ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್‌–ಹೆಜಮಾಡಿ ಟೋಲ್‌ಗೇಟ್‌ ವಿಲೀನ ಒಪ್ಪಲಾಗದು: ಕ್ಯಾಬ್‌ ಅಸೊಸಿಯೇಷನ್‌

ಟೋಲ್‌ ಸಂಗ್ರಹ ಸಂಪೂರ್ಣ ಕೈಬಿಡಲು ಒತ್ತಾಯ
Last Updated 15 ನವೆಂಬರ್ 2022, 10:13 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೊಸಿಯೇಷನ್‌ ವತಿಯಿಂದ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್‌ ಕುಂಪಲ, ‘ಸುರತ್ಕಲ್‌ ಟೋಲ್‌ಗೇಟ್‌ ಅನ್ನು ಹೆಜಮಾಡಿ ಟೋಲ್‌ಗೇಟ್‌ ಜೊತೆ ವಿಲೀನ ಮಾಡುವ ಪ್ರಸ್ತಾವ ವಿರೋಧಿಸುತ್ತೇವೆ. ಟೋಲ್‌ ಸಂಪೂರ್ಣ ರದ್ದಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೇಂದ್ರ ರೈಲು ನಿಲ್ದಾಣ ಮತ್ತು ಕಂಕನಾಡಿ ಜಂಕ್ಷನ್‌ ರೈಲು ನಿಲ್ದಾಣಗಳಿಗೆ 50ಕ್ಕೂ ಹೆಚ್ಚು ಬಸ್‌ಗಳು ಹೋಗುತ್ತಿವೆ. ರೈಲು ಬರುವ ಸಂದರ್ಭದಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲುತ್ತವೆ. ನೆಟ್ಟಣ ರೈಲು ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಅಕ್ರಮವಾಗಿ ಟ್ರಿಪ್‌ ನಡೆಸುತ್ತಿವೆ. ಇದರಿಂದ ಟ್ಯಾಕ್ಸಿ ಬಾಡಿಗೆಗೆ ಪೆಟ್ಟು ಬೀಳುತ್ತಿದೆ. ನಾವು ತೆರಿಗೆ, ಸೆಸ್‌ ಕಟ್ಟುತ್ತೇವೆ. ಆದರೆ ನಮಗೆ ಬಾಡಿಗೆ ನಡೆಸಲು ಇದ್ದ ಅವಕಾಶಕ್ಕೆಲ್ಲ ಸರ್ಕಾರ ಕಲ್ಲುಹಾಕುತ್ತಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಖಾಸಗಿ ಬಿಳಿ ಬೋರ್ಡ್‌ನ ಕಾರುಗಳು ಕದ್ದುಮುಚ್ಚಿ ಬಾಡಿಗೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಟ್ಯಾಕ್ಸಿ ಚಾಲಕರೇ ಪ್ರಯಾಣಿಕರ ಸೊಗಿನಲ್ಲಿ ಪ್ರಯಾಣಿಸಿ, ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸುತ್ತೇವೆ. ಈ ಬಗ್ಗೆ ದೂರು ನೀಡಿದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಡಿವಾಣ ಹಾಕದಿದ್ದರೆ ಆರ್‌ಟಿಒ ಕಚೇರಿ ಒಳಗೇ ಧರಣಿ ಕುಳಿತುಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

‘ಟ್ಯಾಕ್ಸಿಗಳಲ್ಲಿ ಎರಡೂ ಬದಿ ಹಳದಿ ಸ್ಟಿಕ್ಕರ್‌ ಅಂಟಿಸಬೇಕು ಎಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾನೂನಿನ ಬೆಂಬಲ ಇಲ್ಲ. ಸ್ಟಿಕ್ಕರ್‌ ಅಂಟಿಸದ್ದನ್ನೇ ನೆಪವಾಗಿಸಿ ಟ್ಯಾಕ್ಸಿ ಚಾಲಕರ ಸುಲಿಗೆ ಮಾಡಲಾಗುತ್ತಿದೆ. ಇದು ನಿಲ್ಲಬೇಕು’ ಎಂದರು.

ಸಂಘದ ಕಾರ್ಯಧ್ಯಕ್ಷ ಪ್ರಮೋದ್‌ ಕುಮಾರ್‌ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಆನಂದ ಕೆ., ಸಹ ಸಂಘಟನಾ ಕಾರ್ಯದರ್ಶಿ ಉದಯ್‌ ಕುಮಾರ್‌, ಉಪಾಧ್ಯಕ್ಷರಾದ ಹರೀಶ್‌ ಶೆಟ್ಟಿ ಪ್ರಮುಖರಾದ ದಿನೇಶ ಮಂಗಳಾದೇವಿ, ನಾಗಪ್ಪ ಅಡ್ಯಾರ್‌, ಲೋಕೇಶ್‌ ಕಶೆಕೋಡಿ, ಕರುಣಾಕರ ಕುಂಟಿಕಾನ, ಅಬ್ದುಲ್‌ ಲತೀಫ್‌, ಕಮಲಾಕ್ಷ ಭಾಗವಹಿಸಿದರು.

‘ಪ್ಯಾಕೇಜ್‌ ಪ್ರವಾಸದಿಂದ ನಮ್ಮ ಹೊಟ್ಟೆಗೆ ಹೊಡೆಯದಿರಿ’
‘ಕೊರೋನಾ ಸಂದರ್ಭದಲ್ಲಿ ಬಹುತೇಕರ ಟ್ಯಾಕ್ಸಿಮನ್‌ಗಳ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಈಗ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿರುವಾಗ, ಹಬ್ಬ ಹರಿದಿನಗಳು ಬಂದಾಗ ಕೆಎಸ್‌ಆರ್‌ಟಿಸಿಯಿಂದ ಪ್ರವಾಸಿ ತಾಣಗಳಿಗೆ ಪ್ಯಾಕೇಜ್‌ ಪ್ರವಾಸ ಏರ್ಪಡಿಸಿ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಹೊಟ್ಟೆಗೆ ಹೊಡೆಯಲಾಗುತ್ತಿದೆ’ ಎಂದು ಹರೀಶ್‌ ಕುಂಪಲ ನೋವು ತೋಡಿಕೊಂಡರು

‘ಶಾಸಕ ವೇದವ್ಯಾಸ ಕಾಮತ್‌ ಅವರೇ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರೇ, ನಮ್ಮ ಸಂಘದ ಸದಸ್ಯರ ಶೇ 99ರಷ್ಟು ಕುಟುಂಬಗಳ ಸದಸ್ಯರು ನಿಮಗೆ ಮತ ನೀಡಿದ್ದರು. ನೀವು ನಮ್ಮ ಹೊಟ್ಟೆಗೆ ಹೊಡೆದರೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದರು ಎಚ್ಚರಿಸಿದರು.

‘ಕೆಎಸ್‌ಆರ್‌ಟಿಸಿ ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೆಯೇ, ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯದೆಯೇ ಪ್ಯಾಕೇಜ್‌ ಪ್ರವಾಸ ಹಮ್ಮಿಕೊಂಡಿದೆ. ಇದು ಕಾನೂನು ಬಾಹಿರ’ ಎಂದರು.

‘ಕೊರೋನಾ ಸಂದರ್ಭದಲ್ಲಿ ಯಾವ ವಾಹನವೂ ರಸ್ತೆ ಗಿಳಿಯಲು ಸಿದ್ಧ ಇರಲಿಲ್ಲ. ಆದೆ, ಟ್ಯಾಕ್ಸಿ ಚಾಲಕರು ಜೀವದ ಹಂಗು ತೊರೆದು ಕೊರೋನಾ ನಿಯಂತ್ರಣ ಕಾರ್ಯಕ್ರಮ ಜಾರಿಗೆ ಸರ್ಕಾರಿ ಆಡಳಿತ ಯಂತ್ರದ ಜೊತೆಗೆ ಸಹಕರಿಸಿದ್ದಾರೆ. ಎಷ್ಟೋ ಟ್ಯಾಕ್ಸಿಗಳಿಗೆ ಇನ್ನೂ ಅದರ ಬಾಡಿಗೆ ಪಾವತಿಯಾಗಿಲ್ಲ’ ಎಂದೂ ದೂರಿದರು.

*
ಸಂಘದ ಬೇಡಿಕೆಗಳು

* ಸರ್ಕಾರ ಮತ್ತು ಖಾಸಗಿ ಕಂಪನಿಗಳು ಟೂರಿಸ್ಟ್ ವಾಹನ ಗುತ್ತಿಗೆ ಪಡೆಯುವಾಗ ಸ್ಥಳೀಯ ಟ್ಯಾಕ್ಸಿಗಳಿಗೆ ಆದ್ಯತೆ ನೀಡಬೇಕು.

* ನಗರಕ್ಕೆ ಸೀಮಿತವಾದ ಪರವಾನಗಿ ಹೊಂದಿದ ಆಟೋರಿಕ್ಷಾದವರು ಹೊರ ಜಿಲ್ಲೆಗೆ ಬಾಡಿಗೆ ಮಾಡಬಾರದು

* ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳಿಗೆ ಪೊಲೀಸರ ಕಿರುಕುಳ ತಪ್ಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT