ಗುರುವಾರ , ಜನವರಿ 23, 2020
23 °C
ಪೊಲೀಸ್‌ ಕ್ರಮದಿಂದ ತೊಂದರೆಗೆ ಸಿಲುಕಿದ ರೋಗಿಗಳು

ಮಂಗಳೂರು: ಆಸ್ಪತ್ರೆ ಆವರಣದಲ್ಲಿ ಅಶ್ರುವಾಯು ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ಇರಿಸಿದ್ದ ನಗರದ ಹೈಲ್ಯಾಂಡ್‌ ಆಸ್ಪತ್ರೆ ಆವರಣದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಗುರುವಾರ ಸಂಜೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದಾರೆ. ಅಶ್ರುವಾಯು ಹೊಗೆ ಆಸ್ಪತ್ರೆ ತುಂಬೆಲ್ಲಾ ಹರಡಿ ರೋಗಿಗಳೂ ತೊಂದರೆ ಅನುಭವಿಸಿದ್ದಾರೆ.

ಪೊಲೀಸರ ಗುಂಡೇಟಿನಿಂದ ಮೃತಪಟ್ಟ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಅವರ ಶವಗಳನ್ನು ಗುರುವಾರ ಸಂಜೆ 5 ಗಂಟೆಗೆ ಹೈಲ್ಯಾಂಡ್‌ ಆಸ್ಪತ್ರೆಗೆ ತರಲಾಗಿತ್ತು. 6 ಗಂಟೆಯ ವೇಳೆಗೆ ಅಲ್ಲಿಗೆ ನೂರಾರು ಜನರು ಬಂದಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಆಗ ಕೆಲವರು ಕಲ್ಲು ತೂರಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಸೇರಿದ್ದವರನ್ನು ಪೊಲೀಸರು ಅಟ್ಟಿಸಿಕೊಂಡು ಹೋದರು. ಕಲ್ಲು ತೂರಿದವರು ಆಸ್ಪತ್ರೆಯ ಒಳಗಡೆಯೂ ಇರಬಹುದೆಂಬ ಶಂಕೆಯಿಂದ ಪೊಲೀಸರು ಬಾಗಿಲು ತಳ್ಳಿಕೊಂಡು ಒಳಕ್ಕೆ ನುಗ್ಗಿದರು. ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಹೆದರಿ ಕೊಠಡಿಗಳಲ್ಲಿ ಅವಿತುಕೊಂಡರು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

‘ಜನರು ಜಮಾವಣೆ ಆಗುತ್ತಿರುವ ಮಾಹಿತಿಯನ್ನು ನಾವೇ ಪೊಲೀಸರಿಗೆ ನೀಡಿದ್ದೆವು. ಸ್ಥಳಕ್ಕೆ ಬಂದಾಗ ಲಾಠಿ ಪ್ರಹಾರ, ಕಲ್ಲು ತೂರಾಟ ನಡೆಯಿತು. ಪೊಲೀಸರು ಮೂರು ಅಶ್ರುವಾಯು ಶೆಲ್‌ ಸಿಡಿಸಿದರು. ಹೊಗೆ ಆಸ್ಪತ್ರೆಯ ತುಂಬ ಹಬ್ಬಿತು. ಇದರಿಂದ ರೋಗಿಗಳಿಗೆ ತೀವ್ರ ತೊಂದರೆ ಆಯಿತು. ಮೂವರು ಹೃದ್ರೋಗಿಗಳು ಹೆಚ್ಚು ತೊಂದರೆಗೆ ಒಳಗಾದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಾಯಿತು’ ಎಂದು ಹೈಲ್ಯಾಂಡ್‌ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು