ಭಾನುವಾರ, ಜುಲೈ 25, 2021
25 °C
ಮುಖಗವಸು, ಸ್ಯಾನಿಟೈಸರ್ ಬಳಕೆ ಕಡ್ಡಾಯ: ಮಾರ್ಗಸೂಚಿಯಂತೆ ಪ್ರವೇಶ

ಬಾಗಿಲು ತೆರೆಯಲಿವೆ ಮಾಲ್‌, ದೇವಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ನಗರದ ಫೋರಂ ಫಿಝಾ ಮಾಲ್ ಸೋಮವಾರ (ಇದೇ 8) ದಿಂದ ಹೆಚ್ಚಿನ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಗೊಳ್ಳಲಿದೆ.

ಮುಖಕ್ಕೆ ಮಾಸ್ಕ್, ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದ್ದು, ಮಾಲ್ ಪ್ರವೇಶಿಸುವ ಮುನ್ನ ಗ್ರಾಹಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುವುದು. ಜತೆಯಲ್ಲಿ ಅವರಲ್ಲಿ ಆರೋಗ್ಯ ಸೇತು ಆಪ್ ಇದೆಯೇ ಎಂದು ಖಚಿತ ಪಡಿಸಲಾಗುತ್ತದೆ ಎಂದು ಫೋರಂ ಮಾಲ್ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಒಟ್ಟು ಪ್ರವೇಶದ ಮೂರನೇ ಒಂದರಷ್ಟು ಜನರಿಗೆ ಮಾತ್ರ ಪ್ರವೇಶ ದೊರೆಯಲಿದೆ. ಗ್ರಾಹಕರು www.forummalls.com ವೆಬ್‌ಸೈಟ್‌ಗೆ ಭೇಟಿ ನೀಡಿ ಪಾಸ್ ಪಡೆಯಬೇಕು. ಕ್ಯುಆರ್ ಕೋಡ್ ಇರುವ ಸಮಯವನ್ನು ನಿಗದಿ ಮಾಡಿಕೊಂಡು ಒಳಗೆ ಮತ್ತು ಹೊರಗೆ ಹೋಗುವ ವ್ಯವಸ್ಥೆ ಇದೆ. ಇದು ಸೋಮವಾರದಿಂದ ಕಾರ್ಯಾರಂಭಿಸಲಿದೆ ಎಂದು ಹೇಳಿದ್ದಾರೆ.

ಸಿನಿಮಾ, ಗೇಮಿಂಗ್ ವಲಯಕ್ಕೆ ಇನ್ನೂ ಅನುಮತಿ ದೊರಕಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಗ್ರಾಹಕರ ಸುರಕ್ಷತೆಗೆ ಪ್ರಮುಖ ಅದ್ಯತೆ ನೀಡಿ ಫೋರಂ ಮಾಲ್ ಪುನರಾರಂಭಗೊಳ್ಳಲಿದೆ ಎಂದು ಮಾರುಕಟ್ಟೆ ಮ್ಯಾನೇಜರ್ ಸುನೀಲ್ ಮಾಹಿತಿ ನೀಡಿದ್ದಾರೆ.

ಸಿಟಿ ಸೆಂಟರ್‌ ಮಾಲ್‌ ಸಜ್ಜು: ಸಿಟಿ ಸೆಂಟರ್ ಮಾಲ್‌ನಲ್ಲಿ ಸೋಮವಾರದಿಂದ ವಹಿವಾಟು ಪುನರಾರಂಭಿಸಲು ಸಿದ್ಧತೆ ಮಾಡಲಾಗಿದೆ. ಮಾಲ್‌ನಲ್ಲಿರುವ ಎಲ್ಲ ಗ್ರಾಹಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಮಾರಾಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ವಿವಿಧೆಡೆ ಪೂಜೆ

ನಗರದ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸೋಮವಾರ ಭಕ್ತರಿಗೆ ದರ್ಶನ ಆರಂಭಿಸಲಾಗುತ್ತಿದ್ದು, ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಪೂಜೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ.

ಕುದ್ರೋಳಿ ದೇವಸ್ಥಾನದಲ್ಲಿಯೂ ಸೋಮವಾರ ಬೆಳಿಗ್ಗೆ 8.30ರಿಂದ ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ಮುಕ್ತಿಗಾಗಿ ಧನ್ವಂತರಿಯಾಗ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಲಿದೆ.

ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಮಾಲ್‌, ಧಾರ್ಮಿಕ ಸ್ಥಳಗಳು, ಹೋಟೆಲ್‌ಗಳಲ್ಲಿ ಜನರು ಪ್ರವೇಶಿಸುವ ಮೊದಲು ಕ್ವಾರಂಟೈನ್‌ ಮುದ್ರೆಯನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು