ಅಂಗಡಿಯಿಂದ ಹಣ, ಮೊಬೈಲ್ ಕಳವು: ಮೂವರ ಬಂಧನ

7

ಅಂಗಡಿಯಿಂದ ಹಣ, ಮೊಬೈಲ್ ಕಳವು: ಮೂವರ ಬಂಧನ

Published:
Updated:
Prajavani

ಪುತ್ತೂರು: ತಾಲ್ಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿರುವ ಅಂಗಡಿಯೊಂದರಿಂದ ಶುಕ್ರವಾರ ಸಂಜೆ ನಗದು ಹಣ ಹಾಗೂ ಮೊಬೈಲೊಂದನ್ನು ಕಳವು ಮಾಡಿದ ಒಬ್ಬ ಬಾಲಕ ಸಹಿತ ಮೂವರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿ ಅಬೂಬಕ್ಕರ್ ಅವರ ಪುತ್ರ ಸಿರಾಜುದ್ದೀನ್ (23), ಬೆಳ್ತಂಗಡಿ ತಾಲ್ಲೂಕಿನ ನೇಜಿಕಾರು ನಿವಾಸಿ ಇಸಾಕ್ ಅವರ ಪುತ್ರ ಮಹಮ್ಮದ್ ರಿಯಾಝ್ (18) ಹಾಗೂ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕನ ವಿರುದ್ದ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿರುವ ಅಬ್ಬಾಸ್ ಎಂಬುವವರಿಗೆ ಸೇರಿದ ಒಣಮೀನು-ದಿನಸಿ ಅಂಗಡಿಯಿಂದ ಆರೋಪಿಗಳು ಕಳವಿಗೆ ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅಬ್ಬಾಸ್ ಅವರಿಗೆ ಅನಾರೋಗ್ಯದ ಕಾರಣ ಅಂಗಡಿಯನ್ನು ಅವರ ಅಳಿಯ ಸುಳ್ಯದ ಅಯ್ಯನಕಟ್ಟೆ ನಿವಾಸಿ ಮಹಮ್ಮದ್ ಅಶ್ರಫ್ ಎಂಬುವರು ಕಳೆದ 2 ವರ್ಷಗಳಿಂದ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಅವರು ₹5 ಸಾವಿರ  ನಗದನ್ನು ಮೇಜಿನ ಡ್ರಾವರ್‌ನಲ್ಲಿಟ್ಟು, ಹಿಂಬದಿಯಲ್ಲಿರುವ ತಮ್ಮ ಮನೆಗೆ ಹೋಗಿದ್ದ ವೇಳೆ ಆರೋಪಿಗಳು ಹಣ ಹಾಗೂ ಅಲ್ಲೇ ಇದ್ದ ಮೊಬೈಲ್ ಫೋನ್‌ ಕಳವು ಮಾಡಿದ್ದರು.

ಮಹಮ್ಮದ್ ಅಶ್ರಫ್ ಅಹಿಂತಿರುಗಿ ಬರುತ್ತಿದ್ದಂತೆಯೇ ಆರೋಪಿಗಳು ಆತುರಾತುರವಾಗಿ ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಸಂಶಯಗೊಂಡ ವರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮಾಹಿತಿಯರಿತ ಸ್ಥಳೀಯರು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಕೊಂದೆಲ್‌ಕಾನ ಎಂಬಲ್ಲಿ ಪತ್ತೆ ಮಾಡಿ ಹಿಡಿದಿದ್ದರು.

ಮಹಮ್ಮದ್ ಅಶ್ರಫ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಆರೋಪಿಗಳಾದ ಮಹಮ್ಮದ್ ರಿಯಾಝ್ ಮತ್ತು ಸಿರಾಜುದ್ದೀನ್ನನ್ನು ಶನಿವಾರ ಪುತ್ತೂರು ನ್ಯಾಯಾಲಯಕ್ಕೆ ಹಾಗೂ ಬಾಲಕನನ್ನು ಮಂಗಳೂರಿನ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !