ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್‌ ವಿಲಿಯಮ್ಸ್‌ಗೆ ಪ್ರಶಸ್ತಿ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಲಂಡನ್‌: ಅಮೋಘ ಆಟ ಆಡಿದ ವೇಲ್ಸ್‌ನ ಮಾರ್ಕ್‌ ವಿಲಿಯಮ್ಸ್‌ ಅವರು ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಸೋಮವಾರ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ವಿಲಿಯಮ್ಸ್‌ 18–16 ಫ್ರೇಮ್‌ಗಳಿಂದ ಸ್ಕಾಟ್ಲೆಂಡ್‌ನ ಜಾನ್‌ ಹಿಗ್ಗಿನ್ಸ್‌ ಅವರನ್ನು ಸೋಲಿಸಿದರು.

ಇದರೊಂದಿಗೆ ನಾಲ್ಕು ದಶಕಗಳ ನಂತರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ರೇ ರೀರ್ಡನ್‌, ಮೊದಲು ಈ ಸಾಧನೆ ಮಾಡಿದ್ದರು.

43ರ ಹರೆಯದ ಮಾರ್ಕ್‌, ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದ ಮೂರನೇ ಪ್ರಶಸ್ತಿ ಇದಾಗಿದೆ. 2000 ಮತ್ತು 2003ರಲ್ಲೂ ಅವರು ಟ್ರೋಫಿಗೆ ಮುತ್ತಿಕ್ಕಿದ್ದರು.

15 ವರ್ಷಗಳ ನಂತರ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ವಿಲಿಯಮ್ಸ್, ಭಾನುವಾರ ನಡೆದಿದ್ದ ಮೊದಲ ಹಂತದ ಹೋರಾಟದಲ್ಲಿ 10–7 ಫ್ರೇಮ್‌ಗಳಿಂದ ಮುನ್ನಡೆ ಗಳಿಸಿದ್ದರು. ಸೋಮವಾರವೂ ಮಿಂಚಿದ ಅವರು ಸತತ ಮೂರು ಫ್ರೇಮ್‌ಗಳನ್ನು ಗೆದ್ದು ಮುನ್ನಡೆಯನ್ನು 13–7ಕ್ಕೆ ಹೆಚ್ಚಿಸಿಕೊಂಡರು.

ನಂತರದ ಫ್ರೇಮ್‌ಗಳಲ್ಲಿ ಹಿಗ್ಗಿನ್ಸ್‌ ಮೋಡಿ ಮಾಡಿದರು. ಅಮೋಘ ಆಟ ಆಡಿದ ಸ್ಕಾಟ್ಲೆಂಡ್‌ನ ಆಟಗಾರ ಸತತವಾಗಿ ಫ್ರೇಮ್‌ಗಳನ್ನು ಜಯಿಸಿ ಹಿನ್ನಡೆಯನ್ನು 14–15ಕ್ಕೆ ತಗ್ಗಿಸಿಕೊಂಡರು.

ನಿರ್ಣಾಯಕ ಎನಿಸಿದ್ದ 30ನೇ ಫ್ರೇಮ್‌ನಲ್ಲೂ ಹಿಗ್ಗಿನ್ಸ್‌ ಮೇಲುಗೈ ಸಾಧಿಸಿದರು. 91–0ರಲ್ಲಿ ಫ್ರೇಮ್‌ ಜಯಿಸಿದ ಅವರು 15–15ರಲ್ಲಿ ಸಮಬಲ ಸಾಧಿಸಿದರು.

ಇದರಿಂದ ವಿಲಿಯಮ್ಸ್‌ ಎದೆಗುಂದಲಿಲ್ಲ. 31 ಮತ್ತು 32ನೇ ಫ್ರೇಮ್‌ಗಳಲ್ಲಿ ದಿಟ್ಟ ಆಟ ಆಡಿದ ಅವರು ಖುಷಿಯ ಕಡಲಲ್ಲಿ ತೇಲಿದರು.

‘ಆರಂಭದಲ್ಲಿ 7–13 ಫ್ರೇಮ್‌ಗಳಿಂದ ಹಿನ್ನಡೆ ಕಂಡಿದ್ದೆ. ಹೀಗಿದ್ದರೂ ಎದೆಗುಂದಲಿಲ್ಲ. ಗುಣಮಟ್ಟದ ಸಾಮರ್ಥ್ಯ ತೋರಿ 15–15ರಲ್ಲಿ ಸಮಬಲ ಸಾಧಿಸಿದೆ. ಹೀಗಾಗಿ ಪ್ರಶಸ್ತಿಯ ಕನಸು ಚಿಗುರೊಡೆದಿತ್ತು. ಆದರೆ 31 ಮತ್ತು 32ನೇ ಫ್ರೇಮ್‌ಗಳಲ್ಲಿ ಪರಿಣಾಮಕಾರಿ ಆಟ ಆಡಲು ಆಗಲಿಲ್ಲ. ಹೀಗಾಗಿ ಪ್ರಶಸ್ತಿಯ ಕನಸು ಕಮರಿತು’ ಎಂದು ಹಿಗ್ಗಿನ್ಸ್‌ ತಿಳಿಸಿದ್ದಾರೆ.

‘2017ರ ಚಾಂಪಿಯನ್‌ಷಿಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದೆ. ಹೀಗಾಗಿ ಈ ಬಾರಿ ಕಠಿಣ ಅಭ್ಯಾಸ ನಡೆಸಿ ಕಣಕ್ಕಿಳಿದಿದ್ದೆ. ಎಲ್ಲಾ ಪಂದ್ಯಗಳಲ್ಲೂ ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು’ ಎಂದು ವಿಲಿಯಮ್ಸ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT