ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗಳ ತಾಣವಾಗುತ್ತಿದೆ ಮಂಗಳೂರಿನ ನೇತ್ರಾವತಿ ಸೇತುವೆ

Last Updated 6 ಜನವರಿ 2020, 4:31 IST
ಅಕ್ಷರ ಗಾತ್ರ

ಮಂಗಳೂರು: ನಗರದ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಆತ್ಮಹತ್ಯೆಗಳ ತಾಣವಾಗಿ ಬದಲಾಗುತ್ತಿದೆ. ಸಾಲು, ಸಾಲು ಆತ್ಮಹತ್ಯೆ ಪ್ರಕರಣಗಳು ಇಲ್ಲಿ ನಡೆಯುತ್ತಿವೆ. ಈ ಬೆಳವಣಿಗೆ ಒಂದೆಡೆ ಪೊಲೀಸರ ನಿದ್ದೆಗೆಡಿಸಿದ್ದರೆ, ಇನ್ನೊಂದೆಡೆ ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚುತ್ತಿದೆ.

ಕೇರಳ– ಕರ್ನಾಟಕ– ಗೋವಾ ಸಂಪರ್ಕದ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗದಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಈ ಸೇತುವೆ ಬರೋಬ್ಬರಿ 812 ಮೀಟರ್‌ಗಳಷ್ಟು ಉದ್ದವಿದೆ. ಇದು ಕರ್ನಾಟಕದ ಮೂರನೇ ಅತಿ ಉದ್ದದ ಸೇತುವೆ. ವಾಹನ ದಟ್ಟಣೆ ಹೆಚ್ಚಿದ್ದರಿಂದ ಹಳೆಯ ಸೇತುವೆ ಜತೆಗೆ ಮತ್ತೊಂದು ಹೊಸ ಸೇತುವೆಯನ್ನು ನಿರ್ಮಿಸಲಾಯಿತು. 2014ರಲ್ಲಿ ಎರಡನೇ ಮಾರ್ಗವನ್ನೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಸೇತುವೆ ನಿರ್ಮಾಣವಾದ ದಿನದಿಂದಲೂ ಇಲ್ಲಿ ಆಗಾಗ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇದ್ದವು. ಕೆಲವು ವರ್ಷಗಳಿಂದೀಚೆಗೆ ಇಲ್ಲಿ ಬಂದು ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಈಚೆಗೆ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೆಲವೊಮ್ಮೆ ಒಂದೇ ವಾರದ ಅವಧಿಯಲ್ಲಿ ಎರಡರಿಂದ ಮೂರು ಮಂದಿ ಇಲ್ಲಿ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.

2019ರ ಜುಲೈ 29ರಂದು ಇದೇ ಸೇತುವೆಯ ಮೇಲಿನಿಂದ ನದಿಗೆ ಧುಮುಕಿದ್ದ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಅದೇ ಸ್ಥಳದಲ್ಲಿ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದೇ ಬುಧವಾರ (ಜನವರಿ 1) ಸುರತ್ಕಲ್‌ ನಿವಾಸಿ ನೌಷಾದ್‌ ಎಂಬುವವರು ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡೇ ದಿನಗಳ ಅಂತರದಲ್ಲಿ (ಶುಕ್ರವಾರ) ಕುತ್ತಾರು ನಿವಾಸಿಯಾಗಿದ್ದ ಯುವ ಉದ್ಯಮಿ ನವೀಶ್‌ ಕೊಟ್ಟಾರಿ ಅದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರಿಗೆ ತಲೆನೋವು

ಹೀಗೆ ಒಂದೇ ಸ್ಥಳದಲ್ಲಿ ಸಾಲು, ಸಾಲು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸೇತುವೆಯ ಒಂದು ಭಾಗ ಕಂಕನಾಡಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಸೇರಿದ್ದರೆ, ಇನ್ನೊಂದು ಭಾಗ ಉಳ್ಳಾಲ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿದೆ. ಎರಡೂ ಠಾಣೆಗಳ ಸಿಬ್ಬಂದಿ ಎಷ್ಟೇ ಹರಸಾಹಸ ಮಾಡಿದರೂ ಇಲ್ಲಿ ಆತ್ಮಹತ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.

ಉದ್ಯಮಿ ಸಿದ್ದಾರ್ಥ ಆತ್ಮಹತ್ಯೆಯ ಬಳಿಕ ಕೆಲವು ದಿನಗಳ ಕಾಲ ಸೇತುವೆ ಬಳಿ ಪೊಲೀಸ್‌ ಕಾವಲು ಹಾಕಲಾಗಿತ್ತು. ಆದರೆ, ಸೇತುವೆಯ ಒಂದು ತುಂದಿಯಿಂದ ಇನ್ನೊಂದು ತುದಿಗೆ 812 ಮೀಟರ್‌ ದೂರ ಇರುವುದರಿಂದ ಒಬ್ಬರೋ, ಇಬ್ಬರೋ ಸಿಬ್ಬಂದಿಯನ್ನು ನಿಯೋಜಿಸಿ ಏನೂ ಪ್ರಯೋಜನವಾಗದು ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಗಿತ್ತು.

‘ನಿತ್ಯವೂ ಸೇತುವೆಯ ಮೇಲೆ ಆಗಾಗ ಪೊಲೀಸರು ಗಸ್ತು ತಿರುಗುತ್ತೇವೆ. ಎಷ್ಟು ನಿಗಾ ವಹಿಸಿದರೂ ನಮ್ಮ ಕಣ್ತಪ್ಪಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸೇತುವೆ ಬಳಿ ಕಾವಲು ಕಾಯೋದು, ಆತ್ಮಹತ್ಯೆ ಮಾಡಿಕೊಂಡವರ ಶವಕ್ಕಾಗಿ ಶೋಧ ನಡೆಸೋದೆ ದೊಡ್ಡ ಕೆಲಸವಾಗುತ್ತಿದೆ’ ಎಂದು ಎರಡೂ ಠಾಣೆಗಳ ಪೊಲೀಸ್‌ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಾಮಗಾರಿಗೆ ಎನ್‌ಎಚ್‌ಎಐ ನಿರಾಸಕ್ತಿ

ಸೇತುವೆ ಮೇಲಿನಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಸೇತುವೆಯುದ್ದಕ್ಕೂ ಫೈಬರ್‌ ಗ್ಲಾಸ್‌ ಅಳವಡಿಸಿ ತಡೆಗೋಡೆ ನಿರ್ಮಿಸುವ ಪ್ರಸ್ತಾವವನ್ನು ಶಾಸಕರಾದ ಯು.ಟಿ.ಖಾದರ್‌ ಮತ್ತು ಡಿ.ವೇದವ್ಯಾಸ ಕಾಮತ್‌ ಜಿಲ್ಲಾಡಳಿತದ ಮುಂದಿಟ್ಟಿದ್ದರು. ಸೇತುವೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸ್‌ ನಿಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವಂತೆಯೂ ಬೇಡಿಕೆ ಇಟ್ಟಿದ್ದರು.

ಆದರೆ, ಸೇತುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವ್ಯಾಪ್ತಿಯಲ್ಲಿದೆ. ಈ ಕಾಮಗಾರಿಗೆ ಪ್ರಾಧಿಕಾರ ಹೆಚ್ಚೇನೂ ಆಸಕ್ತಿ ತೋರುತ್ತಿಲ್ಲ. ಜಿಲ್ಲಾಡಳಿತ ಅಥವಾ ಶಾಸಕರ ಅನುದಾನದಿಂದ ಕಾಮಗಾರಿ ನಡೆಸುವುದಕ್ಕೆ ಅನುಮತಿಯನ್ನೂ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT