ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಯೇ ಶಿಕ್ಷೆಯಾಗುವ ವ್ಯವಸ್ಥೆ ಬದಲಾಗಲಿ: ಅಬ್ದುಲ್ ನಜೀರ್‌

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಿಮತ
Last Updated 14 ಆಗಸ್ಟ್ 2022, 4:02 IST
ಅಕ್ಷರ ಗಾತ್ರ

ಮಂಗಳೂರು: ‘ಸದ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣಾ ಪ್ರಕ್ರಿಯೆಯೇ ಆರೋಪಿಗೆ ಶಿಕ್ಷೆಯಂತಾಗಿದೆ. ‘ಜೈಲಿಗೆ ಬದಲು ಜಾಮೀನು’ ಎಂಬ ಘೋಷಣೆ ಅರ್ಥ ಕಳೆದುಕೊಳ್ಳುತ್ತಿದೆ. ಆದ್ದರಿಂದವಿಚಾರಾಣಾಧೀನ ಕೈದಿಗಳ ಜಾಮೀನಿಗೆ ಸಂಬಂಧಿಸಿದ ನಿಯಮಗಳಲ್ಲಿ ತಿದ್ದುಪಡಿ ಆಗಬೇಕಾಗಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌. ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.

ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ಬೆಳ್ಳಿಹಬ್ಬದ ದತ್ತಿ ಉಪನ್ಯಾಸ ನೀಡಿದ ಅವರು, ‘ಎಷ್ಟೋ ವಿಚಾರಾಣಾಧೀನ ಕೈದಿಗಳನ್ನು 10–15 ವರ್ಷ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಆರೋಪಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಈ ಪೈಕಿ ಶೇ 90ರಷ್ಟು ಮಂದಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗುತ್ತದೆ. ಅಷ್ಟರಲ್ಲಿ ಅವರ ಆಯುಸ್ಸು, ಸಂಪತ್ತು ಎಲ್ಲವೂ ಕರಗಿಹೋಗಿರುತ್ತದೆ’ ಎಂದು ಹೇಳಿದರು.

‘ದೇಶದ ಕಾರಾಗೃಹಗಳಲ್ಲಿ ಇರುವ ಒಟ್ಟು ಆರು ಲಕ್ಷ ಕೈದಿಗಳ ಪೈಕಿ ಶೇ 80 ಮಂದಿ ವಿಚಾರಣಾಧೀನ ಕೈದಿಗಳು. ವಾಸ್ತವದಲ್ಲಿ, ಅಪರಾಧಿ ಎಂದು ಸಾಬೀತಾದ ನಂತರವೇ ಜೈಲಿಗೆ ಹಾಕಬೇಕು. ಈ ಕುರಿತು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಬಾರಿ ಚರ್ಚೆಗಳು ಆಗಿವೆ. ಆದರೆ ಪರಿಸ್ಥಿತಿ ಬದಲಾಗಲಿಲ್ಲ’ ಎಂದ ಅವರು ಸುಪ್ರೀಂ ಕೋರ್ಟಿನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ‘ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿದ್ದು ಶಿಕ್ಷಿಸುವುದು ಆಯ್ಕೆಗೆ ಬಿಟ್ಟ ವಿಷಯ’ ಎಂದರು.

‘ಆರೋಪಿಯ ವರ್ತನೆ, ಸಾಮಾಜಿಕ ಹಿನ್ನೆಲೆ, ಅಪರಾಧದ ಮಟ್ಟ ಮುಂತಾದವುಗಳನ್ನು ಜಾಮೀನು ನೀಡದೇ ಇರಲು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಸಂದರ್ಭದಲ್ಲೂ ಜಾಮೀನು ನೀಡದೇ ಇರುವುದಕ್ಕೇ ಆದ್ಯತೆ ಸಿಗುತ್ತದೆ. ಕೆಲವು ಸಂದರ್ಭದಲ್ಲಿ ಆರೋಪಿಯ ಆರ್ಥಿಕ ಸ್ಥಿತಿಯೂ ಕಾರಣವಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇಕಡಾ 14ರಷ್ಟು ಆರೋಪಿಗಳಿಗೆ ಜಾಮೀನು ಪಡೆದುಕೊಳ್ಳಲು ಬೇಕಾದ ಪೂರಕ ಪ‍ರಿಸ್ಥಿತಿ ಇಲ್ಲ. ಅಪರಾಧ ದಂಡ ಸಂಹಿತೆಯಲ್ಲಿ ಈ ಕುರಿತು ಚರ್ಚೆ ಆಗಬೇಕು’ ಎಂದು ಅವರು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್‌.ಬಲ್ಲಾಳ್, ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಸತೀಶ್‌ಚಂದ್ರ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ತಾರಾನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT