ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಕಾಲಿಕ ನೌಕರರ ಕಡ್ಡಾಯ ನೋಂದಣಿಗೆ ಸೂಚನೆ: ಸಿಇಒ ಡಾ. ಕುಮಾರ್

Last Updated 22 ಸೆಪ್ಟೆಂಬರ್ 2022, 12:43 IST
ಅಕ್ಷರ ಗಾತ್ರ

ಮಂಗಳೂರು: ಸ್ತ್ರೀಶಕ್ತಿ ಗುಂಪುಗಳ ಸದಸ್ಯೆಯರು, ನಗರ ಹಾಗೂ ಗ್ರಾಮ ಮಟ್ಟದ ಸ್ಥಳೀಯ ಸಂಸ್ಥೆಗಳ ‘ಡಿ’ ಗ್ರೂಪ್ ನೌಕರರು, ಬಿಲ್‌ ಕಲೆಕ್ಟರ್‌ಗಳು, ವಾಟರ್‌ಮೆನ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅರೆಕಾಲಿಕ ನೌಕರರನ್ನು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಜಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ (ಪಿಎಂಎಸ್‌ಬಿವೈ) ಯೋಜನೆಯಡಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಲೀಡ್ ಬ್ಯಾಂಕ್ ವತಿಯಿಂದ ಗುರುವಾರ ಇಲ್ಲಿ ಆಯೋಜಿಸಿದ್ದ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪಿಎಂಜೆಜೆಜಿವೈ ಅಡಿಯಲ್ಲಿ 2.74 ಲಕ್ಷ, ಪಿಎಂಎಸ್‌ಬಿವೈ ಅಡಿ 5.94 ಲಕ್ಷ ಹಾಗೂ ಅಟಲ್‌ ಪಿಂಚಣಿ ಯೋಜನೆಯಡಿ 1.23 ಲಕ್ಷ ನೋಂದಣಿಯಾಗಿದೆ. ಕಳೆದ ತ್ರೈಮಾಸಿಕ ಸಭೆಯ ವೇಳೆ 8 ಲಕ್ಷ ಇದ್ದ ನೋಂದಣಿ ಪ್ರಮಾಣ, ಈಗ 10 ಲಕ್ಷಕ್ಕೆ ಏರಿಕೆಯಾಗಿದ್ದು, ಉತ್ತಮ ಪ್ರಗತಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 18 ಲಕ್ಷ ಬ್ಯಾಂಕ್ ಖಾತೆದಾರರು ಇದ್ದು, 14 ಲಕ್ಷ ನೋಂದಣಿಯ ಗುರಿ ಹೊಂದಲಾಗಿದೆ ಎಂದರು.

ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಮಾಹಿತಿ ನೀಡಿ, ‘ಪಿಎಂಜೆಜೆಜಿವೈ ಅಡಿಯಲ್ಲಿ 524 ಫಲಾನುಭವಿಗಳಿಗೆ ₹ 10 ಕೋಟಿಯಷ್ಟು, ಪಿಎಂಎಸ್‌ಬಿವೈ ಅಡಿ 207 ಜನರಿಗೆ ಅಂದಾಜು ₹ 4 ಕೋಟಿ ಪರಿಹಾರ ಮೊತ್ತ ದೊರೆತಿದೆ’ ಎಂದರು.

ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಗುಂಪುಗಳ 68 ಸಾವಿರ ಮಹಿಳೆಯರು ಇದ್ದಾರೆ. ಇವರೆಲ್ಲರ ಕಡ್ಡಾಯ ನೋಂದಣಿ ಮಾಡಬೇಕು. ಅರೆಕಾಲಿಕ ನೌಕರರಾಗಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಸ್ವಚ್ಛತೆಗಾರರು, ಡಿ ಗ್ರೂಪ್, ಬಿಲ್ ಕಲೆಕ್ಟರ್ಸ್‌, ಅಂಗನವಾಡಿ, ಆಶಾ ಅವರಿಗೆ ಈ ಯೋಜನೆಯಡಿ ತರಬೇಕು. ಇದಕ್ಕೆ ಎಲ್ಲ ಬ್ಯಾಂಕ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಕುಮಾರ್ ಹೇಳಿದರು.

‘ಕೆಲವು ಬ್ಯಾಂಕ್‌ಗಳು ಸಭೆಗೆ ಸಮರ್ಪಕ ಮಾಹಿತಿ ನೀಡಿಲ್ಲ ಮತ್ತು ನಿಗದಿತ ಗುರಿ ತಲುಪಿಲು ವಿಫಲವಾಗಿವೆ. ಇಂತಹ ಬ್ಯಾಂಕ್‌ಗಳಿ ನೋಟಿಸ್ ಜಾರಿಗೊಳಿಸಬೇಕು. ಸರ್ಕಾರದ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಬ್ಯಾಂಕ್‌ಗಳು ಪಡೆದಿರುವ ಸರ್ಕಾರದ ಕಾರ್ಯಕ್ರಮಗಳನ್ನು ಹಿಂಪಡೆಯಬೇಕು’ ಎಂದು ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ಸೂಚಿಸಿದರು.

ಶೇ 10.58ರಷ್ಟು ಬೆಳವಣಿಗೆ: ಜೂನ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ ₹ 94902.03 ಕೋಟಿ ಆಗಿದ್ದು, ಶೇ 10.58ರಷ್ಟು ಬೆಳವಣಿಗೆ ಸಾಧಿಸಿವೆ. ಒಟ್ಟು ಠೇವಣಿ ₹ 58377.09 ಕೋಟಿ ಆಗಿದ್ದು ಶೇ 8.62ರಷ್ಟು ಬೆಳವಣಿಗೆ, ಒಟ್ಟು ಸಾಲ ₹ 36524.94 ಕೋಟಿ ಆಗಿದ್ದು ಶೇ 13.87ರಷ್ಟು ಬೆಳವಣಿಗೆ ಕಂಡಿದೆ. ಕೃಷಿ ಕ್ಷೇತ್ರಕ್ಕೆ ₹ 1071.09 ಕೋಟಿ ಸಾಲ ವಿತರಿಸಿದ್ದು, ಶೇ 16.10ರಷ್ಟು ನಿರ್ವಹಣೆ ಸಾಧಿಸಲಾಗಿದೆ ಎಂದು ಲೀಡ್ ಬ್ಯಾಂಕ್ ಮುಖ್ಯಸ್ಥರು ತಿಳಿಸಿದರು.

ಆರ್‌ಬಿಐ ಅಧಿಕಾರಿ ಗುರುರಾಜ್ ಆಚಾರ್ಯ, ನಬಾರ್ಡ್ ಡಿಡಿಎಂ ಸಂಗೀತಾ ಕರ್ತ ಇದ್ದರು.

‘ದೇಶಕ್ಕೆ ಐದನೇ ರ್‍ಯಾಂಕ್’
ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ದೇಶದ 75 ಜಿಲ್ಲೆಗಳನ್ನು ಗುರುತಿಸಿ, 17 ಯೋಜನೆಗಳ ಅನುಷ್ಠಾನಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ ಕರ್ನಾಟಕದಿಂದ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳು ಆಯ್ಕೆಯಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯು 20 ದಿನಗಳಲ್ಲಿ ಪಿಎಂಜೆಜೆಜಿವೈ, ಪಿಎಂಎಸ್‌ಬಿವೈ ಸೇರಿದಂತೆ ಎಲ್ಲ ನಿಗದಿತ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಿತ್ತು. ಒಂದು ಲಕ್ಷಕ್ಕಿಂತ ಹೆಚ್ಚು ನೋಂದಣಿ ದಾಖಲಿಸಿದ ಕಾರಣಕ್ಕೆ ಜಿಲ್ಲೆ ದೇಶದಲ್ಲಿ 5ನೇ ರ್‍ಯಾಂಕ್ ಪಡೆದಿದೆ ಎಂಬ ಮಾಹಿತಿ ಬುಧವಾರ ದೊರೆತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT