ಸೋಮವಾರ, ಜುಲೈ 4, 2022
25 °C
ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಆರೋಪ

ಸಿದ್ದರಾಮಯ್ಯ ಹೇಳಿಕೆ ತಿರುಚಿ ಅಪಪ್ರಚಾರ: ಯು.ಟಿ.ಖಾದರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಸಿದ್ದರಾಮಯ್ಯ ಅವರು ಎಲ್ಲ ಧರ್ಮದ ಗುರುಗಳಿಗೆ ಗೌರವ ಕೊಡುತ್ತಾರೆ. ಆದರೆ, ಬಿಜೆಪಿಯವರು ಅವರ ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳು ಸಿದ್ದರಾಮಯ್ಯನವರ ಜೊತೆ ಆತ್ಮೀಯತೆಯಿಂದ ಇದ್ದಾರೆ’ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಸ್ವಾಮೀಜಿಗಳು ಪ್ರತಿಭಟನೆ ಮಾಡಿದ್ದಾರಾ? ಮೂಢನಂಬಿಕೆ ವಿರೋಧಿ ‌ಕಾಯ್ದೆ ಕೂಡ ಅಂದು ಸ್ವಾಮೀಜಿಗಳ ಮನವಿ ಮೇರೆಗೆ ಕೈ ಬಿಟ್ಟಿದ್ದರು. ಆದರೆ, ಬಿಜೆಪಿ ಸರ್ಕಾರ ಯಾವುದಕ್ಕೂ ಬೆಲೆ ಕೊಡದೇ ಆ ಮಸೂದೆ ಜಾರಿ ಮಾಡಿದ್ದು, ಸ್ವಾಮೀಜಿಯವರ ಬೇಡಿಕೆ ಮತ್ತು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸಿದ್ದರಾಮಯ್ಯ ಅವರು ದೇವಸ್ಥಾನಗಳ ಅರ್ಚಕರ ಗೌರವಧನ ಹೆಚ್ಚಳ ಮಾಡಿದ್ದರು. ಆದರೆ, ಬಿಜೆಪಿ ಈವರೆಗೆ ಆ ಕೆಲಸ ಮಾಡಲೇ ಇಲ್ಲ. ಅದನ್ನು ಬಿಟ್ಟು ಸುಮ್ಮನೆ ಜ‌ನರ ಮಧ್ಯೆ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

‘ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸಲಾಂ ಆರತಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಇತಿಹಾಸ ಪ್ರಸಿದ್ಧ ದೇವಸ್ಥಾನದ ಪರಂಪರೆ ಬಗ್ಗೆ ಮಾತನಾಡಲು ಆಡಳಿತ ಮಂಡಳಿ ಇದೆ. ರಸ್ತೆ ಬದಿಯಲ್ಲಿ ನಿಂತವರು ಇದೆಲ್ಲಾ ಮಾತನಾಡಿದರೆ ಆಗಲ್ಲ. ಧಾರ್ಮಿಕ ಪರಂಪರೆ ಅರಿತ ಸ್ವಾಮೀಜಿ, ಗುರುಗಳು ಇದ್ದಾರೆ. ಈ ಬಗ್ಗೆ ಆಡಳಿತ ಮತ್ತು ದೇವಸ್ಥಾನದ ಸಮಿತಿ ತೀರ್ಮಾನಿಸಲಿ. ಹೆಚ್ಚು ಕಡಿಮೆ ಇದ್ದರೆ ಅದನ್ನ ದೇವರು ನೋಡಿಕೊಳ್ಳುತ್ತಾರೆ’ ಎಂದರು.

ಪಠ್ಯ ಪುಸ್ತಕದಲ್ಲಿ ಟಿಪ್ಪು ವೈಭವೀಕರಣ ಕೈಬಿಡುವ ವಿಚಾರದ ಕುರಿತು ಮಾತನಾಡಿದ ಅವರು, ‘ಟಿಪ್ಪುಸುಲ್ತಾನ್ ಚರಿತ್ರೆ ಪಠ್ಯ ಪುಸ್ತಕ ಮಾತ್ರವಲ್ಲ, ವಿಶ್ವದ ಎಲ್ಲ ಮ್ಯೂಸಿಯಂನಲ್ಲಿ ಇದೆ. ಇಂಗ್ಲೆಂಡ್, ಫ್ರಾನ್ಸ್ ಎಲ್ಲಾ ಕಡೆ ಟಿಪ್ಪು ಇತಿಹಾಸ ಇದ್ದು, ಅದನ್ನು ಯಾರೂ ಬದಲಾವಣೆ ಮಾಡಲು ಆಗಲ್ಲ. ಟಿಪ್ಪು ಇತಿಹಾಸ ರಾಜ್ಯದಲ್ಲೂ ಅನೇಕ ಕಡೆ ಕಣ್ಣ ಮುಂದೆ ಕಾಣುತ್ತದೆ. ಇದು ಸರ್ಕಾರದ ಮನೋಭಾವ ತಿಳಿಸುವ ಕೆಲಸ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ, ಸುದರ್ಶನ್ ಶೆಟ್ಟಿ, ಸಿದ್ದಿಕ್ ಪಾರೆ, ಸಿದ್ದಿಕ್ ಉಚ್ಚಿಲ್ ಇದ್ದರು.

=

‘ಒತ್ತಡವಿಲ್ಲದ ವಾತಾವರಣದಲ್ಲಿ ಪರೀಕ್ಷೆ’

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಯಾ ಶಾಲಾ ‌ಸಮವಸ್ತ್ರದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಲು ಸರ್ಕಾರ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡವಿಲ್ಲದ ವಾತಾವರಣದಲ್ಲಿ ಪರೀಕ್ಷೆಗೆ ಹಾಜರಾಗಲು ಖಾಸಗಿ ಮತ್ತು ಸರ್ಕಾರಿ ಆಡಳಿತ ಮಂಡಳಿ, ಪೋಷಕರು ಸಹಕಾರ ನೀಡಬೇಕು’ ಎಂದು ಯು.ಟಿ.ಖಾದರ್ ಹೇಳಿದರು.

ಪಾಲಿಕೆ ಅಧೀನದ ಕುದ್ರೋಳಿ ಕುರಿ, ಆಡು ವಧಾಗೃಹದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾನುಸಾರ ನೈರ್ಮಲ್ಯ ಪಾಲನೆಗೆ ಮತ್ತು ಮೂಲಸೌಕರ್ಯ ಒದಗಿಸಲು ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಥವಾ ಪರ್ಯಾಯ ಸ್ಥಳವನ್ನು ಗುರುತಿಸಿ ಸೂಕ್ತ ವಧಾಗೃಹದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಹಾಲಿ ಇರುವ ವಧಾಗೃಹದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು