ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮತ್ತು ಜೆಡಿಎಸ್‌– ಕಾಂಗ್ರೆಸ್‌ ಮುಂದಿರುವ ದಾರಿಗಳೇನು

Last Updated 18 ಮೇ 2018, 10:34 IST
ಅಕ್ಷರ ಗಾತ್ರ

ಬೆಂಗಳೂರು: 'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸಬೇಕು' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳು ರಾಜ್ಯದ ಜನರಲ್ಲಿ ಕುತೂಹಲ ಹುಟ್ಟುಹಾಕಿವೆ.

ಬಿಜೆಪಿ ಏನು ಮಾಡಬಹುದು ಬಹುಮತ ಸಾಬೀತುಪಡಿಸಲೇಬೇಕಾದ ಒತ್ತಡದಲ್ಲಿರುವ ಬಿಜೆಪಿ ಸುಮಾರು 15 ಶಾಸಕರನ್ನು ಸದನಕ್ಕೆ ಬಾರದಂತೆ ತಡೆಯಬಹುದು. ಹೀಗಾದಲ್ಲಿ ಸದನದಲ್ಲಿ ಸದಸ್ಯರ ಸಂಖ್ಯಾಬಲ ಕಡಿಮೆಯಾಗಲಿದೆ. ಬಿಜೆಪಿಯ ಗೆಲುವು ಸುಲಭವಾಗಲಿದೆ.

ಈ ಕಾರ್ಯತಂತ್ರದಲ್ಲಿ ಬಿಜೆಪಿ ಜಯಶಾಲಿಯಾದರೆ ಶಾಸಕರು ರಾಜೀನಾಮೆ ನೀಡುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ.. ಒಮ್ಮೆ ವಿಶ್ವಾಸಮತ ಗೆದ್ದರೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಸ್ಥಾನ ಆರು ತಿಂಗಳು ಅಬಾಧಿತ. ಸರ್ಕಾರವೂ ಭದ್ರ. ಅಬಾಧಿತ ಎನ್ನುವ ಲೆಕ್ಕಾಚಾರ ಪಕ್ಷದ ವಲಯದಲ್ಲಿ ಚಾಲ್ತಿಯಲ್ಲಿದೆ.

ಮತ್ತೊಮ್ಮೆ ಸದನ ಸೇರಿದಾಗ ಈಗ ಗೈರು ಹಾಜರಾಗಿರುವ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದು ಅನಿವಾರ್ಯ. ಆಗಲೂ ಅವಿಶ್ವಾಸ ಮಂಡಿಸಲು ಅವಕಾಶ ಇರುತ್ತದೆ. ಬಿಜೆಪಿ ಪಕ್ಷಕ್ಕೆ ಸೇರಿದವರೇ ಸ್ಪೀಕರ್ ಆಗಿದ್ದರೆ ಆ ನೋಟಿಸ್‌ಗೆ ಸ್ಪಂದಿಸದೇ ಇರಬಹುದು. ನಿಲುವಳಿಯನ್ನು ಮುಂದೂಡುವ ಅವಕಾಶವನ್ನೂ ಬಳಸಿಕೊಳ್ಳಬಹುದು. ಸ್ಪೀಕರ್ ವಿಳಂಬ ರಾಜಕಾರಣ ಅನುಸರಿಸಿದರೆ ಬಿಜೆಪಿಗೆ ಅನುಕೂಲ.

ಕೆಲವು ಶಾಸಕರ ಮನವೊಲಿಸಿ, ಅವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ರಾಜೀನಾಮೆ ಕೊಡುವಂತೆ ಮಾಡಬಹುದು. ಆಗ ಸಹಜವಾಗಿಯೇ ಸದನದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಲಿದೆ. ಒಂದು ವೇಳೆ ಇದು ಸಾಧ್ಯವಾದರೆ ಉಪಚುನಾವಣೆಗಳು ಘೋಷಣೆಯಾಗುತ್ತವೆ. ಆ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಲು ತಂತ್ರ ಹೆಣೆಯಲಾಗುತ್ತದೆ.

ಉಪ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸಹಜವಾಗಿಯೇ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಳ್ಳುತ್ತವೆ. ಫಲಿತಾಂಶ ಪ್ರಕಟವಾಗುವವರೆಗೆ ಸರ್ಕಾರದ ಅಸ್ತಿತ್ವದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇರುತ್ತದೆ.

ಕಾಂಗ್ರೆಸ್/ಜೆಡಿಎಸ್ ಏನು ಮಾಡಬಹುದು
ಈಗಾಗಲೇ ರೆಸಾರ್ಟ್‌ನಲ್ಲಿ ಎಲ್ಲ ಶಾಸಕರನ್ನು ಹಿಡಿದಿಟ್ಟುಕೊಂಡಿರುವ ಕಾಂಗ್ರೆಸ್‌-ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಾಯಗತಾಯ ಯತ್ನಿಸುತ್ತವೆ.

ಬಿಜೆಪಿ ಕಡೆ ಒಲವು ಇರಬಹುದು ಎನ್ನುವ ಶಾಸಕರಿಗೆ ಸಚಿವ ಸ್ಥಾನ, ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ಆಮಿಷ ಒಡ್ಡಿ ಪಕ್ಷದಲ್ಲೇ ಉಳಿಸಿಕೊಳ್ಳಬಹುದು. ಆದರೆ, ಎಷ್ಟರಮಟ್ಟಿಗೆ ಸಾಧ್ಯ ಎಂಬುದು ಪ್ರಶ್ನಾರ್ಹ.

ಶಾಸಕರ ಹಿಂದೆ ಒಬ್ಬಿಬ್ಬರನ್ನು ನಿಯೋಜಿಸಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಹರಸಾಹಸ ಮಾಡಬಹುದು.

ಸದನದ ಹೊರಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರಾಜಕೀಯ ಪಕ್ಷಗಳ ನಾಯಕರು ಏನು ಬೇಕಾದರೂ ಮಾಡಬಹುದು. ಆದರೆ ವಿಶ್ವಾಸಮತವನ್ನು ಸದನದ ಒಳಗೆ ಸಾಬೀತುಪಡಿಸಬೇಕು. ಅಲ್ಲಿ ಯಾರ ಮೇಲೆಯೂ ಒತ್ತಡ ಹಾಕಲು ಸಾಧ್ಯವಿಲ್ಲ. ಕಾರ್ಯಚಟುವಟಿಕೆಗಳು ಸ್ಪೀಕರ್ ನಿಗಾವಣೆಯಲ್ಲಿಯೇ ನಡೆಯುತ್ತವೆ. ಹೀಗಾಗಿ, ಅಂತಿಮವಾಗಿ ಏನು ಬೇಕಾದರೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT