ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಕಲೆ ಉಳಿಸಿದ್ದು ಕರಾವಳಿ: ಪ್ರದೀಪ ಕುಮಾರ ಕಲ್ಕೂರ

ಟೊರೊಂಟೊದಲ್ಲಿ 200 ಮಕ್ಕಳಿಗೆ ಯಕ್ಷಗಾನ ತರಬೇತಿ
Last Updated 3 ಮಾರ್ಚ್ 2022, 5:19 IST
ಅಕ್ಷರ ಗಾತ್ರ

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜುಪ್ರಸಾದ’ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ‘ಕೆನಡಾದಲ್ಲಿ ಯಕ್ಷಗಾನ’ ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನದ ಕೊಡುಗೆ ಮಹತ್ತರವಾದುದು. ಹಲವು ಕಡೆ ಯಕ್ಷಗಾನ ಕಲೆ ವ್ಯಾಪಕವಾಗಿ ಬೆಳೆದರೂ ಈ ಕಲೆಯನ್ನು ಉಳಿಸಿದ್ದು ಕರಾವಳಿಯೇ. ಯಕ್ಷಗಾನ ವಿಶ್ವಕಲೆಯಾಗಿ ಬೆಳಗಬೇಕು. ಈ ನಿಟ್ಟಿನಲ್ಲಿ ಟೊರೊಂಟೊ- ಕೆನಡಾ ‘ಯಕ್ಷಮಿತ್ರ’ ಸಂಘಟನೆಯ ಸಾಧನೆ ಮೆಚ್ಚುವಂತಹುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಸಂಸ್ಥೆಯ ನಿರ್ದೇಶಕ ರಾಘು ಕಟ್ಟಿನಕೆರೆ ಮಾತನಾಡಿ, ‘ಕೆನಡಾದ ಟೊರೊಂಟೊದಲ್ಲಿ ಈ ಸಂಘಟನೆ ಸುಮಾರು 200 ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಶುದ್ಧ ಕನ್ನಡ ಪದಗಳ ಬಳಕೆಗೆ ಪ್ರಯತ್ನಿಸುತ್ತಿದೆ. ಯಕ್ಷಗಾನ ನಾಟ್ಯ, ಅರ್ಥಗಾರಿಕೆ, ಗಮಕದ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದೆ. ಅರ್ಥಧಾರಿ ಡಾ. ಎಂ.ಪ್ರಭಾಕರ ಜೋಶಿ ಅವರು ಕೆನಡಾಕ್ಕೆ ಬಂದು ಮಾರ್ಗದರ್ಶನ ನೀಡಿದ್ದು ಯಕ್ಷ ಮಿತ್ರರಿಗೆ ಬಹಳ ಪ್ರಯೋಜನ ನೀಡಿದೆ’ ಎಂದರು.

ಕೆನಡಾ ಟೊರೊಂಟೊದ ಚರಿತ್ರೆಯ ಬಗ್ಗೆ ಯಕ್ಷಗಾನ ಪ್ರಸಂಗ ರಚಿಸಿ ಪ್ರದರ್ಶನ ನೀಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಯಕ್ಷಗಾನ ಆಸಕ್ತರನ್ನು ಶೋಧಿಸಿ ಸಂಘಟನೆಯನ್ನು ಬಲಪಡಿಸಲು ಉಂಟಾದ ಸಮಸ್ಯೆಗಳನ್ನು ಅವರು ವಿವರಿಸಿದರು.

ಬಿಜೆಪಿ ರಾಜ್ಯ ಘಟಕದ ವಕ್ತಾರ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ, ‘ಯಕ್ಷಗಾನ ಸಾಂಸ್ಕೃತಿಕ ಕಲೆಯಾಗಿದ್ದು, ಪ್ರತಿ ಮನೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು’ ಎಂದರು. ಕೆನಡಾ ಟೊರೊಂಟೊದ ‘ಯಕ್ಷಮಿತ್ರ’ ಬಳಗದ ರಾಘು ಕಟ್ಟಿನಕೆರೆ ಅವರನ್ನು ಸನ್ಮಾನಿಸಲಾಯಿತು.

ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೇರಾಜೆ, ಪಿ.ವಿ. ಪರಮೇಶ್, ಪ್ರಾಂಶುಪಾಲ ಶಂಕರ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ಸುಮಂಗಲಾ ರತ್ನಾಕರ್, ಪೂರ್ಣಿಮಾ ಯತೀಶ್, ವಿಜಯಲಕ್ಷ್ಮೀ ಬಿ. ಶೆಟ್ಟಿ, ಸದಾಶಿವ ಮಾಸ್ಟರ್ ಕೋಟೆಕಾರು, ಪಣಂಬೂರು ವಾಸುದೇವ ಐತಾಳ್ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT