ಸೋಮವಾರ, ಮೇ 23, 2022
20 °C
ಎಂಜಿನಿಯರ್‌ಗಳ ತರಬೇತಿ ಕಾರ್ಯಾಗಾರದಲ್ಲಿ ಸಿಇಒ ಡಾ. ಕುಮಾರ್

2023ರ ಅಂತ್ಯದಲ್ಲಿ ಪ್ರತಿ ಮನೆಗೆ ನಳ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2023ರ ಅಂತ್ಯದೊಳಗೆ ಪ್ರತಿ ಮನೆಗೆ ನಳ ನೀರು ಸಂಪರ್ಕವನ್ನು ಒದಗಿಸುವುದಾಗಿದ್ದು, ಪ್ರತಿ ವ್ಯಕ್ತಿಗೆ ಜೀವಿಸುವ ಹಕ್ಕು ಹೇಗೆ ಇದೆಯೋ ಅದೇ ರೀತಿ ಶುದ್ಧ ಕುಡಿಯುವ ನೀರನ್ನು ಪಡೆಯುವ ಹಕ್ಕು ಇದೆ ಎಂದು ಜಿಲ್ಲಾ ಪ‍ಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಎಲ್ಲ ಎಂಜಿನಿಯರ್‌ಗಳಿಗೆ ತರಬೇತಿ ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಜಲ, ಜೀವ ಮತ್ತು ಜೀವನ ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಜಲ ಸಂರಕ್ಷಣೆ, ನೀರಿನ ಮಿತಬಳಕೆ ಹಾಗೂ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ. ಮುಂದಿನ ಪೀಳಿಗೆಗೆ ಅದನ್ನು ತಿಳಿಸುವುದು ನಮ್ಮ ಕರ್ತವ್ಯ’ ಎಂದರು.

‘ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಂಜಿನಿಯರ್‌ಗಳು  ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬಹುದು ಎಂದರು.

ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲವನ್ನು ಆಧರಿಸಿ ಏಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ₹ 487 ಕೋಟಿ ಅಂದಾಜು ವೆಚ್ಚದಲ್ಲಿ ಯೋಜಿಸಲಾಗಿದ್ದು, ಎರಡು ಕಾಮಗಾರಿಗಳ ಟೆಂಡರ್ ಅನುಮೋದನೆ ಹಂತದಲ್ಲಿದೆ. ಉಳಿದ ಐದು ಕಾಮಗಾರಿಗಳು ಪ್ರಾಥಮಿಕ ಯೋಜನಾ ವರದಿ ತಯಾರಿಕೆಯಲ್ಲಿವೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಮೈಸೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಕೆ.ಎನ್.ಕೃಷ್ಣಮೂರ್ತಿ, ಬೆಂಗಳೂರು ಕೇಂದ್ರ ಕಚೇರಿಯ ಅಧೀಕ್ಷಕ ಎಂಜಿನಿಯರ್ ನರಸಿಂಹರಾಜು, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಮಸಗುಪ್ಪಿ ಹಾಗೂ ಎಂ.ಆರ್. ರಾಮಚಂದ್ರಯ್ಯ ಇದ್ದರು. ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ನರೇಂದ್ರ ಬಾಬು ಸ್ವಾಗತಿಸಿದರು.

‘ಮೊದಲನೇ ಹಂತದಲ್ಲಿ 700 ಕಾಮಗಾರಿ’

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು ಮೂರು ಹಂತಗಳಲ್ಲಿ 700 ಕಾಮಗಾರಿಗಳನ್ನು ₹ 516 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಒಂದನೇ ಹಂತದಲ್ಲಿ ಒಟ್ಟು 468 ಕಾಮಗಾರಿ  ₹ 179 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈವರೆಗೆ 239 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 29 ಸಾವಿರ ವೈಯುಕ್ತಿಕ ನಳ ನೀರು ಸಂಪರ್ಕಕ್ಕೆ ಫಲಾನುಭವಿಗಳನ್ನು ಗುರುತಿಸಿ, ತಂತ್ರಾಂಶದಲ್ಲಿ ಸೇರ್ಪಡೆ ಮಾಡಲಾಗಿದೆ. 2ನೇ ಹಂತದಲ್ಲಿ ಒಟ್ಟು 124 ಕಾಮಗಾರಿಗಳು ಪ್ರಾರಂಭ ಹಂತದಲ್ಲಿವೆ ಎಂದು ಡಾ. ಕುಮಾರ್ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು