ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಸಿ ನೀಡಲು ಹಿಜಾಬ್‌ ತೆಗೆಯಬೇಕೆಂದರು: ಕಹಿ ನೆನಪುಗಳ ಬಿಚ್ಚಿಟ್ಟ ಅಲಿಯಾ

ಹುಡುಗಿಯರ ಸಮಾವೇಶದಲ್ಲಿ ಹಿಜಾಬ್‌ ಹೋರಾಟದ ಕಹಿ ನೆನಪುಗಳ ಬಿಚ್ಚಿಟ್ಟ ಅಲಿಯಾ
Last Updated 16 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಹಿಜಾಬ್‌ಗೆ ಅವಕಾಶ ಇಲ್ಲದ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಮನಸ್ಸಿರಲಿಲ್ಲ. ನಮಗೆ ವರ್ಗಾವಣೆ ಪ್ರಮಾಣಪತ್ರ (ಟಿ.ಸಿ.) ಕೊಡಬೇಕಾದರೂ ಹಿಜಾಬ್‌ ತೆಗೆಯಬೇಕೆಂದರು. ಟಿ.ಸಿ.ಗಾ‌ಗಿ ಸಹಪಾಠಿ ಮುಸ್ಕಾನ್‌ ಆರು ಸಲ ಕಾಲೇಜಿಗೆ ಅಲೆ
ಯಬೇಕಾಯಿತು. ಎಷ್ಟೇ ಸತಾಯಿಸಿದರೂ ಸಂವಿಧಾನ ಬದ್ಧ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹಿಜಾಬ್‌ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಉಡುಪಿಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ ಹೇಳಿದರು.

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವತಿಯಿಂದ ಶನಿವಾರಇಲ್ಲಿ ಏರ್ಪಡಿಸಿದ್ದ ‘ಹುಡುಗಿಯರ ಸಮಾವೇಶ’ದಲ್ಲಿ ಅವರು ಹಿಜಾಬ್‌ ಹೋರಾಟದ ಕಹಿ ನೆನಪುಗಳನ್ನು ಬಿಚ್ಚಿಟ್ಟರು.

‘ಈ ಹೋರಾಟದಿಂದ ಸಂಯಮ ಕಲಿತಿದ್ದೇವೆ. ನನ್ನ ಭಾರತ ಎತ್ತ ಸಾಗುತ್ತಿದೆ ಎಂಬುದು ತಿಳಿಯಿತು. ಸುಪ್ರೀಂ ಕೋರ್ಟ್‌, ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂಬ ವಿಶ್ವಾಸವಿದೆ. ಶಿಕ್ಷಣ ಮುಂದುವರಿಸುತ್ತೇವೆ. ಘನತೆಯಿಂದ ಹಿಜಾಬ್‌ ಧರಿಸಿಯೇ ಕಾಲೇಜಿಗೆ ಹೋಗುತ್ತೇವೆ’ ಎಂದರು.

ಇದೇ ವೇಳೆ ಕೆಲ ಮಾಧ್ಯಮಗಳ ವರ್ತನೆ ಬಗ್ಗೆಯೂ ಅಲಿಯಾ ಅವರು ಬೇಸರ ತೊಡಿಕೊಂಡರು.

ಹಿಜಾಬ್‌ ಹೋರಾಟಗಾರ್ತಿ ಮಂಗಳೂರಿನ ಗೌಸಿಯಾ, ‘ಕಲಿಯಬೇಕಾದ ಪಾಠಗಳನ್ನು ಕೈಬಿಟ್ಟು ಕಲಿಯಬಾರದ್ದನ್ನೆಲ್ಲ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಚುಚ್ಚುವುದಕ್ಕಾಗಿ ಎಬಿವಿಪಿ ವಿದ್ಯಾರ್ಥಿಗಳಿಗೆ ತ್ರಿಶೂಲ ದೀಕ್ಷೆ ನೀಡಲಾಗುತ್ತಿದೆ. ಇಂತಹ ವಿದ್ಯಾರ್ಥಿಗಳ ತಾಯಂದಿರು ತಮ್ಮ ಮಕ್ಕಳ ಭವಿಷ್ಯ ಏನಾಗುತ್ತಿದೆ ಎಂದು ಒಮ್ಮೆ ಯೋಚಿಸಬೇಕು’ ಎಂದರು.

ಸಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್‌.ಸಾಜಿದ್‌, ರಾಜ್ಯ ಘಟಕದ ಅಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ, ಸಾಮಾಜಿಕ ಕಾರ್ಯಕರ್ತೆಯರಾದ ಗುಜರಾತಿನ ಕುಂಕುಮ್‌ಬೆನ್‌ ರಾಥೋಡ್‌, ಡಾ.ರುಕ್ಸಾನಾ ಹಸನ್‌, ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸಿಎಫ್ಐ ಘಟಕದ ಅಧ್ಯಕ್ಷ ಫೌಜಿಯಾ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT