ಮಂಗಳೂರು: ಇಲ್ಲಿನ ಕರಂಗಲ್ಪಾಡಿಯ ಯುಸಿಜೆ ಕಾಮತ್ ರಸ್ತೆ ಪಕ್ಕದ ಮಿಷನ್ ಕಂಪೌಂಡಿನಲ್ಲಿ ಹೊಸ ಮನೆ ನಿರ್ಮಿಸುವ ಸಲುವಾಗಿ ಹಳೆ ಮನೆಯನ್ನು ಕೆಡವುವಾಗ ಲಿಂಟಲ್ ಕುಸಿದು ಮನೆಯ ಮಾಲೀಕ ಹಾಗೂ ನೆರೆಮನೆಯ ವ್ಯಕ್ತಿ (ಸಂಬಂಧಿ) ಗುರುವಾರ ಮೃತಪಟ್ಟಿದ್ದಾರೆ.
ಮನೆಯ ಮಾಲೀಕ ಜೇಮ್ಸ್ ಸ್ಯಾಮುವೆಲ್ ಜತ್ತನ್ನ (56) ಹಾಗೂ ನೆರೆ ಮನೆಯ ಅಡ್ವಿನ್ ಹೆರಾಲ್ಡ್ ಮಾಬೆನ್ (54) ಮೃತರು.
‘ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದ ಜೇಮ್ಸ್ ಜತ್ತನ್ನ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಸಲುವಾಗಿ ಕುಟುಂಬ ಸಮೇತ ಈಚೆಗೆ ಊರಿಗೆ ಮರಳಿದ್ದರು. ಹಳೆ ಮನೆಯನ್ನು ಜೆಸಿಬಿಯಿಂದ ಕೆಡವುವ ಕೆಲಸ ಎರಡು ದಿನಗಳಿಂದ ನಡೆಯುತ್ತಿತ್ತು. ಜೇಮ್ಸ್ ಹಾಗೂ ಪಕ್ಕದ ಮನೆಯ ಅಡ್ವಿನ್ ಹೆರಾಲ್ಡ್ ಮಾಬೆನ್ ಕೆಲಸವನ್ನು ನೋಡಲು ಸ್ಥಳಕ್ಕೆ ಬಂದಿದ್ದರು.’
ಜೆಸಿಬಿಯು ಮನೆಯ ಪೂರ್ವ ದಿಕ್ಕಿನ ಕಡೆ ಗೋಡೆಯನ್ನು ಕೆಡವುವಾಗ ಉಂಟಾದ ಕಂಪನದಿಂದಾಗಿ ಪಶ್ಚಿಮ ದಿಕ್ಕಿನಲ್ಲಿ ಗೋಡೆ ಮೇಲಿದ್ದ ಲಿಂಟಲ್ ಕುಸಿದು ಬಿತ್ತು. ಅದರಡಿ ಸಿಲುಕಿ ಜೇಮ್ಸ್ ಹಾಗೂ ಅಡ್ವಿನ್ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ನೆರೆಮನೆಯವರು ಮಾಹಿತಿ ನೀಡಿದರು.
‘ಜೇಮ್ಸ್ ಜತ್ತನ್ನ ಬಹರೇನ್‌ನಿಂದ ಊರಿಗೆ ಬಂದಾಗ ಬಲ್ಮಠ ಬಳಿಯ ಫ್ಲ್ಯಾಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಜಾಗದಲ್ಲಿ ಮನೆ ಕಟ್ಟುವುದು ಅವರ ಕನಸಾಗಿತ್ತು. ಒಂದು ವರ್ಷದಿಂದ ಖಾಲಿ ಇದ್ದ ಮನೆಯನ್ನು ಕೆಡವುತ್ತಿದ್ದಂತೆಯೇ ಈ ದುರ್ಘಟನೆ ಸಂಭವಿಸಿದೆ’ ಎಂದು ನೆರಮನೆಯ ನಿವಾಸಿಯೊಬ್ಬರು ತಿಳಿಸಿದರು.
‘ಗುರುವಾರ ಬೆಳಿಗ್ಗೆ ನಮ್ಮ ಮನೆಯಲ್ಲಿ ಚಹಾ ಸೇವಿಸಿದ್ದ ಅವರು ಕಟ್ಟಡದ ಕೆಡವುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಸುತ್ತಿದ್ದರು. ಆ ಮೊಬೈಲ್ ಈಗಲೂ ಕಟ್ಟಡದ ಅವಶೇಷದಡಿಯಲ್ಲೇ ಇದೆ’ ಎಂದರು.
ಜೇಮ್ಸ್ ಜತ್ತನ್ನ ಅವರಿಗೆ ಪತ್ನಿ ಸುಜಯಾ, ಮಗಳು ಜೊವಿನಾ ಇದ್ದಾರೆ.
ಅಡ್ವಿನ್ ಹೆರಾಲ್ಡ್ ಮಾಬೆನ್ ಅವರು ಭಾರಿ ವಾಹನ ಚಾಲಕರು. ಅವರು ವಯಸ್ಸಾದ ತಾಯಿ ಸೆಲೆಸ್ಟಿನ್ ಮಾಬೆನ್ ಜೊತೆ ವಾಸವಿದ್ದರು. ಅವರಿಗೆ ಪತ್ನಿ ಹಿಲ್ಡಾ ಮತ್ತು ಮಗಳು ಕ್ಯಾರೊಲಿನ್ ಇದ್ದಾರೆ.
ಈ ಬಗ್ಗೆ ಕದ್ರಿದ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಡ್ವಿನ್ ಹೆರಾಲ್ಡ್ ಮಾಬೆನ್
ಕರಂಗಲ್ಪಾಡಿಯಲ್ಲಿ ಜೇಮ್ಸ್ ಜತ್ತನ್ನ ಅವರ ಮನೆಯನ್ನು ಕೆಡವಿರುವುದು : ಪ್ರಜಾವಾಣಿ ಚಿತ್ರ