ಮಂಗಳೂರು: ‘ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನ ಮಾಡಿದ ಬಳಿಕವೂ ಮಂಗಳೂರು ನೋಂದಣಿ ಸಂಖ್ಯೆಯ (ಕೆ.ಎ.19) ವಾಹನಗಳಿಗೆ ಸುಂಕ ವಿನಾಯಿತಿ ಮುಂದುವರಿಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಯವರು ಸುಂಕ ನಿಗದಿಗೆ ನಿಯಮ ರೂಪಿಸುವಾಗ ಸುಂಕ ವಿನಾಯಿತಿ ನೀಡಲು ಅವಕಾಶ ಇದೆ’ ಎಂದರು.
‘ಬಿ.ಸಿ.ರೋಡ್‌ನಿಂದ ಸುರತ್ಕಲ್‌ವರೆಗೆ₹360 ಕೋಟಿ ವೆಚ್ಚದಲ್ಲಿ 36 ಕಿ.ಮೀ ಉದ್ದದ ಬಂದರು ಸಂಪರ್ಕ ರಸ್ತೆ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಈ ಕಾಮಗಾರಿಗೆ ಒಟ್ಟು ₹ 465 ಕೋಟಿ ಬಿಲ್ ಪಾವತಿಸಲಾಗಿದೆ. ಇದರ ಬಂಡವಾಳ ವೆಚ್ಚದಲ್ಲಿ ನವಮಂಗಳೂರು ಬಂದರು ಮಂಡಳಿಯ (ಎನ್‌ಎಂಪಿಟಿ) ಶೇ 25ರಷ್ಟು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಶೇ 75ರಷ್ಟು ಭರಿಸಿವೆ. ಹೂಡಿದ ಬಂಡವಾಳದಲ್ಲಿ ₹ 130 ಕೋಟಿ ಇನ್ನೂ ವಾಪಸ್ ಬರಬೇಕಿದೆ ಎಂದು ಎನ್‌ಎಚ್‌ಎಐ ಪ್ರತಿಪಾದಿಸುತ್ತಿದೆ. |ಇದು ಕೇಂದ್ರ ಸರ್ಕಾರದ್ದೇ ದುಡ್ಡು. ಶಾಸಕರಿಗೆ ಹಾಗೂ ಸಂಸದರಿಗೆ ಇಚ್ಛಾಶಕ್ತಿ ಇದ್ದರೆ ಎರಡು ಟೋಲ್‌ಗೇಟ್‌ಗಳ ವಿಲೀನದ ಬದಲು ಸುರತ್ಕಲ್ ಟೋಲ್‌ಗೇಟ್ ರದ್ದುಪಡಿಸಲು ಕೇಂದ್ರ ಭೂಸಾರಿಗೆ ಸಚಿವರನ್ನು ಒತ್ತಾಯಿಸಬಹುದಿತ್ತು. ಆಗ ಟೋಲ್‌ಗೇಟ್ ರದ್ದಾಗುತ್ತಿತ್ತು’ ಎಂದು ಪ್ರಶ್ನೆಯೊಂದಕ್ಕೆ ಖಾದರ್ ಉತ್ತರಿಸಿದರು.
‘ಹೆಜಮಾಡಿ ಟೋಲ್‌ಗೇಟ್‌ನಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದಾಗ ಅನ್ಯಾಯಕ್ಕೆ ಒಳಗಾಗುವವರು ಮೂಲ್ಕಿ–ಮೂಡುಬಿದಿರೆ ಕ್ಷೇತ್ರದವರು. ಅಲ್ಲಿನ ಶಾಸಕರು ಈ ವಿಚಾರದಲ್ಲಿ ಏಕೆ ಮೌನ ವಹಿಸಿದ್ದಾರೆ’ ಎಂದು ಪ್ರಶ್ನಿಸಿದರು.
’ಹೋರಾಟ ನಡೆಯದಿದ್ದರೆ ಟೋಲ್‌ಗೇಟ್ ರದ್ದಾಗುತ್ತಿರಲಿಲ್ಲ. ಊಟ, ನಿದ್ರೆ ಬಿಟ್ಟು ಅನಿರ್ದಿಷ್ಟಾವಧಿ ಧರಣಿ ನಡೆಸಿದವರಿಗೆಇದರ ಶ್ರೇಯ ಸಲ್ಲಬೇಕು. ಧರಣಿಯ ಸ್ಥಳಕ್ಕೆ ಸ್ಥಳೀಯ ಶಾಸಕರು ಒಮ್ಮೆಯೂ ಭೇಟಿ ನೀಡಿಲ್ಲ. ವಿಧಾನಸಭೆಯಲ್ಲೂ ಈ ಬಗ್ಗೆ ಒಮ್ಮೆಯೂ ಮಾತನಾಡದ ಅವರು ಟೋಲ್‌ಗೇಟ್ ರದ್ದಾದ ಬಳಿಕ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ’ ಎಂದು ಟೀಕಿಸಿದರು.
‘2013ರಲ್ಲಿ ಟೋಲ್‌ನಿಂದ ಜನರಿಗೆ ಸಮಸ್ಯೆ ಆಗಿರಲಿಲ್ಲ. ಹೆಜಮಾಡಿಯಲ್ಲಿ ಟೋಲ್ ನಿರ್ಮಾಣವಾದ ಬಳಿಕವಷ್ಟೇ ಸಮಸ್ಯೆ ಆರಂಭವಾಗಿದೆ. ಕೇಂದ್ರದಲ್ಲಿ ಎಂಟು ವರ್ಷಗಳಿಂದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಇಲ್ಲಿನ ಸಂಸದರೂ ಅವರ ಪಕ್ಷದವರೇ. ಆದರೂ ಇಷ್ಟರವರೆಗೆ ಏಕೆ ಸಮಸ್ಯೆ ಬಗೆಹರಿಸಿಲ್ಲ’ ಎಂದು ಖಾದರ್ ಪ್ರಶ್ನಿಸಿದರು.
‘ಟೋಲ್‌ಗೇಟ್ ರದ್ದತಿ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ. ಆಗ ಎನ್‌ಎಚ್‌ಎಐ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆ’ ಎಂದರು.
ಹಾಲು ದರ ಹೆಚ್ಚಳ ಸಲ್ಲದು: ‘ಜನರು ಮೊದಲೇ ಸಂಕಷ್ಟದಲ್ಲಿದ್ದಾರೆ. ಈ ಹಂತದಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹ 3ರಷ್ಟು ಹೆಚ್ಚಿಸುವ ಆಲೋಚನೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಏಕೆ ಬಂತೋ ಗೊತ್ತಿಲ್ಲ. ಈ ಪ್ರಸ್ತಾವವನ್ನು ಮುಂದೂಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರೆ ಸಾಲದು. ಈ ಪ್ರಸ್ತಾವವನ್ನೇ ಹಿಂದಕ್ಕೆ ಪಡೆಯಬೇಕು’ ಎಂದು ಖಾದರ್ ಒತ್ತಾಯಿಸಿದರು.
ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸುವುದಾಗಿ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ‘ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಯಾವುದೇ ವ್ಯಕ್ತಿಯ ಪ್ರತಿಮೆ ನಿರ್ಮಿಸಿದರೂ ಸ್ವಾಗತಿಸುತ್ತೇವೆ’ ಎಂದರು.
ಮೈಸೂರಿನಲ್ಲಿ ಬಸ್ ಪ್ರಯಾಣಿಕರ ತಂಗುದಾಣದ ಮೇಲೆ ಗುಂಬಜ್‌ಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ಒಡೆಯುವುದಾಗಿ ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಖಾದರ್, ‘ನಮ್ಮದು ಊರುಗಳನ್ನು ಮತ್ತು ಮನಸುಗಳನ್ನು ಕಟ್ಟುವ ಸಂಸ್ಕೃತಿ. ಅವರದ್ದು ಒಡೆಯುವ ಸಂಸ್ಕೃತಿ. ಅವರು ಜನರ ಮನಸುಗಳನ್ನು ಒಡೆಯುತ್ತಾರೆ. ನಾವು ಮನಸುಗಳನ್ನು ಕಟ್ಟುತ್ತೇವೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ ಹಾಗೂ ಮೋಹನ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.