ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌಕಟ್ಟು–ಕಟ್ಟಳೆ ಮೀರಿ ನಿಂತ ತುಳು’

ತುಳುನಾಡಿನ ಇತಿಹಾಸ, ಪರಂಪರೆ ಮತ್ತು ವಾಣಿಜ್ಯ ಹಿನ್ನೆಲೆ ಕುರಿತು ವಿಚಾರ ಸಂಕಿರಣ
Last Updated 19 ನವೆಂಬರ್ 2019, 14:02 IST
ಅಕ್ಷರ ಗಾತ್ರ

ಮಂಗಳೂರು: ‘ಚೌಕಟ್ಟು–ಕಟ್ಟಳೆಗಳನ್ನು ಮೀರಿದ ಭಾಷೆ ತುಳುವಾಗಿದ್ದು, ನೆಲದ ಸಂಸ್ಕೃತಿ ಉಳಿಸಿ–ಬೆಳೆಸುತ್ತಿರುವ ಸಾಮರಸ್ಯದ ಕೊಂಡಿಯಾಗಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ.ಎ.ಖಾನ್‌ ಹೇಳಿದರು.

ವಿದ್ಯಾರ್ಥಿ ತುಳು ಸಮ್ಮೇಳನದ ಅಂಗವಾಗಿ ತುಳು ಪರಿಷತ್‌, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ‘ತುಳುನಾಡಿನ ಇತಿಹಾಸ, ಪರಂಪರೆ ಮತ್ತು ವಾಣಿಜ್ಯ ಹಿನ್ನೆಲೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತುಳು ಭಾಷೆಯು ದೇಶ, ಸಮುದಾಯ, ಜಾತಿ- ಮತಗಳನ್ನು ಮೀರಿ ಬೆಳೆದಿರುವ ಭಾಷೆ. ಕರಾವಳಿಯಲ್ಲಿ ಹತ್ತಕ್ಕೂ ಹೆಚ್ಚು ಭಾಷೆಗಳು, ವಿವಿಧ ಸಂಸ್ಕೃತಿಗಳು, ದೇವರುಗಳಿದ್ದರೂ ತುಳು ಅವುಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ’ ಎಂದು ತುಳು ಭಾಷಾ ಸಿರಿತನವನ್ನು ಅವರು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್‌ ಎಂ.ಎ ಮಾತನಾಡಿ, ‘ಬದುಕಿನಂತೆ ಭಾಷೆಯೂ ಬದಲಾಗುತ್ತದೆ. ನಾವು ಹೇಗೆ ಜೀವಿಸಿದ್ದೆವು ಎಂದು ದಾಖಲಿಸಿದರೆ ಅದು ಮುಂದಿನ ಜನಾಂಗಕ್ಕೆ ದಾರಿದೀಪವಾಗಬಹುದು’ ಎಂದು ಸಲಹೆ ನೀಡಿದರು.

ಸಮ್ಮೇಳನ ಸಮಿತಿ ಉಪಾಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮಮತಾ ಗಟ್ಟಿ ಡಿ.ಎಸ್‌, ಧರಣೇಂದ್ರ ಕುಮಾರ್‌ ಹಾಗೂ ಸಾಹಿತ್ಯ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಸ್ವರ್ಣ ಸುಂದರ್‌, ‘ವಿದ್ಯಾರ್ಥಿಗಳಲ್ಲಿ ನೆಲದ ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಇದಕ್ಕೆ ಕರಾವಳಿಯ ಎಲ್ಲರ ಸಹಕಾರ ಬೇಕಿದೆ’ ಎಂದರು.

ಸಮಾರೋಪ‍: ‘ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವು ಆಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮ್ಮೇಳನ ಹಮ್ಮಿಕೊಂಡಿರುವುದು ಉತ್ತಮವಾದ ಕಾರ್ಯ’ ಎಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಶ್ಲಾಘಿಸಿದರು.

‘ವಿಚಾರಗೋಷ್ಠಿಗಳನ್ನು ಆಯೋಜಿಸುವ ಮೂಲಕ ಯುವಜನತೆಗೆ ಮೌಲಿಕವಾದ ವಿಚಾರಗಳನ್ನು ನೀಡುತ್ತಿದ್ದೀರಿ. ಹೀಗೆ ಕನ್ನಡದ ಜೊತೆ ಜೊತೆಯಾಗಿ ತುಳುವನ್ನು ಬೆಳೆಸುವ ಕೆಲಸದಲ್ಲಿ ತೊಡಗಿ’ ಎಂದು ಅವರು ಹಾರೈಸಿದರು.

ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿ ಚಂದ್ರಕಲಾ ದೀಪಕ್‌ರಾವ್ ಮಾತನಾಡಿ, ‘ತುಳುವಿನ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ವಿಚಾರಸಂಕಿರಣ, ಸಮ್ಮೇಳನಗಳು ಹೆಚ್ಚಾಗಿ ನಡೆಯಲಿ’ ಎಂದು ಹಾರೈಸಿದರು.

ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಪ್ರಭಾಕರ ನೀರ್‌ಮಾರ್ಗ, ತುಳು ಪರಿಷತ್‌ ಕಾರ್ಯದರ್ಶಿ ಬೆನೆಟ್‌ ಅಮ್ಮನ್ನ, ಖಜಾಂಜಿ ಶುಭೋದಯ ಆಳ್ವ, ಸಮಿತಿ ಉಪಾಧ್ಯಕ್ಷ ಶಿವಾನಂದ ಕರ್ಕೇರ, ಬದ್ರಿಯಾ ಕಾಲೇಜಿನ ಮಾಜಿ ಪ್ರಾಂಶುಪಾಲ ಇಸ್ಮಾಯಿಲ್‌, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್‌, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಡಾ. ಗಣಪತಿ ಗೌಡ, ಸಮ್ಮೇಳನ ಸ್ಪರ್ಧಾ ಸಮಿತಿಯ ಸಂಚಾಲಕ ಪ್ರಶಾಂತ್ ಕಾರಂತ್, ಲೇಖಕಿ ಪಲ್ಲವಿ ಕಾರಂತ್, ಉದ್ಯಮಿ ಧರ್ಮರಾಜ್ ಅಮ್ಮುಂಜೆ, ಸತ್ಯಶಾಂತಾ ಪ್ರತಿಷ್ಠಾನದ ಶಾಂತಾ ಕುಂಟಿನಿ ಶಕುಂತಳಾ, ಛಾಯಾಗ್ರಾಹಕ ಜಿನೇಶ್ ಪ್ರಸಾದ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷೆ ಕುಸುಮಾ ದೇವಾಡಿಗ, ಶುಭೋದಯ ಆಳ್ವಾ ಇದ್ದರು.

ವಿದ್ಯಾರ್ಥಿ ತುಳು ಸಮ್ಮೇಳನ ಜ.16ಕ್ಕೆ

‘ಜನವರಿ 16 ರಂದು ನಗರದ ಪುರಭವನದಲ್ಲಿ ನಡೆಯಲಿರುವ ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಅಭಿಭಜಿತ ದಕ್ಷಿಣ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದುತುಳು ಪರಿಷತ್‌ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಹೇಳಿದರು.

‘ಸಮ್ಮೇಳನ ಸಂಪೂರ್ಣ ವಿದ್ಯಾರ್ಥಿಮಯವಾಗಿರಲಿದ್ದು ಅವರಿಗಾಗಿ ಚಿತ್ರಕಲೆ, ಕ್ವಿಜ್‌, ಕವಿತೆ, ಕಥೆ, ಸಂಶೋಧನಾ ಲೇಖನ ಮಂಡನೆ, ಕಿರುನಾಟಕ, ತುಳು ಸಿನಿಮಾ ಹಾಡುಗಳ ಗಾಯನ, ತುಳು ತುತ್ತೈತಾ (ಫ್ಯಾಷನ್‌ ಶೋ), ತುಳು ಸಾಕ್ಷ್ಯಾಚಿತ್ರ ಮೊದಲಾದ 14 ಬಗೆಯ ಅಂತರ್‌ ಕಾಲೇಜು ಸ್ಪರ್ಧೆಗಳನ್ನು ಆಯೋಜಿಸಲಾಗುವುದು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT