ಶುಕ್ರವಾರ, ಮೇ 14, 2021
27 °C
ಸುಳ್ಯ ತಾಲ್ಲೂಕು ತುಳು ಸಾಹಿತ್ಯ ಸಮ್ಮೇಳನ, ಕೃಷಿ ಮೇಳದಲ್ಲಿ ಸಚಿವ ಅಂಗಾರ

ತುಳು ಲಿಪಿ ಬರೆಯಲು ಕಲಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ‘ತುಳು ಭಾಷೆಯನ್ನು ಸಂವಿ ಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸಕ್ಕೆ ಇನ್ನೂ ವೇಗ ದೊರಕ ಬೇಕು’ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಕಳಂಜದಲ್ಲಿ ಸೋಮವಾರ ನಡೆದ ಸುಳ್ಯ ತಾಲ್ಲೂಕು ತುಳು ಸಾಹಿತ್ಯ ಸಮ್ಮೇಳನ ಹಾಗೂ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಭಾಷೆಯನ್ನು ಮಾತನಾಡುವುದರ ಜೊತೆಗೆ ಅದನ್ನು ಬರೆಯಲು ಹಾಗೂ ಓದಲು ಕಲಿತರೆ ಆ ಭಾಷೆಯ ಮೇಲೆ ಹೆಚ್ಚು ಪ್ರೀತಿ ಹುಟ್ಟುತ್ತದೆ. ತುಳುನಾಡಿನ ಜನರು ತುಳು ಲಿಪಿಯಲ್ಲಿ ಬರೆಯಲು ಹಾಗೂ ಓದಲು ಅಭ್ಯಸಿಸಿದರೆ, ಭಾಷೆಗೆ ಹೆಚ್ಚಿನ ಮಹತ್ವ ಬಂದೊದಗಿ, ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ಸುಗಮವಾಗುತ್ತದೆ’ ಎಂದು ಅಂಗಾರ ಹೇಳಿದರು.

‘ದೇಶದ ಕೆಲವು ಭಾಷೆಗಳಿಗೆ ಲಿಪಿಯೇ ಇಲ್ಲ. ಆದರೆ, ತುಳು ಭಾಷೆಗೆ ಲಿಪಿ ಇದೆ. ಹಾಗಿದ್ದರೂ, ತುಳು ಲಿಪಿಯನ್ನು ಅಭ್ಯಸಿಸಿದವರ ಸಂಖ್ಯೆ ತೀರಾ ಕಡಿಮೆ ಇದೆ. ತುಳು ಭಾಷೆಗೆ ಮಹತ್ವ ಒದಗಿಸುವ ನಿಟ್ಟಿನಲ್ಲಿ ನಾನೂ ಕೂಡಾ ಇತ್ತೀಚೆಗೆ ತುಳು ಲಿಪಿಯನ್ನು ಓದಲು ಹಾಗೂ ಬರೆಯಲು ಅಭ್ಯಾಸ ಮಾಡುತ್ತಿದ್ದೇನೆ’ ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾತನಾಡಿ, ‘ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಸುಳ್ಯದ ನೆಲದಿಂದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಮಹಾತ್ಕಾರ್ಯ ಹಾಗೂ ತುಳು ಭಾಷೆಯನ್ನು ರಾಜ್ಯದ ಭಾಷೆಯಾಗಿ ಮಾರ್ಪಡಿಸುವ ಕ್ರಾಂತಿಕಾರಿ ಕೆಲಸವೂ ಸುಳ್ಯದಿಂದಲೇ ಆಗಲಿ. ಜಿಲ್ಲೆಯ 900 ಶಾಲೆಗಳಲ್ಲಿ ಕೇವಲ 54 ಶಾಲೆಗಳಲ್ಲಿ ಮಾತ್ರ ತುಳು ಭಾಷೆಯನ್ನು ಕಲಿಸಲಾಗುತ್ತದೆ. ಎಲ್ಲಾ ಶಾಲೆಗಳಲ್ಲೂ ತುಳು ಭಾಷೆಯನ್ನು ಕಲಿಸುವ ಕಾರ್ಯ ನಡೆದರೆ, ತುಳು ಸಿಗಬೇಕಾದ ಸ್ಥಾನಮಾನ ಖಂಡಿತವಾಗಿಯೂ ಸಿಗಲಿದೆ’ ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಿಂತಿಕಲ್ಲಿನ ಕೆ.ಎಸ್.ಜಿ.ಪಿ. ಕಾಲೇಜಿನ ಪ್ರಾಂಶುಪಾಲ ಸದಾನಂದ ರೈ ಕೂವಂಜೆ ಮಾತನಾಡಿ, ‘ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂಬ ದೃಷ್ಟಿಯಿಂದ ಮಕ್ಕಳು ತುಳು ಭಾಷೆಯನ್ನು ಆಯ್ದುಕೊಂಡರೆ, ಅವರಿಗೆ ಭಾಷೆಯ ಮೇಲೆ ಪ್ರೀತಿ ಮೂಡದು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ಕೃಷಿ ಅಧಿಕಾರಿಗಳಾದ ಮೋಹನ ನಂಗಾರು, ಸುಹಾನ ಇದ್ದರು. ಅಧ್ಯಕ್ಷ ಬಿ.ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿದರು. ಸುಳ್ಯದ ತುಡರ್ ತುಳು ಕೂಟದ ಅಧ್ಯಕ್ಷ ಜೆ.ಕೆ.ರೈ ಪ್ರಾಸ್ತಾವಿಕ ಮಾತನಾಡಿದರು. ಖಜಾಂಜಿ ಕರುಣಾಕರ ಶೆಟ್ಟಿ ನಾಲ್ಗುತ್ತು ವಂದಿಸಿದರು. ಲೋಕನಾಥ ರೈ ಎಣ್ಮೂ ರುಪಟ್ಟೆ, ಸವಿತಾ ಮುಂಡಾಜೆ, ಅನ್ವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ತಾಲ್ಲೂಕು ಸಮಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಕೂಟ ಸುಳ್ಯ, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಜ್ಞಾನವಾಹಿನಿ ಪ್ರಾದೇಶಿಕ ಸಮಿತಿ ಆಶ್ರಯದಲ್ಲಿ ಸಮ್ಮೇಳನ ಸಂಘಟನೆಗೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು