುಗಡೆ ಮಾಡಿ ಮಾತನಾಡಿದ ಅವರು,‘ಬಿಜೆಪಿಯಿಂದ ದೇಶದಲ್ಲಿ ದ್ವೇಷ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಾರಿ ಲೋಕಸಭಾ ಚುನಾಚಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ಗೆಲುವು ಸಾಧಿಸಲಿದೆ’ ಎಂದರು.

ಗೋಧ್ರಾ ಹತ್ಯಾಕಾಂಡ, ಸಾಬರ್‌ಮತಿ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಸ್ಫೋಟ, ಅಕ್ಷರಧಾಮ, ರಘುನಾಥ ದೇವಾಲಯಗಳ ಮೇಲಿನ ದಾಳಿ ಇವೆಲ್ಲ ಬಿಜೆಪಿ ಆಡಳಿತದ ಕಾಲದಲ್ಲಿಯೇ ನಡೆದಿವೆ. ಬಾಲಾಕೋಟ್‌ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಇದೀಗ ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿಯ ಪಾಠ ಹೇಳಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಪ್ಪು ಹಣ, ಭಯೋತ್ಪಾದನೆ, ನಕ್ಸಲೀಯ ಚಟುವಟಿಕೆ, ಖೋಟಾ ನೋಟು ಇವೆಲ್ಲವನ್ನು ಮಟ್ಟ ಹಾಕುವುದಕ್ಕೆ ನೋಟುಗಳ ಅಮಾನ್ಯೀಕರಣ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಪ್ಪುಹಣ, ಭಯೋತ್ಪಾದನೆ ಕಡಿಮೆಯಾಗಿದೆಯೇ ಎಂದು ಪ್ರಧಾನಿ ಲೆಕ್ಕ ಕೊಡಲಿ. ನೋಟು ನಿಷೇಧದ ಬಳಿಕ ಭಯೋತ್ಪಾದನೆ ಕಡಿಮೆಯಾಗಿಲ್ಲ. ಬದಲಿಗೆ ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆ ಹೆಚ್ಚಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಕೂಡ ಕೇಂದ್ರ ಸರರ್ಕಾರ ಮಾಡಿಲ್ಲ. ಬಿಜೆಪಿಗೆ ಭಯೋತ್ಪಾದನೆ ಜೀವಂತವಾಗಿರುವುದು ಬೇಕಾಗಿದೆ. ಮೋದಿ ಅವರು ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರಕ್ಷಣಾ ಇಲಾಖೆ ಆಧುನೀಕರಣವಾಗಿಲ್ಲ. ಆದರೆ, ರಫೇಲ್ ದುಡ್ಡು ಆಧುನೀಕರಣಗೊಂಡಿದೆ. ಯುಪಿಎ ಸರ್ಕಾರವು ₹20,000 ಕೋಟಿ ವೆಚ್ಚದಲ್ಲಿ ಮಾಡಿದ ಒಪ್ಪಂದದ ಮೊತ್ತವನ್ನು ಬಿಜೆಪಿ ಸರ್ಕಾರ ₹ 60,000 ಕೋಟಿಗೆ ಏರಿಕೆ ಮಾಡಿದೆ. ಉಳಿದ ಹಣ ಯಾರ ಜೇಬಿಗೆ ಬಿತ್ತು ಎಂಬುದನ್ನು ಪ್ರಧಾನಿ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ದ್ವೇಷದ ವಾತಾವರಣ: ಕಾಂಗ್ರೆಸ್ ಸರ್ಕಾರ ದೇಶಕ್ಕೆ ಪ್ರಗತಿಪರ ಕಾನೂನುಗಳನ್ನು ನೀಡಿದೆ. ಆದರೆ ಮೋದಿ ಸರ್ಕಾರ ಜನವಿರೋಧಿ ಮಾತ್ರವಲ್ಲದೆ ರೈತ ವಿರೋಧಿ ಕೂಡ ಆಗಿದೆ. ಮೋದಿ ಅವರು ಸಂಸತ್‌ನಲ್ಲಿ ಹೇಳಬೇಕಾದನ್ನು ಸಂಸತ್‌ನ ಹೊರಗೆ ಹೇಳುತ್ತಿದ್ದಾರೆ. ಬಿಜೆಪಿಯಿಂದ ಸಂಸತ್‌ನ ಮಹತ್ವ ಕಡಿಮೆಯಾಗಿದೆ ಎಂದು ಟೀಕಿಸಿದರು.

ಜಿಡಿಪಿ ಪ್ರಮಾಣ ಶೇ1.5 ನಷ್ಟ: ದೇಶದಲ್ಲಿ ನೋಟು ನಿಷೇಧ ಮಾಡಿರುವುದರಿಂದ ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣದಲ್ಲಿ ಶೇಕಡ 1.5ರಷ್ಟು ನಷ್ಟ ಉಂಟಾಗಿದ್ದು, ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಮರಸ್ಯ ಹಾಳಾಗಿದೆ. ಈ ಸ್ಥಿತಿಗೆ ಇರುವಂತಹ ಸ್ಥಿತಿಯನ್ನು ಮೋದಿಯೇ ಕಾರಣ ಎಂದು ಅವರು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜಂಟಿ ಚುನಾವಣಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಕಾಂಗ್ರೆಸ್‌ ಮುಖಂಡರಾದ ಎಂ.ಬಿ.ಸದಾಶಿವ, ಎ.ಸಿ.ವಿನಯರಾಜ್ ಮತ್ತು ಸಂತೋಷ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT