ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ ಬಿಸಿಲ ಝಳ

ಶುಕ್ರವಾರ, ಏಪ್ರಿಲ್ 26, 2019
21 °C
ಮಧ್ಯಾಹ್ನದ ಹೊತ್ತಲ್ಲಿ ಮತದಾರರ ಬಳಿ ಹೋಗುವುದಕ್ಕೆ ಒತ್ತಾಯಪ‍ಊರ್ವಕ ತಡೆ

ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ ಬಿಸಿಲ ಝಳ

Published:
Updated:
Prajavani

ಮಂಗಳೂರು: ಕರಾವಳಿಯಲ್ಲಿ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಬಿಸಿಲಿನ ಝಳವೂ ಹೆಚ್ಚಿದೆ. ಕೆಲವು ದಿನಗಳಿಂದ ಉಷ್ಣಾಂಶದಲ್ಲಿ ತೀವ್ರತರವಾದ ಏರಿಕೆ ಕಂಡುಬರುತ್ತಿದ್ದು, ಲೋಕಸಭಾ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರಚಾರದ ಅವಧಿಯನ್ನೇ ಬದಲಿಸಿಕೊಳ್ಳುವಂತೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಇದರಿಂದಾಗಿ ಮಧ್ಯಾಹ್ನದ ವೇಳೆ ಚುನಾವಣಾ ಪ್ರಚಾರಕ್ಕೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ರಾಜಕೀಯ ಪಕ್ಷಗಳನ್ನು ಕಂಗಾಲು ಮಾಡಿದೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆ ವಾತಾವರಣ ತುಸು ತಂಪಾಗಿರುವ ಕಾರಣ, ಈ ಅವಧಿಯಲ್ಲೇ ಹೆಚ್ಚಿನ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ.

ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಸಿಗಾಳಿ ಬೀಸುತ್ತಿದೆ. ಪರಿಣಾಮವಾಗಿ ಕೆಲವರು ಸೂರ್ಯಾಘಾತಕ್ಕೆ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿದೆ. ಮಧ್ಯಾಹ್ನದ ಅವಧಿಯಲ್ಲಿ ಹೊರಗಡೆ ಓಡಾಡುವವರ ಚರ್ಮಕ್ಕೆ ಹಾನಿಯಾಗುತ್ತಿದೆ. ಇದರಿಂದಾಗಿ ಮಧ್ಯಾಹ್ನದ ವೇಳೆ ಮನೆ, ಕಚೇರಿಗಳಿಂದ ಹೊರಬರುವವರ ಸಂಖ್ಯೆಯೇ ಕಡಿಮೆಯಾಗಿದೆ.

ಭಾರಿ ಅಂತರ: ಕೇಂದ್ರ ಹವಾಮಾನ ಇಲಾಖೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕರಾವಳಿಯ ಕೆಲವು ಪ್ರದೇಶಗಳೂ ಸೇರಿದಂತೆ ದೇಶದ ಹಲವೆಡೆ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಎಲ್ಲ ಪ್ರದೇಶಗಳಲ್ಲಿ ವಾಡಿಕೆಯ ಗರಿಷ್ಠ ಉಷ್ಣಾಂಶ ಮತ್ತು ಈಗಿನ ಗರಿಷ್ಠ ಉಷ್ಣಾಂಶದ ನಡುವೆ 5.1 ಡಿಗ್ರಿ ಸೆಲ್ಸಿಯಸ್‌ನಷ್ಟು ಅಂತರವಿದೆ.

ಬಿಸಿಗಾಳಿ ಮತ್ತು ಸೂರ್ಯಾಘಾತಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಕರ್ನಾಟಕದ ಕರಾವಳಿಯ ಕೆಲವೆಡೆಗಳಲ್ಲಿ ಅತ್ಯಧಿಕ ಉಷ್ಣಾಂಶ 43.4 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ಸೋಮವಾರ ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 35.2 ಡಿಗ್ರಿ ಸೆಲ್ಸಿಯಸ್‌ ಇತ್ತು.

ಪ್ರಚಾರಕ್ಕೆ ಮಧ್ಯಾಹ್ನ ಬಿಡುವು: ‘ಜಿಲ್ಲೆಯ ಹಲವು ಭಾಗಗಳಲ್ಲಿ ಬಿಸಿಲಿನಿಂದ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ. ಇಂತಹ ಪ್ರದೇಶಗಳಲ್ಲಿ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಪ್ರಚಾರ ನಡೆಸಲಾಗುತ್ತಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮತ್ತೆ ಆರಂಭಿಸಿ, ರಾತ್ರಿಯವರೆಗೂ ಪ್ರಚಾರ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಇಡೀ ದಿನ ಪ್ರಚಾರ ಕಾರ್ಯ ನಡೆಯುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಕೆ.ಹರೀಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಷ್ಣಾಂಶದಲ್ಲಿ ಹೆಚ್ಚಳವಾಗಿರುವುದರಿಂದ ಚುನಾವಣಾ ಪ್ರಚಾರಕ್ಕೆ ಅಡಚಣೆ ಆಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚಾಗಿ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಸಮಯ ಪ್ರಚಾರಕ್ಕೆ ಮೀಸಲಿಡುವಂತೆಯೂ ಸೂಚಿಸಲಾಗಿದೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !