ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನಕ್ಕೆ ಸಿದ್ಧಗೊಳ್ಳುತ್ತಿರುವ ಕರಾವಳಿ ದೇಗುಲಗಳು

ಸುರಕ್ಷಿತ ಅಂತರ, ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ
Last Updated 27 ಮೇ 2020, 14:06 IST
ಅಕ್ಷರ ಗಾತ್ರ

ಮಂಗಳೂರು: ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯ, ಕದ್ರಿ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ಜೂನ್‌ 1ರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆಗಳು ನಡೆಯುತ್ತಿವೆ.

‘ಕೋವಿಡ್–19 ಮಾರ್ಗಸೂಚಿಯ ನಿಯಮಾವಳಿಗಳನ್ನು ಪಾಲಿಸಿಕೊಂಡು ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಕುರಿತ ಸರ್ಕಾರದ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ’ ಎಂದು ದೇಗುಲಗಳ ಆಡಳಿತದ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ.

ಧರ್ಮಸ್ಥಳ ವರದಿ:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್ 1ರಿಂದ (ಸೋಮವಾರ) ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಧರ್ಮಸ್ಥಳದ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುವುದು. ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ವಸತಿ ವ್ಯವಸ್ಥೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಒಳಗೊಂಡಂತೆ ಭಕ್ತರ ಸಂಖ್ಯೆಯಲ್ಲಿ ನಿಯಂತ್ರಣ ಇಟ್ಟುಕೊಳ್ಳಲಾಗುವುದು.

ದೇವರ ದರ್ಶನದ ಸಮಯ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ. ಸಂಜೆ ಗಂಟೆ 5 ರಿಂದ ರಾತ್ರಿ 8 ಗಂಟೆವರೆಗೆ ಎಂದು ಪ್ರಕಟಣೆ ತಿಳಿಸಿದೆ.

ಮೂಲ್ಕಿ ವರದಿ:‘ಜೂ.1ರಿಂದ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.

‘ಆದರೆ, ಇನ್ನೂ ಇಲಾಖೆಯಿಂದ ಅಧಿಕೃತವಾಗಿ ಆದೇಶ ತಲುಪಿಲ್ಲ. ಆದರೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ವಚ್ಚತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಸರ್ಕಾರದ ನಿಯಮಗಳೇ ಮಾನದಂಡವಾಗಲಿದೆ. ಉಳಿದಂತೆ ದೇವರ ಪೂಜೆಗಳು ನಿರಂತರವಾಗಿ ನಡೆಯಲಿದೆ’ ಎಂದು ವಿವರಿಸಿದ್ದಾರೆ.

ಸುರತ್ಕಲ್ ವರದಿ:ಸುರತ್ಕಲ್, ಪಣಂಬೂರು,ಗಣೇಶಪುರ ಪ್ರದೇಶದಲ್ಲಿನ ದೇವಸ್ಥಾನಗಳಲ್ಲಿ ಜೂನ್‌ 1ರಿಂದ ದೇವರ ದರ್ಶನಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಯುತ್ತಿದೆ.

‘ಭಕ್ತರು ಕೊಡುವ ಸೇವಾ ಹಾಗೂ ಕಾಣಿಕೆ ಡಬ್ಬಿಯ ಅದಾಯದಲ್ಲಿ ಅರ್ಚಕರು, ಸಿಬ್ಬಂದಿಗೆ ವೇತನ ನೀಡಬೇಕು. ಲಾಕ್‌ಡೌನ್‌ ಬಳಿಕ ಸಿಬ್ಬಂದಿಗೆ ವೇತನ ಹಾಗೂ ದೇವಾಲಯದ ನಿರ್ವಹಣೆ ಕಷ್ಟವಾಗಿತ್ತು. ದೇವಸ್ಥಾನಕ್ಕೆ ಸಾಕಷ್ಟು ಹೊರೆಯಾಗಿತ್ತು’ ಎನ್ನುತ್ತಾರೆ ಗಣೇಶಪುರ ದೇವಸ್ಥಾನದ ಅಡಳಿತ ಮಂಡಳಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ

ಮಂಗಳೂರು ವರದಿ:ಕದ್ರಿ ದೇವಸ್ಥಾನದಲ್ಲಿ ಜೂ.1 ರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡು ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯ ಸಮಯದಲ್ಲಿ ಹಾಕುವಂತೆ ಬ್ಯಾರಿಕೇಡ್ ಅಳವಡಿಸಿ, ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ದಿನಕ್ಕೆ ಇಂತಿಷ್ಟು ಸೇವೆಗಳಿಗೆ ಮಿತಿ ವಿಧಿಸಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ನಗರದಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ, ಶರವು ಮಹಾಗಣಪತಿ ಸೇರಿದಂತೆ ಹಲವು ದೇಗುಲಗಳೂ ಸರ್ಕಾರದ ನಿರ್ದೇಶನದ ನಿರೀಕ್ಷೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT