ಮಂಗಳೂರು: 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಕರಾವಳಿ ಉತ್ಸವ ಮೈದಾನದಿಂದ ರಾಷ್ಟ್ರಕವಿ ಗೋವಿಂದ ಪೈ ವೃತ್ತದವರೆಗೆ ತ್ರಿವರ್ಣ ಯಾತ್ರೆ ನಡೆಯಿತು.
75 ಮೀ ಉದ್ದದ ತ್ರಿವರ್ಣ ಧ್ವಜ ಈ ಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು.
ಕರಾವಳಿ ಉತ್ಸವ ಮೈದಾನದಿಂದ ಹೊರಟ ಮೆರವಣಿಗೆ ಲಾಲ್ ಭಾಗ್ ತಲುಪಿದಾಗ ಪಾಲಿಕೆ ಕಚೇರಿ ಎದುರಿನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಕ್ಯಾ.ಬ್ರಿಜೇಶ್ ಚೌಟ ಮಾಲಾರ್ಪಣೆ ಮಾಡಿದರು. ಅಲ್ಲಿಂದ ತ್ರಿವರ್ಣ ಯಾತ್ರೆ ಮತ್ತೆ ಮುಂದುವರಿಯುತ್ತಿದ್ದಂತೆಯೇ ಧಾರಾಕಾರವಾಗಿ ಮಳೆ ಸುರಿಯಿತು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಮಳೆಯನ್ನು ಲೆಕ್ಕಿಸದೇಯೇ ತ್ರಿವರ್ಣ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಏರ್ಪಡಿಸಿದ್ದ ಈ ಯಾತ್ರೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಡಿ.ವೇದವ್ಯಾಸ ಕಾಮತ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ನಗರ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್, ಪಕ್ಷದ ಪ್ರಮುಖರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಜಗದೀಶ ಶೇಣವ, ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್ ಮೊದಲಾದವರು ಭಾಗವಹಿಸಿದರು.