ಬುಧವಾರ, ನವೆಂಬರ್ 13, 2019
28 °C

ತುಳು ಚಿತ್ರ ‘ಜಬರದಸ್ತ್ ಶಂಕರ್‌’ 8 ರಂದು ತೆರೆಗೆ

Published:
Updated:

ಮಂಗಳೂರು: ದೇವದಾಸ್‌ ಕಾಪಿಕಾಡ್‌ ನಿರ್ದೇಶನ, ರಾಜೇಶ್‌ ಕುಡ್ಲ ನಿರ್ಮಾಣ ತುಳು ಚಲನಚಿತ್ರ ‘ಜಬರದಸ್ತ್‌ ಶಂಕರ್‌’ ಇದೇ 8 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿರ್ದೇಶಕ ದೇವದಾಸ್‌ ಕಾಪಿಕಾಡ್‌, ಚಿತ್ರದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ. ಸಾಯಿಕೃಷ್ಣ, ಸತೀಶ್‌ ಬಂಡಳೆ, ಗೋಪಿನಾಥ ಭಟ್, ಗಿರೀಶ್‌ ಎಂ. ಶೆಟ್ಟಿ, ಲಕ್ಷ್ಮಣ ಕುಮಾರ ಮಲ್ಲೂರ, ಪ್ರತೀಕ್‌ ಶೆಟ್ಟಿ, ಸುನೀಲ್‌ ನೆಲ್ಲಿಗುಡ್ಡೆ, ಶರಣ್‌ ಕಾಳಿಕಾಂಬ, ತಿಮ್ಮಪ್ಪ ಕುಲಾಲ್‌ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.

ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಮೂರು ಹಾಡುಗಳಿವೆ. ಕತೆ, ಚಿತ್ರಕತೆ ಹಾಗೂ ಸಾಹಿತ್ಯವನ್ನು ದೇವದಾಸ್‌ ಕಾಪಿಕಾಡ್‌ ರಚಿಸಿದ್ದಾರೆ. ಸಾಹಸ ಮತ್ತು ಹಾಸ್ಯಗಳ ನವೀರಾದ ಮಿಶ್ರಣ ಹೊಂದಿರುವ ಚಿತ್ರದಲ್ಲಿ ಫೈಟಿಂಗ್‌ ಸನ್ನಿವೇಶಗಳನ್ನು ಮಾಸ್‌ ಮಾಡಾ ಟೀಂ ನಿರ್ದೇಶಿಸಿದ್ದು, ಈ ಚಲನಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ನಿರ್ಮಾಪಕ ರಾಜೇಶ್ ಕುಡ್ಲ ಮಾತನಾಡಿ, ಚಿತ್ರವನ್ನು ನಗರದ ಬಿಗ್‌ ಸಿನಿಮಾಸ್, ಪಿವಿಆರ್‌. ಸಿನಿಪೊಲೀಸ್‌ನಲ್ಲಿ, ಉಡುಪಿಯ ಆಶೀರ್ವಾದ, ಮಣಿಪಾಲದ ಇನ್‌ಬಾಕ್ಸ್‌ ಮತ್ತು ಬಿಗ್‌ ಸಿನಿಮಾಸ್‌, ಸುರತ್ಕಲ್‌ನ ನಟರಾಜ್‌, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್‌, ಕಾಸರಗೋಡಿನ ಕೃಷ್ಣ, ಮೂಡುಬಿದಿರೆಯ ಅಮರಶ್ರೀ, ಬೆಳ್ತಂಗಡಿಯ ಭಾರತ, ಕಾರ್ಕಳದ ರಾಧಿಕಾ ಮತ್ತು ಪ್ಲಾನೆಟ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ದೆಹಲಿ, ಮುಂಬೈ, ಬೆಂಗಳೂರು, ಮೈಸೂರು, ಗೋವಾ, ಹುಬ್ಬಳ್ಳಿ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಮಡಿಕೇರಿಯಲ್ಲಿಯೂ ಮುಂದಿನ ದಿನಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ದುಬೈ, ಓಮನ್‌ ಮತ್ತು ಕತಾರ್‌ನಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಕನ್ನಡ ಚಿತ್ರನಟ ಸುದೀಪ್ ಅವರು ಈ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರ ತಂಡದ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ನಟ ಅರ್ಜುನ ಕಾಪಿಕಾಡ್‌, ನಿರ್ಮಾಪಕರಾದ ಲೋಕೇಶ್‌ ಕೋಟ್ಯಾನ್, ಅನಿಲ್‌ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)