ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್ ಟೋಲ್ ಗೇಟ್ ಅಧಿಕೃತ: ಸಂಸದ ನಳಿನ್‌ಕುಮಾರ್ ಕಟೀಲ್

ತಾಂತ್ರಿಕ ತೊಡಕು ಬಗೆಹರಿಸಲು ಪ್ರಯತ್ನ
Last Updated 26 ಫೆಬ್ರುವರಿ 2022, 12:44 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಪ್ಲಾಜಾ ಜತೆ ವಿಲೀನ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾನೂನಾತ್ಮಕ ತೊಡಕು ಬಗೆಹರಿದ ಮೇಲೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ ಎಂಬ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗೆಜೆಟ್‌ ನೋಟಿಫಿಕೇಶನ್‌ನಲ್ಲಿ ಈ ಬಗ್ಗೆ ದಾಖಲೆ ಇದೆ. 60 ಕಿ.ಮೀ ಅಂತರದಲ್ಲಿ ಒಂದು ಟೋಲ್ ಇರಬೇಕು ಎಂಬ ನಿಯಮವಿದ್ದರೂ ವಿಶೇಷ ಪ್ರಕರಣಗಳಲ್ಲಿ ಅದಕ್ಕಿಂತ ಕಡಿಮೆ ಅಂತರದಲ್ಲಿ ಟೋಲ್ ಅಳವಡಿಸಲು ಅವಕಾಶ ಇದೆ’ ಎಂದರು.

‘ಬ್ರಹ್ಮರಕೂಟ್ಲು- ಸುರತ್ಕಲ್ ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ₹ 383 ಕೋಟಿ ವೆಚ್ಚವಾಗಿದೆ. ಈವರೆಗೆ ₹ 229 ಕೋಟಿ ಸಂಗ್ರಹವಾಗಿದೆ. ಪೂರ್ಣ ಮೊತ್ತ ಸಂಗ್ರಹವಾಗುವವರೆಗೆ ಇದನ್ನು ಇಡಬೇಕಾಗುತ್ತದೆ. ಬೈಪಾಸ್, ಮೇಲ್ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳು ಇದ್ದಾಗ, ಯೋಜನಾ ವೆಚ್ಚ ಪರಿಗಣಿಸಿ, 60 ಕಿ.ಮೀ ಒಳಗೆ ಟೋಲ್ ಅಳವಡಿಸಲು ಅವಕಾಶವಿದೆ. ಸುರತ್ಕಲ್ ಟೋಲ್ ಅನ್ನು ವಿಲೀನಗೊಳಿಸುವಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಈ ಸಂಬಂಧ ಸ್ಟೇಕ್ ಹೋಲ್ಡರ್ಸ್ ಸಭೆ ನಡೆಸಲಾಗುತ್ತದೆ. ಇವೆಲ್ಲವನ್ನು ಪರಿಶೀಲಿಸಿ, ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಹೆದ್ದಾರಿ ನಿರ್ಮಾಣಕ್ಕೆ ಆದೇಶ: ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮತ್ತು ಅವುಗಳ ನಡುವಿನ ಸೇತುವೆ ನಿರ್ಮಾಣ ಕಾಮಗಾರಿಗೆ ಆದೇಶವಾಗಿದೆ. ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮವು ಫೆ.28ರ ಸಂಜೆ 4 ಗಂಟೆಗೆ ನಡೆಯಲಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವರು ಎಂದುನಳಿನ್‌ಕುಮಾರ್ ತಿಳಿಸಿದರು.

ಎನ್‌.ಎಚ್ 75 ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಅಡ್ಡಹೊಳೆಯಿಂದ ಪೆರಿಯಶಾಂತಿವರೆಗೆ ₹ 442.97 ಕೋಟಿಯಲ್ಲಿ 15.13 ಕಿ.ಮೀ, ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಿಯಶಾಂತಿಯಿಂದ ಬಂಟ್ವಾಳದವರೆಗೆ ಚತುಷ್ಪಥ ಹಾಗೂ ಕಲ್ಲಡ್ಕದ ಬಳಿ ಷಟ್ಪಥ ಫ್ಲೈ ಓವರ್ ಸೇರಿ ಅಂದಾಜು ನಿರ್ಮಾಣ ವೆಚ್ಚ ₹ 1480 ಕೋಟಿಯಲ್ಲಿ 48.4 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬಿಕರ್ನಕಟ್ಟೆಯಿಂದ ಸಾನೂರುವರೆಗೆ ಚತುಷ್ಪಥ ರಸ್ತೆ 45.12 ಕಿ.ಮೀ ಅಂತರದಲ್ಲಿ ₹ 1137 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕೆಲವೆಡೆ ಹೆಚ್ಚುವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಿ.ಸಿ ರೋಡ್‌ನಿಂದ ಕೊಟ್ಟಿಗೆಹಾರ ರಸ್ತೆಯಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗೆ ₹ 159 ಕೋಟಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT