ಮಂಗಳವಾರ, ಏಪ್ರಿಲ್ 20, 2021
32 °C

ಲಾಕ್‌ಡೌನ್‌ ಕಲಿಸಿದ ಕೈತೋಟ ಕೃಷಿ; ಟಾರಸಿಯಲ್ಲಿ ಬಗೆಬಗೆಯ ಸೊಪ್ಪು– ತರಕಾರಿಗಳು

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಸಮಯ ಕಳೆಯಲು ಈ ದಂಪತಿ ಆಯ್ದುಕೊಂಡ ಕಾಯಿಪಲ್ಲೆ ಕೃಷಿ ಇಂದು, ಮನೆಯ ಟಾರಸಿಯನ್ನು ಹಸಿರಾಗಿಸಿದೆ. ಇದು ಮನಸ್ಸಿಗೆ ಮುದ ನೀಡಿದ್ದಷ್ಟೇ ಅಲ್ಲ. ಅನಾಯಾಸವಾಗಿ ಕಿಸೆಗೊಂದಿಷ್ಟು ಕಾಸನ್ನು ಸೇರಿಸಿ, ಮನೆಯಂಗಳದಲ್ಲಿ ಜಲ ಚಿಮ್ಮುವಂತೆ ಮಾಡಿದೆ. 

ತರಕಾರಿ ಸ್ವಾವಲಂಬನೆಯ ಕನಸು ಕಂಡಿದ್ದ ನಗರದ ಕೊಂಚಾಡಿ ದೇರೆಬೈಲ್‌ ನಿವಾಸಿ ವಕೀಲೆ ಕಿರಣಾ ಮತ್ತು ಉಪನ್ಯಾಸಕ ಮಹೇಶ್‌ ದೇವಾಡಿಗ ದಂಪತಿ, ಚಟ್ಟಿಯಲ್ಲಿ ತರಕಾರಿ ಬೀಜ ಬಿತ್ತಿದರು. ಮೊಳಕೆಯೊಡೆದ ಬೀಜ ಗಿಡವಾಗಿ, ತರಕಾರಿ ನಳನಳಿಸುವುದನ್ನು ಕಂಡಾಗ ಈ ದಂಪತಿಗೆ, ಮತ್ತಷ್ಟು ತರಕಾರಿಗಳನ್ನು ಬೆಳೆಸುವ ಹುಮ್ಮಸ್ಸು ಮೂಡಿತು. ಹೀಗೆ, ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳೆಲ್ಲ ಟಾರಸಿ ಸೇರಿ, ಚಟ್ಟಿಗಳಾಗಿ ಪರಿವರ್ತನೆಯಾದವು. ಅದರೊಳಗೆ ಮಣ್ಣು, ಗೊಬ್ಬರ ಸೇರಿ ತರಕಾರಿ ಗಿಡಗಳು ಚಿಗುರೊಡೆದವು. ನಿತ್ಯದ ಅಡುಗೆಗೆ ಬೇಕಾದ ಸೊಪ್ಪು– ತರಕಾರಿಗೆ ಮಾರ್ಕೆಟ್ ಹೋಗುವ ಪ್ರಮೇಯ ತಪ್ಪಿತು.

ಟಾರಸಿ ಕೈತೋಟದಲ್ಲಿ ಬಸಳೆ, ಅಲಸಂದೆ, ಹೀರೆಕಾಯಿ, ಮೆಣಸು, ಟೊಮೊಟೊ, ಸೌತೆ, ಅನನಾಸು, ಸೋರೆಕಾಯಿ, ಕಾಯಿಮೆಣಸು, ಶುಂಠಿ, ಹಾಗಲಕಾಯಿ, ಬದನೆ ಸೇರಿದಂತೆ ಹಲವು ಬಗೆಯ ತರಕಾರಿಗಳಿವೆ. ಮಾತ್ರವಲ್ಲ, 120 ಗಿಡ ಮಲ್ಲಿಗೆ ಸಸಿಗಳು ಹಬ್ಬಿಕೊಂಡಿವೆ. ಸುಮಾರು 4 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಟಾರಸಿಯಲ್ಲಿ ಈಗ ತರಕಾರಿಗಳದ್ದೇ ದರ್ಬಾರು.

‘ನಾವು ಉತ್ಸಾಹದಿಂದ ಕೈತೋಟವನ್ನು ಆರಂಭಿಸಿದ್ದೆವು. ಕೃಷಿಯಲ್ಲಿ ನಮಗೆ ಆಸಕ್ತಿ ಇದ್ದರೂ ತೊಡಗಿಸಿಕೊಳ್ಳಲು ಸಮಯ ಇರಲಿಲ್ಲ. ಲಾಕ್‌ಡೌನ್‌ ಸಂದರ್ಭ ಕೈತೋಟವನ್ನು ಬೆಳೆಸಲು ಅವಕಾಶ ದೊರಕಿತು. ದಿನಪೂರ್ತಿ ಖುಷಿಯಿಂದ ಕೈತೋಟದಲ್ಲೇ ಸಮಯ ಕಳೆದೆವು. ದಿನ ಕಳೆಯುತ್ತಿದ್ದಂತೆ ಸಸಿಗಳ ಸಂಖ್ಯೆ ಹೆಚ್ಚುತ್ತ ಹೋಯಿತ್ತು. ನಮ್ಮ ಶ್ರಮಕ್ಕೆ ಪ್ರತಿಫಲವೂ ದೊರೆಯಿತು’ ಎನ್ನುತ್ತಾರೆ ಕೈತೋಟದ ರೂವಾರಿ ಕಿರಣಾ.

‘ನಾವು ಕೈತೋಟಕ್ಕೆ ಹೆಚ್ಚು ಬಂಡವಾಳ ಹಾಕಿಲ್ಲ. ಲಾಕ್‌ಡೌನ್‌ ಆರಂಭದಲ್ಲಿ ರಸ್ತೆ ಬದಿ ಮಾರಾಟ ಮಾಡುತ್ತಿದ್ದ ಚಟ್ಟಿಗಳನ್ನು ಕಡಿಮೆ ದರಕ್ಕೆ ತಂದೆವು. ಹಾಗೆಯೇ ಹಳೆಯ ಫ್ರಿಡ್ಜ್‌, ಬುಟ್ಟಿ, ನೀರಿನ ದೊಡ್ಡ ಬಾಟಲಿಗಳಲ್ಲಿ ತರಕಾರಿ ಬೀಜ ಹಾಕಿದ್ದೇವೆ. ಒಂದು ವರ್ಷದಿಂದ ಅಂಗಡಿಯಿಂದ ತರಕಾರಿ ತರುವ ಪ್ರಮೇಯವೇ ಬಂದಿಲ್ಲ. ಸಾವಯವ ಗೊಬ್ಬರ ಹಾಕಿ ಬೆಳೆದ ಬಸಳೆ, ತರಕಾರಿಗಳಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಭಾರಿ ಬೇಡಿಕೆಯಿತ್ತು. ಹೀಗಾಗಿ, ತರಕಾರಿ ಮಾರಾಟ ಮಾಡಿ ₹ 32 ಸಾವಿರ ಆದಾಯ ಬಂದಿತ್ತು. ಅದೇ ಹಣದಿಂದ ಮನೆ ಮುಂದೆ ಬಾವಿಯನ್ನು ತೋಡಿದೆವು. ಈಗ ಕೈತೋಟಕ್ಕೆ ಬೇಕಾದ ನೀರು ಬಾವಿಯಲ್ಲೇ ಸಿಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

‘ಕೆಲವು ಚಟ್ಟಿಗಳಲ್ಲಿ ಮಲ್ಲಿಗೆ ಸಸಿಗಳನ್ನು ಬೆಳೆಸಿದ್ದೆವು. ಅದಕ್ಕೆ ನೆಲಗಡಲೆ ಹಿಂಡಿ ಹಾಕಿದ ಬಳಿಕ ಉತ್ತಮ ಇಳುವರಿ ಬಂತು. ಯೂಟ್ಯೂಬ್‌ ನೋಡಿ ಮಲ್ಲಿಗೆ ಕಟ್ಟಲು ಕಲಿತುಕೊಂಡೆ. ಇದು ಮತ್ತಷ್ಟು ಸಸಿಗಳನ್ನು ಬೆಳೆಸಲು ಪ್ರೇರಣೆ ನೀಡಿತು. ಕೆಲವೊಂದು ದಿನ ‌ಒಂದು ಅಟ್ಟೆಗೂ ಜಾಸ್ತಿ ಮಲ್ಲಿಗೆ ಸಿಗುತ್ತಿದೆ. ಮಲ್ಲಿಗೆಗೆ ನಗರದಲ್ಲಿ ಉತ್ತಮ ಬೇಡಿಕೆಯಿದೆ’ ಎಂದು ಹೇಳುತ್ತಾರೆ.

‘ನಮಗೆ ಇಬ್ಬರಿಗೂ ಕೈತೋಟದಲ್ಲಿ ಸಮಾನ ಆಸಕ್ತಿಯಿದೆ. ಬೆಳಿಗ್ಗೆ ಬೇಗ ಎದ್ದು ಅವರು ಪತಿ ಕೈತೋಟಕ್ಕೆ ನೀರು ಹಾಕುತ್ತಾರೆ. ಬೆಳಿಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಕೈತೋಟಕ್ಕೆ ಮೀಸಲಿಡುತ್ತೇನೆ. ಇಬ್ಬರೂ ಉದ್ಯೋಗದಲ್ಲಿ ಇರುವುದರಿಂದ ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಮನಸ್ಸಿದ್ದರೆ ಮಾರ್ಗವಿದೆ ಎಂಬುದಕ್ಕೆ ನಮ್ಮ ಕೈತೋಟವೇ ಉದಾಹರಣೆ’ ಎನ್ನುತ್ತಾರೆ ಕಿರಣಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು