ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ, ಶಾಸಕರು ರಾಜೀನಾಮೆ ನೀಡಲಿ: ಮುನೀರ್ ಕಾಟಿಪಳ್ಳ

ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹ
Last Updated 17 ಜೂನ್ 2022, 11:49 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ನೀಡಿರುವ ಗಡುವು ಮುಗಿಯಲು ಕೆಲವೇ ದಿನಗಳು ಬಾಕಿ ಇದ್ದು, ಟೋಲ್‌ಗೇಟ್ ತೆರವುಗೊಳಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಸಂಸದ ಮತ್ತು ಶಾಸಕರು ರಾಜೀನಾಮೆ ನೀಡಬೇಕು ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ‘60 ಕಿ.ಮೀ ಒಳಗಿರುವ ಎಲ್ಲ ಟೋಲ್ ಸಂಗ್ರಹ ಕೇಂದ್ರಗಳನ್ನು 90 ದಿನಗಳ ಒಳಗೆ ತೆರವುಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸಚಿವರ ಹೇಳಿಕೆಯನ್ನು ಸ್ಥಳೀಯ ಸಂಸದ ನಳಿನ್‌ಕುಮಾರ್ ಕಟೀಲ್ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿ ಪುನರುಚ್ಚರಿಸಿದ್ದರು. ಜೂ.22ಕ್ಕೆ ಅವರು ಹೇಳಿರುವ 90 ದಿನಗಳು ಪೂರ್ಣಗೊಳ್ಳುತ್ತವೆ. ಆದರೆ, ಟೋಲ್‌ ಕೇಂದ್ರ ತೆರವಿಗೆ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ’ ಎಂದರು.

ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾಗಿದ್ದ ಸುರತ್ಕಲ್ ಟೋಲ್‌ ಕೇಂದ್ರವು ಏಳು ವರ್ಷಗಳಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿದೆ. ಈ ಬಾರಿ ನಿಗದಿತ ಅವಧಿಯಲ್ಲಿ ಕೇಂದ್ರ ಮುಚ್ಚದಿದ್ದರೆ, ಹೋರಾಟ ಸಮಿತಿ ವತಿಯಿಂದ ಟೋಲ್ ಮುತ್ತಿಗೆ ಕಾರ್ಯಕ್ರಮ ನಡೆಸಲಾಗುವುದು ಮತ್ತು ನಿರಂತರ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಸಾಕ್ಷ್ಯ ಒದಗಿಸಿ: ‘ಸುರತ್ಕಲ್ ಟೋಲ್‌ ಗೇಟ್ ವಿರೋದಿ ಹೋರಾಟಗಾರರು ಹಣ ಪಡೆದಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಸಾಕ್ಷ್ಯಸಮೇತ ಆರೋಪ ಮಾಡಲಿ. ಹಣಪಡೆದವರ ಗುರುತು ಬಹಿರಂಗಪಡಿಸಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಹಣ ಪಡೆದವರ ಮಾಹಿತಿ ಇದ್ದರೆ, ಅವರ ವಿರುದ್ಧ ದೂರು ದಾಖಲಿಸಿ, ಹಣ ಪಡೆದವರನ್ನು ಜೈಲಿಗೆ ಕಳುಹಿಸಲಿ’ ಎಂದು ಸವಾಲೆಸೆದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಪುರುಷೋತ್ತಮ ಚಿತ್ರಾಪುರ, ಎಂ. ದೇವದಾಸ್, ವೈ. ರಾಘವೇಂದ್ರ ರಾವ್, ರಮೇಶ್ ಕೋಟ್ಯಾನ್, ದಿನೇಶ್ ಕುಂಪಲ, ಬಿ.ಕೆ. ಇಮ್ತಿಯಾಜ್, ಪ್ರತಿಭಾ ಕುಳಾಯಿ, ಶೇಖರ ಹೆಜಮಾಡಿ, ಮೂಸಬ್ಬ ಪಕ್ಷಿಕೆರೆ, ರಘು ಎಕ್ಕಾರು, ಟಿ.ಎನ್.ರಮೇಶ್, ಶ್ರೀನಾಥ ಕುಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT