ಮಂಗಳೂರು: ಮುಸ್ಸಂಜೆಯ ಸೂರ್ಯಾಸ್ತದ ಸೊಬಗು, ಅಲೆಗಳ ಹೊಯ್ದಾಟದ ಬೆರಗು, ಸೋಂಕುವ ತಂಗಾಳಿಯ ಸುಖ.. ಈ ಸುಖವನ್ನು ಅನುಭವಿಸಿದ ಪ್ರತಿಯೊಬ್ಬನಿಗೂ ಕಡಲತಡಿಯ ನಿವಾಸಿಯಾಗಬೇಕು ಅನ್ನಿಸದೇ ಇರದು. ಆದರೆ, ಮಳೆಗಾಲ ಬಂತೆಂದರೆ ಇಲ್ಲಿ ರುದ್ರ ಭಯಾನಕ ಸನ್ನಿವೇಶ ಸೃಷ್ಟಿಯಾಗುತ್ತದೆ. ಇಲ್ಲಿನ ನಿವಾಸಿಗಳಿಗೆ ನಿದ್ದೆ ಇಲ್ಲದ ರಾತ್ರಿಗಳು ಶುರುವಾಗುತ್ತವೆ. ಅಲೆಗಳ ಅಬ್ಬರದಲ್ಲಿ ನೆಲ–ನೆಲೆ ಕೊಚ್ಚಿ ಹೋಗಬಹುದೆಂಬ ದುಗುಡದಲ್ಲಿ ದಿನ ಕಳೆಯುತ್ತಾರೆ.
ಮೀನುಗಾರಿಕೆ ಮೂಲಕ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಕಡಲು, ಮಳೆಗಾಲದಲ್ಲಿ ರೌದ್ರ ರೂಪಿಯಾಗಿ, ದಂಡೆಯಂಚಿನ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತದೆ. ದಶಕಗಳಿಂದ ಕಾಡುತ್ತಿರುವ ಈ ಕಡಲ್ಕೊರೆತ ಸಮಸ್ಯೆ, ರಾಜಕಾರಣಿಗಳು, ಜನಪ್ರತಿನಿಧಿಗಳ ನಡುವಿನ ವಾಕ್ಸಮರಕ್ಕೆ ವಸ್ತುವಾಗಿದೆಯೇ ವಿನಾ ಸಮಸ್ಯೆಗೆ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.
ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಬಟ್ಟಪ್ಪಾಡಿ, ಮೊಗವೀರ ಪಟ್ಣ, ಸೀಗ್ರೌಂಡ್, ನ್ಯೂ ಉಚ್ಚಿಲ, ಕೋಟೆಪುರ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನಕಳಿಯ, ಸಸಿಹಿತ್ಲು ಈ ಪ್ರದೇಶಗಳಲ್ಲಿ ಈ ವರ್ಷವೂ ಕಡಲ್ಕೊರೆತದ ಸಮಸ್ಯೆ ತಗ್ಗಿಲ್ಲ. ಕಡಲತಡಿಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆ, ಕಡಲು ಅದಕ್ಕೆ ಪ್ರತಿರೋಧ ತೋರುತ್ತಿದ್ದು, ಮಳೆಗಾಲದಲ್ಲಿ ತನ್ನ ಆಕ್ರೋಶವನ್ನು ಹೊರಗಿಕ್ಕುತ್ತಿದೆ.
‘ಈ ಬಾರಿ ನನ್ನ ಅಕ್ಕನ ಮನೆ ಮುರಿದು ಬಿದ್ದಿದೆ. ಕಳೆದ ವರ್ಷ ಕುಸಿದಿದ್ದ ಪಕ್ಕದ ಮನೆ ಈಗ ಸಮುದ್ರಗೊಳಗೆ ಸೇರಿದೆ. ಆ ಮನೆಯವರಿಗಿನ್ನೂ ಪೂರ್ಣ ಪರಿಹಾರ ದೊರೆತಿಲ್ಲ. ಸಮೀಪದ ಮಸೀದಿ ಕಟ್ಟಡ ಮುರಿದಿದೆ. ನಾವು ಮನೆ ಖಾಲಿ ಮಾಡಿದ್ದೇವೆ. ಪತ್ನಿಯ ಅಕ್ಕನ ಮನೆಯಲ್ಲಿ ವಾಸವಾಗಿ ಒಂದೂವರೆ ತಿಂಗಳಾಯಿತು. ಎಷ್ಟು ದಿನ ಬೇರೆಯವರ ಮನೆಯಲ್ಲಿ ವಾಸ ಮಾಡುವುದು? ಪುರಸಭೆಯವರು ಬಾಡಿಗೆ ಮನೆಗೆ ಹೋಗಿ, ಮೂರು ತಿಂಗಳ ಬಾಡಿಗೆ ಕೊಡುತ್ತೇವೆ ಎನ್ನುತ್ತಾರೆ. ಮೂರು ತಿಂಗಳ ನಂತರ ಯಾರು ಬಾಡಿಗೆ ಕೊಡಬೇಕು’ ಎಂದು ಪ್ರಶ್ನಿಸುತ್ತಾರೆ ತೆಂಗಿನಕಾಯಿ ಕೊಯ್ದು ಜೀವನ ನಡೆಸುವ ಬಟ್ಟಪ್ಪಾಡಿ ನಿವಾಸಿ ಹಸೈನಾರ್.
‘ಪತ್ನಿಯ ಆರೋಗ್ಯ ಸರಿಯಿಲ್ಲ, ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ನನ್ನ ದುಡಿಮೆಯೇ ಆಸರೆ. ಮನೆಯೊಂದು ಬಿಟ್ಟರೆ ಬೇರೆ ಯಾವ ಆಸ್ತಿಯೂ ಇಲ್ಲ. ಎಲ್ಲಿ ನೆಲೆ ಕಂಡುಕೊಳ್ಳುವುದು ತೋಚದಾಗಿದೆ’ ಎಂದು ಅವರು ಅಲವತ್ತುಕೊಂಡರು.
ಏನೆಲ್ಲ ಕಂಡೆ: ‘ಈ ಮನೆಗೆ ಬಂದುಳಿದು 35 ವರ್ಷಗಳ ಗತಿಸಿದವು. ಕಡಲಿನ ನಾನಾ ರೂಪಗಳನ್ನು ಕಂಡಿದ್ದೇನೆ. ನಾವಿಲ್ಲಿ ಬರುವಾಗ ಸಮುದ್ರ ಅರ್ಧ ಕಿ.ಮೀ ದೂರದಲ್ಲಿತ್ತು. ನಮ್ಮ ಮನೆಯ ಮುಂದಿನ ಜಾಗದಲ್ಲಿ ಮೂರು ಅಂತಸ್ತಿನ ರೆಸಾರ್ಟ್, ಮನೆಗಳು ಇದ್ದವು. ಸಮುದ್ರ ಮುಂದೆ ಬಂದ ಮೇಲೆ ಇವು ಅಸ್ತಿತ್ವವೇ ಇಲ್ಲದಂತೆ ಅಳಿದು ಹೋಗಿವೆ. ಅವುಗಳ ಕುರುಹು ಸಮುದ್ರದ ಅಡಿಯಲ್ಲಿ ಸೇರಿದೆ. ಬ್ರೇಕ್ ವಾಟರ್ ಹಾಕಿದ್ದೇ ನಮಗೆ ಮುಳುವಾಗಿದೆ. 11 ವರ್ಷಗಳಿಂದ ಕಡಲ್ಕೊರೆತ ಹೆಚ್ಚಾಗಿದೆ’ ಎನ್ನುತ್ತಾರೆ 80 ವರ್ಷದ ಹಾಜಿರಾ.
‘ಪ್ರತಿವರ್ಷ ಮಳೆಗಾಲ ಬಂದಾಗ ರಾಜಕಾರಣಿಗಳ ಮೆರವಣಿಗೆ ಆರಂಭವಾಗುತ್ತದೆ. ಹಿಂದೆಲ್ಲ ನಾವು ಭರವಸೆಯ ಸುರಿಮಳೆಗೆ ಮರುಳಾಗುತ್ತಿದ್ದೆವು. ಆದರೆ, ಯಾವ ಸಮಸ್ಯೆಯೂ ಪರಿಹಾರವಾಗಿಲ್ಲ. ಮನೆ ಕಳೆದುಕೊಂಡವರಿಗೆ ಪರ್ಯಾಯ ಜಾಗದ ಭರವಸೆ ಇನ್ನೂ ಕೈಗೂಡಿಲ್ಲ. ಈಗ ವಾಸ್ತವ ಅರಿವಾಗುತ್ತಿದೆ. ಕಡಲ್ಕೊರೆತ ಜೋರಾದಾಗ ಟಿಪ್ಪರ್‌ನಲ್ಲಿ ಕಲ್ಲು ತಂದು ಸುರಿಯುತ್ತಾರೆ. ಅದನ್ನು ವ್ಯವಸ್ಥಿತವಾಗಿ ಜೋಡಿಸುವುದೂ ಇಲ್ಲ. ಅಲೆಯ ಅಬ್ಬರಕ್ಕೆ ಕಲ್ಲು ಮರಳಿನಡಿ ಸೇರುತ್ತದೆ. ಕಲ್ಲನ್ನು ಸರಿಯಾಗಿ ಜೋಡಿಸಿ, ಎತ್ತರಕ್ಕೆ ಏರಿಸಿದರೆ, ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾದರೂ ಸಿಗುತ್ತಿತ್ತು. ಸಮಸ್ಯೆ ಪರಿಹಾರ ಆಗುವುದು ಯಾರಿಗೂ ಬೇಕಿಲ್ಲ. ನೋಡಲು ಬಂದವರ ಪ್ರಶ್ನೆಗಳಿಗೆ ಉತ್ತರಿಸಲೂ ಬೇಸರವಾಗಿ, ಇಲ್ಲಿನ ನಿವಾಸಿಗಳು ಮೌನಕ್ಕೆ ಶರಣಾಗಿದ್ದೇವೆ’ ಎಂದ ಬಟ್ಟಪ್ಪಾಡಿಯ ಮಹಿಳೆಯೊಬ್ಬರು ತಮ್ಮ ಹೆಸರನ್ನು ಉಲ್ಲೇಖಿದಂತೆ ವಿನಂತಿಸಿದರು.
ನೆಲಕಚ್ಚಿದ ಪ್ರವಾಸೋದ್ಯಮ: ಸುರಕ್ಷಿತ ಸ್ಥಳ ಇರುವ ಜಾಗಕ್ಕೆ ಸಮುದ್ರದ ನೀರಿನಲ್ಲಿ ಆಟವಾಡಲು ಪ್ರವಾಸಿಗರು ಬರುತ್ತಾರೆ. ಸಮುದ್ರದ ದಂಡೆಯಲ್ಲಿ ಕಲ್ಲು ರಾಶಿ ಬಂದು ಬಿದ್ದ ಮೇಲೆ ಪ್ರವಾಸೋದ್ಯಮ ಈ ಭಾಗದಲ್ಲಿ ನೆಲಕಚ್ಚಿದೆ. ಮಳೆಗಾಲ ಮಾತ್ರವಲ್ಲ, ಉಳಿದ ಕಾಲದಲ್ಲೂ ಪ್ರವಾಸಿಗರು ಬರುವುದು ಕಡಿಮೆಯಾಗಿದೆ. ಎರಡು ತಿಂಗಳುಗಳಿಂದ ಅತಿಥಿಗಳು ಇಲ್ಲ. ಆಗಸ್ಟ್‌ನಲ್ಲೂ ಈವರೆಗೆ ಯಾವುದೇ ಮುಂಗಡ ಬುಕ್ಕಿಂಗ್ ಇಲ್ಲ. ಕೆಲಸಗಾರರಿಗೆ ಸಂಬಳ ಕೊಡುವುದೂ ಕಷ್ಟವಾಗಿದೆ ಎಂದು ಪ್ರತಿಕ್ರಿಯಿಸಿದರು ನ್ಯೂ ವಾಸ್ಕೊ ರೆಸಾರ್ಟ್‌ನ ರಾಜೇಶ್.
ತಡೆಗೋಡೆ ನಿರ್ಮಿಸಿ: ಮೀನಕಳಿಯಲ್ಲಿ ಈ ಬಾರಿ ಕೂಡ ಕಡಲ್ಕೊರೆತ ಜೋರಾಗಿದೆ. ಸದ್ಯಕ್ಕೆ ಜಂಬೊ ಬ್ಯಾಗ್‌ಗಳನ್ನು ಇಡಲಾಗಿದೆ. ಕಡಲ್ಕೊರೆತ ಇನ್ನೂ ಹೆಚ್ಚಾದರೆ ಇದು ತಡೆಯದು. ಸುಮಾರು 30 ಮನೆಗಳಿಗೆ ಹಾನಿಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ₹25 ಕೋಟಿ ವೆಚ್ಚ ತಡೆಗೋಡೆ ನಿರ್ಮಾಣದ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈಗ ಅದು ನನೆಗುದಿಗೆ ಬಿದ್ದಿದೆ. ಬೈಕಂಪಾಡಿ, ಮೀನಕಳಿಯ, ಕೂರಿಕಟ್ಟಾ ಪ್ರದೇಶದಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಬಡ ಮೀನುಗಾರರು. ತಲೆಮಾರಿನಿಂದ ನಿಲ್ಲಿಯೇ ನೆಲೆ ಕಂಡುಕೊಂಡವರು. ಕಡಲ್ಕೊರೆತ ಅವರ ಬದುಕನ್ನು ಛಿದ್ರಗೊಳಿಸಿದೆ. ಇಲ್ಲಿನ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುತ್ತಾರೆ ಅರವಿಂದ್ ಬೆಂಗ್ರೆ.
ನಾಡದೋಣಿ ಅವಲಂಬಿತ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ನಾಡದೋಣಿ ಮೀನುಗಾರಿಕೆಗೆ ಪೂರಕವಾದ ತಡೆಗೋಡೆ ಇಲ್ಲಿ ನಿರ್ಮಿಸಿದರೆ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯತ್ತದೆ ಎಂಬುದು ಅವರ ಸಲಹೆ.
ಕಡಲ್ಕೊರೆತ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಎನ್‌ಐಟಿಕೆ ತಜ್ಞರಿಂದ ಅಧ್ಯಯನ ಮಾಡಿಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುದಾನ ಬಿಡುಗಡೆಗೆ ವಿನಂತಿಸಲಾಗಿದೆ.ಯು.ಟಿ.ಖಾದರ್ ಸ್ಪೀಕರ್
ಮನೆ ಅಪಾಯದಲ್ಲಿರುವುದರಿಂದ ಮನೆ ಬಿಟ್ಟು ಬಂದಿದ್ದೇವೆ. ವಾಸಿಸಲು ಮನೆ ಇಲ್ಲ ಬದಲಿ ನಿವೇಶನ ನೀಡಿದರೆ ಅಲ್ಲಿಗೆ ಹೋಗಲು ಸಿದ್ಧರಿದ್ದೇವೆ.ಹಸೈನಾರ್ ಬಟ್ಟಪ್ಪಾಡಿ ನಿವಾಸಿ
‘ಶಾರ್ಟ್ ಸೀ ಗ್ರೊಯನ್ಸ್ ಮಾದರಿ’ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿಕೆ) ಪ್ರೊ. ಕಿರಣ್ ಶ್ರೀಲಾಲ್ ನೇತೃತ್ವದ ತಜ್ಞರ ತಂಡವು ಕಡಲ್ಕೊರೆತ ಪ್ರದೇಶದ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಸರ್ಕಾರಕ್ಕೆ ₹88 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ. ಬಟ್ಟಪ್ಪಾಡಿಯಲ್ಲಿ ಹೆಚ್ಚು ಹಾನಿಯಾಗಿದೆ. ಅಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯವನ್ನು ಪುನರ್ ನಿರ್ಮಿಸಬೇಕಾಗಿದೆ. ಪ್ರಸ್ತಾವದಲ್ಲಿ ಕಡಲ್ಕೊರೆತ ಸಂಭವಿಸುವ ಬಟ್ಟಪ್ಪಾಡಿ ಸೋಮೇಶ್ವರ ಮೊಗವೀರ ಪಟ್ಣ ಕುಳಾಯಿ ಚಿತ್ರಾಪುರ ಮೀನಕಳಿಯ ಸಸಿಹಿತ್ಲು ಪ್ರದೇಶಗಳು ಒಳಗೊಂಡಿವೆ ಎಂದು ಕರ್ನಾಟಕ ಬಂದರು ಮತ್ತು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ತಿಳಿಸಿದರು. ‘ಶಾರ್ಟ್ ಟಿ ಗ್ರೊಯನ್ಸ್’ (t groynes) ಮಾದರಿಯನ್ನು ತಜ್ಞರ ತಂಡ ಸೂಚಿಸಿದೆ. ಇದು ಕಡಲ್ಕೊರೆತ ತಡೆಗೆ ಸಹಕಾರಿಯಾಗಲಿದೆ. ವಿದೇಶದಲ್ಲೂ ಈ ಮಾದರಿ ಪ್ರಚಲಿತದಲ್ಲಿದೆ ಎಂದು ಬಂದರು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಕಡಲ ತಳಭಾಗ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ತೀರ ಪ್ರದೇಶದಲ್ಲಿ ನೀರಿನ ಆಳವೂ ಬೇರೆಯಾಗಿರುತ್ತದೆ. ಅಲೆಗಳ ಶಕ್ತಿ ಸಂಚಯ ಅಲೆಗಳ ಶಿಕೆಯ ದಿಕ್ಕು ಬದಲಾಗುವುದಕ್ಕೆ ಇದು ಕೂಡ ಕಾರಣ. ಅಲೆಗಳ ಶಕ್ತಿ ಸಂಚಯಕ್ಕೆ ಅನುಗುಣವಾಗಿ ಕಡಲ್ಕೊರೆತ ತೀವ್ರತೆ ಬದಲಾಗುತ್ತದೆ. ಪ್ರತಿಯೊಂದು ಕಡಲ ತೀರದ ಭೌಗೋಳಿಕ ವಾತಾವರಣ ಭಿನ್ನವಾಗಿರುತ್ತದೆ. ಆಯಾ ಪ್ರದೇಶದ ಅಧ್ಯಯನ ನಡೆಸಿ ಹೊಂದಿಕೆಯಾಗುವ ಮಾದರಿಯನ್ನು ರೂಪಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಕೈಬಿಟ್ಟ ನೆಲ್ಲಿಕುನ್ನು ಮಾದರಿ ಕಾಸರಗೋಡಿನ ಉದ್ಯಮಿ ಯು.ಕೆ.ಯೂಸುಫ್ ಎಂಬುವರು ಕಡಲ್ಕೊರೆತ ತಡೆಗೆ ‘ಸೀ ವೇವ್ ಬ್ರೇಕರ್’ ಮಾದರಿ ಅಳವಡಿಸಿದ್ದರು. ಕಾಸರಗೋಡು ಜಿಲ್ಲೆಯ ನೆಲ್ಲಿಕುನ್ನು ಎಂಬಲ್ಲಿ ಅವರು ಈ ಮಾದರಿಯ ತಡೆಗೋಡೆ ನಿರ್ಮಿಸಿದ್ದರು. ಇದರ ನಂತರ ಅಲ್ಲಿ ಕಡಲ್ಕೊರೆತ ಸಂಭವಿಸಿಲ್ಲ ಎಂದು ಪ್ರತಿಪಾದಿಸಿದ್ದರು. ಇದರ ಬಗ್ಗೆ ಆಸಕ್ತಿ ತೋರಿದ್ದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕಾ ಸಚಿವರಾಗಿದ್ದ ಎಸ್. ಅಂಗಾರ ಅವರು ನೆಲ್ಲಿಕುನ್ನು ಮಾದರಿ ಅಧ್ಯಯನಕ್ಕೆ ತಂಡ ಕರ್ನಾಟಕದ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದರು. ಸೀ ವೇವ್ ಬ್ರೇಕರ್ ಮಾದರಿ ಅಳವಡಿಸಲು ಚಿಂತನೆ ನಡೆದಿತ್ತು. ಅಷ್ಟರಲ್ಲಿ ಮಳೆಗಾಲ ಮುಗಿದು ಕಡಲ ಅಬ್ಬರ ನಿಂತಿದ್ದರಿಂದ ಯೋಜನೆ ಅನುಷ್ಠಾನದ ಕಾವು ತಣ್ಣಗಾಗಿತ್ತು. ಆದರೆ ಈ ಮಾದರಿಯೂ ಈಗ ವಿಫಲಗೊಂಡಿದೆ. ಅಲ್ಲಿ ಮತ್ತೆ ಸಮಸ್ಯೆ ಆರಂಭವಾಗಿದೆ. ಹೀಗಾಗಿ ಈ ಮಾದರಿ ಅಳವಡಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
‘ಛತ್ರಿ ಖರ್ಚೇ ದೊಡ್ಡದಾಯ್ತು..’ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತಕ್ಕೆ ರಸ್ತೆ ಕೊಚ್ಚಿ ಹೋಗಿ ಎರಡು ವರ್ಷಗಳಾದವು. ಬೇರೆಯವರ ತೋಟದ ಮೂಲಕ ಮನೆ ತಲುಪಬೇಕು. ಮನೆವರೆಗೆ ವಾಹನ ತರಲು ರಸ್ತೆಯಿಲ್ಲ. ಸಿಲಿಂಡರ್ ಖಾಲಿಯಾದರೆ ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸಮಸ್ಯೆಗಳೊಂದಿಗೆ ಬದುಕುವ ಜೀವನ ಅಭ್ಯಾಸವಾಗಿದೆ. ಆದರೆ ಈ ಮಳೆಗಾಲ ಬಂದರೆ ಮಕ್ಕಳಿಗೆ ಛತ್ರಿ ಖರ್ಚೇ ದೊಡ್ಡದಾಗುತ್ತದೆ. ಸಮುದ್ರದಂಚಿನಲ್ಲಿ ಗಾಳಿಯ ವೇಗ ಜಾಸ್ತಿ. ತೆಂಗಿನ ತೋಟ ಹಾಯ್ದು ಮಕ್ಕಳು ಶಾಲೆಗೆ ಹೋಗುತ್ತಾರೆ. ಗಾಳಿಯ ಅಬ್ಬರಕ್ಕೆ ವಾರಕ್ಕೆರಡು ದಿನ ಛತ್ರಿಯ ಕಡ್ಡಿ ಮುರಿಯುತ್ತದೆ. ಒಂದು ಮಳೆಗಾಲಕ್ಕೆ ಮೂರ್ನಾಲ್ಕು ಛತ್ರಿ ಬೇಕಾಗುತ್ತದೆ’ ಎಂದು ಬಟ್ಟಪ್ಪಾಡಿಯ ಮಹಿಳೆಯೊಬ್ಬರು ತಮ್ಮ ಆರನೇ ಕ್ಲಾಸಿನ ಮಗನಿಗೆ ಈಗಾಗಲೇ ಎರಡು ಛತ್ರಿ ಕೊಡಿಸಿದ ಕಥೆ ಬಿಚ್ಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.