ಕಾಮಗಾರಿ ಮುಗಿಸದಿದ್ದರೆ ಟೋಲ್ ಬಂದ್
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದರೆ, ತಲಪಾಡಿಯಿಂದ ಸಾಸ್ತಾನದವರೆಗಿನ ಎಲ್ಲ ನಾಲ್ಕು ಟೋಲ್ ಸಂಗ್ರಹ ಕೇಂದ್ರಗಳನ್ನು ಬಂದ್ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ‘2010ರಲ್ಲಿ ಆರಂಭವಾದ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ. ಶೇಕಡ 90ರಷ್ಟು ಕಾಮಗಾರಿ ಮುಗಿದಿದೆ ಎಂದು ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸುಳ್ಳು ವರದಿ ನೀಡಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬಾಕಿ ಇರುವ ಕಾಮಗಾರಿಯನ್ನು ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಟೋಲ್ ಸಂಗ್ರಹಕ್ಕೆ ತಡೆಯೊಡ್ಡಲಾಗುವುದು’ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ಗುತ್ತಿಗೆದಾರರು ಶಾಮೀಲಾಗಿ ಎರಡೂ ಜಿಲ್ಲೆಗಳ ಜನರ ಹಣವನ್ನು ದೋಚುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಮುಗಿಯಲು ಕ್ರಮ ಕೈಗೊಳ್ಳಬೇಕಾದ ಸಂಸದ ನಳಿನ್ಕುಮಾರ್ ಕಟೀಲ್ ಈ ಬಗ್ಗೆ ಭರವಸೆ ನೀಡಿ ಮರೆತಿದ್ದಾರೆ. ಜಿಲ್ಲಾಧಿಕಾರಿಗಳ ಮಾತನ್ನೂ ಗುತ್ತಿಗೆದಾರರು ಕೇಳುತ್ತಿಲ್ಲ. ಈ ಕಾರಣದಿಂದ ಎರಡೂ ಜಿಲ್ಲೆಗಳ ಹೋರಾಟಗಾರರು, ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜೊತೆ ವಿಲೀನ ಮಾಡುವ ಭರವಸೆ ಈಡೇರಿಲ್ಲ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಗುಂಡಿಗಳು ಇವೆ. ರಸ್ತೆಯ ನಿರ್ವಹಣೆ ಕಾಮಗಾರಿ ನಡೆಯುತ್ತಿಲ್ಲ. ಶೇಕಡ 25ರಷ್ಟು ಕೂಡ ಸರ್ವೀಸ್ ರಸ್ತೆ ಇಲ್ಲ. ಪ್ರಭಾವಿ ವ್ಯಕ್ತಿಗಳು ಮತ್ತು ಬಂಡವಾಳಷಾಹಿಗಳ ಒತ್ತಡಕ್ಕೆ ಮಣಿದು ಕೆಲವು ಸ್ಥಳಗಳಲ್ಲಿ ಮೂಲ ನಕ್ಷೆಯನ್ನು ಬದಲಾಯಿಸಿ ರಸ್ತೆ ನಿರ್ಮಿಸಲಾಗಿದೆ. ಈ ಎಲ್ಲ ಅಕ್ರಮಗಳ ಬಗ್ಗೆಯೂ ತನಿಖೆಗೆ ಆಗ್ರಹಿಸಲಾಗುವುದು ಎಂದರು.
ಆಗಸ್ಟ್ 16ರಂದು ಎರಡೂ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಾಲ್ಕು ಟೋಲ್ ಸಂಗ್ರಹ ಕೇಂದ್ರಗಳಿಗೂ ಏಕಕಾಲದಲ್ಲಿ ಮುತ್ತಿಗೆ ಹಾಕಿ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗವುದು ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಕೆ.ಅಶ್ರಫ್, ಪದಾಧಿಕಾರಿಗಳಾದ ಪ್ರತಾಪ್ ಶೆಟ್ಟಿ, ಶೇಖರ ಹೆಜಮಾಡಿ, ವಿಶ್ವಾಸ್ ಅಮೀನ್, ಮಹಾಬಲ, ಸಿದ್ದಿಕ್ ತಲಪಾಡಿ, ಅರ್ಷದ್ ವರ್ಕಾಡಿ, ಹಸನ್ ಮಾಡೂರು, ಮೂಸಾ ತಲಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.