ಬುಧವಾರ, ಏಪ್ರಿಲ್ 21, 2021
23 °C

ಕೋವಿಡ್ | ಶವದ ಹೊದಿಕೆ ತೆರೆದು ಅಂತಿಮ ನಮನ: ಯು.ಟಿ.ಖಾದರ್ ಸಮ್ಮುಖದಲ್ಲಿ ಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಬೋಳೂರು ರುದ್ರಭೂಮಿಯಲ್ಲಿ ಶುಕ್ರವಾರ ಕೋವಿಡ್‌ ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೂ ಮೊದಲು ಶವದ ಸುರಕ್ಷಾ ಹೊದಿಕೆಯನ್ನು ತೆರೆದು ನೋಡಲಾಗಿದೆ. ಶಾಸಕ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್‌ ಡಿಸೋಜ ಸಮ್ಮುಖದಲ್ಲೇ ನಡೆದಿರುವ ಘಟನೆಯು ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌ ಮುಖಂಡರೊಬ್ಬರ ತಾಯಿಯ ಅಂತ್ಯಸಂಸ್ಕಾರಕ್ಕೂ ಮೊದಲು ಮುಖದ ಮೇಲಿನ ಹೊದಿಕೆಯನ್ನು ತೆಗೆದು, ಅಂತಿಮ ನಮನ ಸಲ್ಲಿಸಲಾಗಿತ್ತು. ಅಂತಿಮ ನಮನ ಸಲ್ಲಿಸಿದ ವಿಡಿಯೊವನ್ನು ‘ಖಾದರ್‌ ನಡೆ ಅಭಿವೃದ್ಧಿ ಕಡೆ’ ಎಂಬ ವೈಯಕ್ತಿಕ ಬ್ಲಾಗ್‌ಗೆ ಹಾಕಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಶವವನ್ನು ಪ್ಲಾಸ್ಟಿಕ್‌ನಿಂದ ಸುತ್ತಿದ ಬಳಿಕ ಅದನ್ನು ತೆರೆಯುವಂತಿಲ್ಲ. ಈ ಪ್ರಕರಣದಲ್ಲಿ ಶಾಸಕರು, ಮಾಜಿ ಶಾಸಕರ ಉಪಸ್ಥಿತಿಯಲ್ಲೇ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಯು.ಟಿ.ಖಾದರ್, ‘ಪಿಪಿಇ ಕಿಟ್‌ ಧರಿಸಿದ್ದ ಸಿಬ್ಬಂದಿ ಪ್ಲಾಸ್ಟಿಕ್ ಹೊದಿಕೆಯನ್ನು ಸ್ವಲ್ಪ ತೆರೆದಿದ್ದು, ಇತರರು ಯಾರೂ ಸ್ಪರ್ಶಿಸಿಲ್ಲ. ಆದರೆ, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವದ ಮುಖವನ್ನು ಕುಟುಂಬದವರು ಅಂತಿಮವಾಗಿ ನೋಡುವ ಸಲುವಾಗಿ ಮುಖಕ್ಕೆ ಪಾರದರ್ಶಕ ಹೊದಿಕೆ ಬಳಸಿದರೆ ಉತ್ತಮ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್–19 ಮಾರ್ಗಸೂಚಿ ಪ್ರಕಾರ ಶವಕ್ಕೆ ಸುತ್ತಿದ ಹೊದಿಕೆಯನ್ನು ತೆರೆಯಬಾರದು. ಈ ಘಟನೆ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಮದನ್‌ ಮೋಹನ್ ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು