ಮಂಗಳವಾರ, ಡಿಸೆಂಬರ್ 6, 2022
21 °C

ಸುರತ್ಕಲ್ ಟೋಲ್‍ಗೇಟ್ ತೆರವು: ನಳಿನ್ ವಿರುದ್ಧ ಖಾದರ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಸುರತ್ಕಲ್ ಟೋಲ್‍ಗೇಟ್ ತೆರವುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ಜನಪರ ಹೋರಾಟದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್‍ ಅವರು ಲಘುವಾಗಿ ಮಾತನಾಡಿದ್ದಾರೆ. ಅವರದ್ದು ಪಲಾಯನವಾದದ ಹೇಳಿಕೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಆಸ್ಕರ್‌ ಫರ್ನಾಂಡಿಸ್‌ ಕೇಂದ್ರ ಸಚಿವರಾಗಿದ್ದಾಗ  ಹೆಜಮಾಡಿ ಹಾಗೂ ತಲಪಾಡಿ ಟೋಲ್‌ಗಳು ಇರಲಿಲ್ಲ ಎಂಬ ಜ್ಞಾನವೂ ಸಂಸದರಿಗೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಗೇಟ್‌ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ್ದು ಕೇಂದ್ರದ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು. ಇಂತಿಷ್ಟು ದಿನಗಳ ಒಳಗೆ ಟೋಲ್‌ಗೇಟ್‌ ರದ್ದುಪಡಿಸುವುದಾಗಿ ಗಡುವು ನೀಡಿದ್ದು ಸಂಸದ ನಳಿನ್‌ ಕುಮಾರ್‌. ಸುರತ್ಕಲ್‌ ಟೋಲ್‌ಗೇಟ್‌ ಕಾನೂನುಬಾಹಿರ ಎಂದು  ವಿಧಾನ ಮಂಡಲದ ಅಧಿವೇಶನದಲ್ಲಿ ಸಚಿವರೇ ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲ ಆದ ಬಳಿಕವೂ ಸರ್ಕಾರ ಟೋಲ್‌ ತೆರವುಗೊಳಿಸಿಲ್ಲ. ಹಾಗಾಗಿ ಜನ ಹೋರಾಟ ನಡೆಸುತ್ತಿದ್ದಾರೆ’ ಎಂದರು.

‘ಕೇಂದ್ರ ಸಚಿವರ ಬಳಿಗೆ ಹೋರಾಟಗಾರರ ಪ್ರತಿನಿಧಿಗಳನ್ನು ಕರೆದೊಯ್ದು ಸಂಸದರು ಸಭೆ ನಡೆಸಬಹುದಿತ್ತು. ಆ ತಾಕತ್ತು ಸಂಸದರಿಗೆ ಇಲ್ಲವೇ’ ಎಂದು ಖಾದರ್ ಪ್ರಶ್ನಿಸಿದರು.

‘ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಕರ ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯದ ಒಂಬತ್ತು ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಒಂಬತ್ತು ಮಂದಿಯಲ್ಲಿ ಏಳು ಮಂದಿಗೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೇಮಕಾತಿ ಆದೇಶ ನೀಡಿರುವುದು ಬಯಲಾಗಿದೆ. ಬಿಜೆಪಿಯವರು ಈ ಬಗ್ಗೆ ಈಗ ಸೊಲ್ಲೆತ್ತುತ್ತಿಲ್ಲ. ಈ ಪ್ರಕರಣದ ತನಿಖೆಯನ್ನೂ ಮುಚ್ಚಿಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

‘ನಳಿನ್‌ ಕುಮಾರ್‌ ಅವರು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಟೀಕಿಸಿದ್ದಾರೆ.  ಬೆಂಗಳೂರು ನಗರವನ್ನು ನಿರ್ಮಿಸಲು ಕೆಂಪೇಗೌಡರು ನೀಡಿದ ಕೊಡುಗೆಗಳ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ. ಹಾಗಾಗಿಯೇ ಈ ರೀತಿ ಮಾತನಾಡಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಬಾಜಿಲ್ ಡಿಸೋಜಾ, ಪ್ರಕಾಶ್ ಕಾಪಿಕಾಡ್, ಸಂದೀಪ್ ಇದ್ದರು.

‘ಟೋಲ್‌ಗೇಟ್‌ ಪ್ರತಿಭಟನೆ ರಾಜಕೀಯ ನಾಟಕ’
‘ಕಾಂಗ್ರೆಸ್‌ ಸರ್ಕಾರ ಇದ್ದಾಗ ಟೋಲ್‌ಗೇಟ್‌ ರದ್ಧತಿಗೆ ಒತ್ತಾಯಿಸಿ ಹೋರಾಟ ಮಾಡದೇ, ಈಗ ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ನಾಟಕ’ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್‌ ಟೀಕಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಎಲ್ಲರಿಗೂ ಅವಕಾಶ ಇದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಈಗ ಪ್ರತಿಭಟನೆ ಮಾಡುತ್ತಿರುವವರು ಕೇಂದ್ರದಲ್ಲಿ ಆಸ್ಕರ್‌ ಫರ್ನಾಂಡಿಸ್‌ ಅವರು ಭೂಸಾರಿಗೆ ಸಚಿವರಾಗಿದ್ದಾಗ ಏಕೆ ಮನವಿ ಸಲ್ಲಿಸಿಲ್ಲ. ಆಗ ಏಕೆ ಪ್ರತಿಭಟನೆ ನಡೆಸಿಲ್ಲ’ ಎಂದು ಪ್ರಶ್ನಿಸಿದರು.

‘ಟೋಲ್‌ಗೇಟ್‌ ತೆರವಿಗೆ ಸಂಬಂಧಿಸಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೇ ಉತ್ತರ ನೀಡಿದ್ದಾರೆ. ನಿಯಮಗಳ ಪ್ರಕಾರವೇ ಟೋಲ್‌ಗೇಟ್‌ ತೆರವು ಕಾರ್ಯ ನಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು