ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿಕೆಯಲ್ಲಿ ತಾರತಮ್ಯ ನಿವಾರಣೆಗೆ ಪ್ರಯತ್ನ’

ಪುತ್ತೂರು, ಬೆಳ್ತಂಗಡಿ, ಮುಡಿಪು, ಸುರತ್ಕಲ್‌ನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಣೆ
Last Updated 23 ಜೂನ್ 2021, 16:42 IST
ಅಕ್ಷರ ಗಾತ್ರ

ಪುತ್ತೂರು: ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್ ಕೊರತೆಯನ್ನು ಅಳಿಸಿಹಾಕಲು ಸರ್ಕಾರ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸುವ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಇಲ್ಲಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಐದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಸಾಂಕೇತಿಕವಾಗಿ ಟ್ಯಾಬ್ಲೆಟ್ ಪಿಸಿ ವಿತರಿಸಿ, ಅವರು ಮಾತನಾಡಿದರು. ‘ಜನರಿಗೆ ಬದುಕು ಮತ್ತು ಆರೋಗ್ಯದ ಜತೆಗೆ ಜ್ಞಾನಾರ್ಜನೆಯೂ ಅಗತ್ಯ. ವಿದ್ಯಾರ್ಥಿಗಳು ಜ್ಞಾನಶೀಲರಾಗಿ ರೂಪುಗೊಳ್ಳಲು ಆಧುನಿಕತೆ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳಿಗೆ ಕಲಿಕೆಗೆ ಅನುಕೂಲವಾಗುವಂತೆ ರಾಜ್ಯದಾದ್ಯಂತ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸಲಾಗುತ್ತಿದೆ’ ಎಂದರು.

ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ಗೌಡ ಪಾಣತ್ತಿಲ ಮಾತನಾಡಿ, ಕಾಲೇಜಿನ ಪದವಿ ಪ್ರಥಮ ವರ್ಷದ 224 ಮಂದಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡಲಾಗುವುದು’ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನರಸಿಂಹ ಕಾಮತ್, ಐಟಿ ಸಂಯೋಜಕ ಪ್ರವೀಣ್ ಇದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮಿಕಾಂತ್ ಅಣಿಕೂಟೇಲು ನಿರೂಪಿಸಿದರು.

ಸ್ಮಾರ್ಟ್ ತರಗತಿ ಉದ್ಘಾಟನೆ

ವಿಟ್ಲ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಣೆ ಮತ್ತು ಸ್ಮಾರ್ಟ್ ತರಗತಿ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ‘ಜಗತ್ತಿನಲ್ಲಿ ಭಾರತ ಬೆಳಗಲು ಅತ್ಯಾಧುನಿಕ ತಾಂತ್ರಿಕತೆಯ ಬಗ್ಗೆ ಮಾಹಿತಿ ಅಗತ್ಯವಾಗಿದೆ. ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ವಿವಿಧ ಕಾರ್ಯಕ್ರಮ ಹಾಕಿಕೊಂಡಿದೆ. ಸರ್ಕಾರ ನೀಡುತ್ತಿರುವ ಟ್ಯಾಬ್ಲೆಟ್‌ಗಳನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಕಾಲೇಜು ಪ್ರಾಂಶುಪಾಲೆ ಡಾ.ಶ್ರೀಜಾ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಕೆ ನಿರೂಪಿಸಿದರು. ಉಪನ್ಯಾಸಕ ಮಾಧವ ಸ್ವಾಗತಿಸಿದರು. ಪರಮೇಶ್ವರಿ ವಂದಿಸಿದರು.

413 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಣೆ

ಬೆಳ್ತಂಗಡಿ: ‘ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ನಿವಾರಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ತಾಂತ್ರಿಕ ಪ್ರಗತಿಯತ್ತ ಕೊಂಡೊಯ್ಯುವ ಮಹತ್ತರ ಯೋಜನೆಯನ್ನು ರೂಪಿಸಿದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಡಿಜಿಟಲ್ ಕಲಿಕಾ ಯೋಜನೆಯಡಿ ತಾಲ್ಲೂಕಿನ ಮೇಲಂತಬೆಟ್ಟು ಮತ್ತು ಪೂಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಟ್ಟು 413 ವಿದ್ಯಾರ್ಥಿಗಳಿಗೆ ಬುಧವಾರ ಟ್ಯಾಬ್ಲೆಟ್ ಅನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.

‘ಆರ್ಥಿಕ ಪ್ರಗತಿಗೆ ಕೋವಿಡ್ ಹೊಡೆತ ನೀಡಿರುವ ಮಧ್ಯೆ, ಗ್ರಾಮೀಣ ಪ್ರದೇಶದ ಕೆಲ ವಿದ್ಯಾರ್ಥಿಗಳು ಕುಟುಂಬದ ಹೊಣೆಗಾರಿಕೆಯಿಂದ ಕಾಲೇಜು ತೊರೆದು ಅನಿವಾರ್ಯವಾಗಿ ಉದ್ಯೋಗಕ್ಕೆ ಒಗ್ಗಿಕೊಂಡಿದ್ದಾರೆ. ಒಮ್ಮೆ ಶೈಕ್ಷಣಿಕ ಚಟುವಟಿಕೆ ಮೊಟಕುಗೊಂಡಲ್ಲಿ ಬಳಿಕ ಅವರನ್ನು ಶಿಕ್ಷಣ ವ್ಯವಸ್ಥೆಗೆ ಕರೆ ತರುವುದು ಕಷ್ಟಸಾಧ್ಯ. ಹೀಗಾಗಿ ಶಿಕ್ಷಕರು ಅವರ ಮನವೊಲಿಸುವ ಪ್ರಯತ್ನ ಮಾಡಿ ಅವರ ಭವಿಷ್ಯವನ್ನು ಸದೃಢಗೊಳಿಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಲಂತಬೆಟ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಟಿ.ಪಿ. ಮಾತನಾಡಿ, ‘ರಾಜ್ಯದಲ್ಲಿ ಸರ್ಕಾರಿ ಶಾಲೆಗಳ‌ 2,500 ಕೊಠಡಿಗಳನ್ನು ಸ್ಮಾರ್ಟ್ ಆಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತಂದಿರುವುದು ಅಭಿನಂದನಾರ್ಹ’ ಎಂದರು.

ಉಪನ್ಯಾಸಕರಾದ ಡಾ. ಸುಬ್ರಹ್ಮಣ್ಯ ಕೆ., ಡಾ.ಶರತ್ ಕುಮಾರ್ ಟಿ.ಕೆ., ಪ್ರೊ.ಸುರೇಶ್ ವಿ., ಡಾ.ಸುದರ್ಶನ್ ಪಿ., ಪ್ರೊ.ಗಂಗಾಧರ, ಪ್ರೊ.ಜಗದೀಶ್ ಎಸ್., ಪ್ರೊ. ಶೈಲೇಶ್ ಕುಮಾರ್ ಡಿ.ಎಚ್, ರಶ್ಮಿ ಎಚ್, ಡಾ.ಕುಶಾಲಪ್ಪ, ಪ್ರೊ.ರೋಹಿಣಿ ಇದ್ದರು.

‘ಶಿಕ್ಷಣಕ್ಕೆ ಆದ್ಯತೆ ಸರ್ಕಾರದ ಗುರಿ’

ಮುಡಿಪು: ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ. ಹಾಗಾಗಿ ಶಿಕ್ಷಣದಲ್ಲಿ ಸ್ಪರ್ಧೆಗೆ ಸರ್ಕಾರಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವುದೇ ಸರ್ಕಾರದ ಗುರಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಕುರ್ನಾಡು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸ್ಮಾರ್ಟ್ ಕ್ಲಾಸ್ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿದರು. ‘ಮುಡಿಪು ಕಾಲೇಜು ಎಲ್ಲ ವಿಭಾಗಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಕಾಲೇಜಿನ ಆವರಣಗೋಡೆ ಆದಷ್ಟು ಶೀಘ್ರ ನಿರ್ಮಾಣ ಆಗಬೇಕಾಗಿದೆ’ ಎಂದುಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷಪ್ರಶಾಂತ್ ಕಾಜವ ಹೇಳಿದರು.

ಪ್ರಾಂಶುಪಾಲ ಗಿರಿಧರ್ ರಾವ್ ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕಾಲೇಜಿನ ಐಟಿ ಸಂಚಾಲಕ ಅಜಯ್, ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಶೋಭಾ ಕಾರ್ಯಕ್ರಮ‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT