ಗುರುವಾರ , ಡಿಸೆಂಬರ್ 8, 2022
18 °C
ಜಾತ್ಯತೀತ ಪಕ್ಷಗಳ ಜಂಟಿ ವೇದಿಕೆಯ ನಿಯೋಗಕ್ಕೆ ಡಿ.ಸಿ ಭರವಸೆ

ಸುರತ್ಕಲ್‌ ಟೋಲ್ ಗೇಟ್ ತೆರವು: 3 ದಿನಗಳಲ್ಲಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ್ 10 ದಿನಗಳು ಉರುಳಿದ ಬಳಿಕವೂ ಅಲ್ಲಿ ವಾಹನಗಳಿಂದ ಸುಂಕ ಸಂಗ್ರಹಿಸುತ್ತಿರುವ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಜಂಟಿ ವೇದಿಕೆಯ ನಿಯೋಗವು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರನ್ನು ಬುಧವಾರ ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿತು.

‘ನಿಯೋಗವು ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ವಾಹನಗಳಿಂದ ಸುಂಕ ಸಂಗ್ರಹವನ್ನು ಸ್ಥಗಿತಗೊಳಿಸಲು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಸಹಕರಿಸುವಂತೆ ಕೋರಿದ್ದಾರೆ’ ಎಂದು ಜಂಟಿ ವೇದಿಕೆಯ ಪ್ರಕಟಣೆ ತಿಳಿಸಿದೆ.

ಜಂಟಿ ವೇದಿಕೆಯ ಅಧ್ಯಕ್ಷ ಬಿ.ರಮಾನಾಥ ರೈ, ಸಿಪಿಎಂ ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫರ್ನಾಂಡಿಸ್, ಸನ್ನಿ ಡಿಸೋಜಾ, ಜೆಡಿಎಸ್ ನ ವಸಂತ ಪೂಜಾರಿ, ಎಂ.ದೇವದಾಸ್ ಇದ್ದರು.

ಸುರತ್ಕಲ್‌ ಟೋಲ್‌ ಗೇಟ್‌ ರದ್ದತಿಗೆ ಆಗ್ರಹಿಸಿ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯು ಅ.18ರಂದು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿತ್ತು. ಸುಂಕ ವಸೂಲಿ ಸ್ಥಗಿತಗೊಳಿಸಲು ಆ ಬಳಿಕವೂ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಎನ್‌ಐಟಿಕೆ ಪ್ರವೇಶ ದ್ವಾರದ ಬಳಿ ಅ.28ರಿಂದ ಹಗಲು- ರಾತ್ರಿ ಧರಣಿ ನಡೆಸುತ್ತಿದೆ.

ಸುರತ್ಕಲ್‌ ಟೋಲ್‌ಗೇಟ್‌ ಅನ್ನು ಹೆಜಮಾಡಿಯ ಟೋಲ್‌ಪ್ಲಾಜಾ ಜೊತೆ ವಿಲೀನಗೊಳಿಸುವ ಕುರಿತು ಕೇಂದ್ರ ಸರ್ಕಾರ ನ.11ರಂದು ಅಧಿಸೂಚನೆ ಹೊರಡಿಸಿತ್ತು. ಈ ಕುರಿತು ನ.14ರಂದು ಟ್ವೀಟ್‌ ಮಾಡಿದ್ದ ಸಂಸದ ನಳಿನ್‌ ಕುಮಾರ್ ಕಟೀಲ್‌, ‘ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ರದ್ದಾಗಿದೆ. ಟೋಲ್ ರದ್ದುಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’ ಎಂದು ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು