ಶಿರಾಡಿ ಘಾಟಿಯಲ್ಲಿ ಸಂಚಾರ ಇನ್ನಷ್ಟು ವಿಳಂಬ

7
ಅಂತಿಮ ಹಂತದ ಕಾಮಗಾರಿಗೆ ಅಡ್ಡಿಯಾದ ಮಳೆ

ಶಿರಾಡಿ ಘಾಟಿಯಲ್ಲಿ ಸಂಚಾರ ಇನ್ನಷ್ಟು ವಿಳಂಬ

Published:
Updated:
ಎರಡನೇ ಹಂತದ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿರುವ ಶಿರಾಡಿ ಘಾಟಿ ರಸ್ತೆಯ ಒಂದು ಭಾಗ./ ಪ್ರಜಾವಾಣಿ ಚಿತ್ರ– ಗೋವಿಂದರಾಜ ಜವಳಿ.

ಮಂಗಳೂರು: ಶಿರಾಡಿ ಘಾಟಿ ರಸ್ತೆಯ ಅಂತಿಮ ಹಂತದ ಕಾಮಗಾರಿಗೆ ಮಳೆ ಅಡ್ಡಿಯಾಗಿದ್ದು, ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ವಾಹನ ಸಂಚಾರ ಆರಂಭ ಇನ್ನೂ ಕೆಲವು ದಿನಗಳ ಕಾಲ ವಿಳಂಬವಾಗಲಿದೆ.

ಜೂನ್‌ 30ರಂದು ಎರಡನೇ ಹಂತದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕೆಲಸ ಪೂರ್ಣಗೊಂಡಿತ್ತು. 15 ದಿನಗಳ ಕ್ಯೂರಿಂಗ್‌ ಬಳಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಲಾಗಿತ್ತು. ನಿಗದಿಯಂತೆ ಜುಲೈ 15ಕ್ಕೆ ವಾಹನ ಸಂಚಾರ ಆರಂಭವಾಗಬೇಕಿತ್ತು. ಆದರೆ, ರಸ್ತೆ ಬದಿಯನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ.

ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭಿಸುವ ಕುರಿತು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸೋಮವಾರ ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ರಸ್ತೆ ಬದಿಯನ್ನು (ಶೋಲ್ಡರ್‌) ಸಜ್ಜುುಗೊಳಿಸುವ ಕೆಲಸ ಮುಗಿಯದೇ ವಾಹನ ಸಂಚಾರ ಆರಂಭಿಸಿದರೆ ಅವಘಡಗಳು ಸಂಭವಿಸಬಹುದು ಎಂಬ ಆತಂಕವನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮುಂದಿಟ್ಟಿದ್ದಾರೆ. ಈ ಕಾರಣದಿಂದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಗಣೇಶ್, ‘ಶಿರಾಡಿ ಘಾಟಿಯಲ್ಲಿ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಶೋಲ್ಡರ್ ಕಾಮಗಾರಿಗೆ ಅಡ್ಡಿಯಾಗಿದೆ. ಶೋಲ್ಡರ್‌ ಕೆಲಸ ಮುಗಿಯದೇ ವಾಹನ ಸಂಚಾರ ಆರಂಭಿಸಿದರೆ ಬದಿಯಲ್ಲಿ ಹೋದ ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಯವರಿಂದ ವರದಿ ಪಡೆದ ಬಳಿಕವೇ ದಿನಾಂಕ ನಿಗದಿ ಮಾಡಲು ಸಚಿವರು ನಿರ್ಧರಿಸಿದ್ದಾರೆ’ ಎಂದರು.

ಮೊದಲ ಹಂತದಲ್ಲಿ 13.62 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿತ್ತು. ಎರಡನೇ ಹಂತದಲ್ಲಿ 12.38 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಕಾಂಕ್ರೀಟ್‌ ತಡೆಗೋಡೆ ನಿರ್ಮಿಸುವ ಕೆಲಸವೂ ಒಂದು ವಾರದಲ್ಲಿ ಮುಗಿಯಲಿದೆ. ಆದರೆ, ಮಳೆಯ ಕಾರಣದಿಂದ ಶೋಲ್ಡರ್‌ಗೆ ಕಲ್ಲುಮಿಶ್ರಿತ ಮಣ್ಣು (ಗ್ರಾವಲ್‌) ಸುರಿದು, ಸಮತಟ್ಟು ಮಾಡುವ ಕೆಲಸ ಪೂರ್ಣಗೊಳ್ಳಲು ಇನ್ನೂ 15 ದಿನ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಕಾಂಕ್ರೀಟ್‌ ರಸ್ತೆ ಮತ್ತು ಶೋಲ್ಡರ್‌ ನಡುವಿನ ಅಂತರ ಒಂದು ಅಡಿಗೂ ಹೆಚ್ಚಿದೆ. ಶೋಲ್ಡರ್‌ ಸಮತಟ್ಟು ಮಾಡದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಬದಿಗೆ ಹೋದ ವಾಹನಗಳು ಅಪಘಾತಕ್ಕೀಡಾಗುವ ಅಪಾಯವಿದೆ. ಮಳೆಯ ನಡುವೆಯೇ ಮಣ್ಣು ಸುರಿದು ಸಮತಟ್ಟು ಮಾಡಿದರೆ ಕೆಸರು ಸೃಷ್ಟಿಯಾಗಬಹುದು. ಬಾಕಿ ಇರುವ ಕೆಲಸವನ್ನು ವಾಹನ ಸಂಚಾರದ ನಡುವೆಯೇ ನಿರ್ವಹಿಸುವುದು ಅಸಾಧ್ಯ ಕೂಡ ಎಂಬ ಆತಂಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಲ್ಲಿದೆ.

ಜಿಲ್ಲಾಧಿಕಾರಿ ಭೇಟಿ

ಲೋಕೋಪಯೋಗಿ ಸಚಿವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಸೋಮವಾರ ಶಿರಾಡಿ ಘಾಟಿಗೆ ಭೇಟಿನೀಡಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಘಾಟಿಯುದ್ದಕ್ಕೂ ಸಂಚರಿಸಿದ ಜಿಲ್ಲಾಧಿಕಾರಿ ವಾಹನ ಸಂಚಾರ ಆರಂಭಕ್ಕೂ ಮುನ್ನ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಿದ್ದಾರೆ. ವಾಸ್ತವಿಕ ಸ್ಥಿತಿ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ‘ನಾನು ಖುದ್ದಾಗಿ ರಸ್ತೆ ಪರಿಶೀಲನೆ ಮಾಡಿದ್ದೇನೆ. ಮಳೆಯಿಂದ ಕೆಲಸ ತಡವಾಗುತ್ತಿದೆ. ಜುಲೈ 15ಕ್ಕೆ ವಾಹನ ಸಂಚಾರ ಆರಂಭಿಸಬೇಕೆಂಬ ಆಶಯದಿಂದ ಎಲ್ಲರೂ ಪ್ರಯತ್ನಿಸುತ್ತಿದ್ದೇವೆ. ಆದರೆ, ಮಳೆ ಕಡಿಮೆ ಆಗದಿದ್ದರೆ ಕಾಮಗಾರಿ ಮುಗಿಯುವಾಗ ಸ್ವಲ್ಪ ವಿಳಂಬ ಆಗಬಹುದು. ಯಾವುದೇ ರೀತಿಯ ಅವಘಡಗಳಿಗೆ ಅವಕಾಶವಾಗದ ರೀತಿಯಲ್ಲಿ ರಸ್ತೆಯನ್ನು ಸಜ್ಜುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ನೀಡಬೇಕಿದೆ’ ಎಂದರು.


ಕಾಂಕ್ರೀಟ್‌ ರಸ್ತೆ ಆರಂಭವಾಗುವ ಗುಂಡ್ಯ ಬಳಿ ತಾತ್ಕಾಲಿಕ ಬ್ಯಾರಿಕೇಡ್‌ ಅಳವಡಿಸಲಾಗಿದೆ   – ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !