ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡಕ್ಕೆ ಬಿದ್ದ ವಾಹನ, ವಿದ್ಯಾರ್ಥಿನಿ ಕೈ ಮುರಿತ: ಪರೀಕ್ಷೆ ಬರೆಯಲಾಗದ ಸ್ಥಿತಿ

Last Updated 25 ಜುಲೈ 2022, 4:02 IST
ಅಕ್ಷರ ಗಾತ್ರ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯೊಬ್ಬರು ದ್ವಿಚಕ್ರ ವಾಹನ ಚಲಾಯಿಸುವಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇತ್ರಾವತಿ ನದಿಯ ಸೇತುವೆಯ ಮಧ್ಯದಲ್ಲಿರುವ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಬಲಗೈ ಮೂಳೆ ಮುರಿತವಾಗಿರುವುದರಿಂದಾಗಿ ವಿದ್ಯಾರ್ಥಿನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಹಾಗೂ ಎಂ.ಎಸ್ಸಿಯ ಆಂತರಿಕ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ (19) ಗಾಯಗೊಂಡ ವಿದ್ಯಾರ್ಥಿನಿ. ‘ಹೆದ್ದಾರಿಯ ಹೊಂಡದಿಂದಾಗಿ ಉಂಟಾದ ಅಪಘಾತದಿಂದಾಗಿ ಒಂದು ವರ್ಷ ಶಿಕ್ಷಣದಿಂದ ವಂಚಿತವಾಗುತ್ತಿದೆ’ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ನಿಶ್ಮಿತಾ ಅವರು ಜುಲೈ 22 ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಜೋರಾಗಿ ಮಳೆಯಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಭಾರಿ ಗಾತ್ರದ ಹೊಂಡ ಇದ್ದುದು ಮಳೆಯಿಂದಾಗಿ ಅವರ ಅರಿವಿಗೆ ಬಂದಿರಲಿಲ್ಲ. ಹೊಂಡಕ್ಕೆ ಸಿಲುಕಿ ವಾಹನವು ರಸ್ತೆಗೆ ಉರುಳಿತ್ತು. ಹೆದ್ದಾರಿಯಲ್ಲಿ ಗಾಯಗೊಂಡು ಬಿದ್ದಿದ್ದ ಅವರನ್ನು ರಿಕ್ಷಾ ಚಾಲಕರೊಬ್ಬರು ತಕ್ಷಣ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ವರ ಬಲಗೈ ಮೂಳೆ ಮುರಿತಕ್ಕೊಳಗಾಗಿರುವುದು ಎಕ್ಸ್‌ ರೇ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಅಲ್ಲದೇ, ಕೈ ಹಾಗೂ ಮೈ ಪೂರ್ತಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು.

ಬಲಗೈ ಮೂಳೆ ಜೋಡಿಸಲು ನಿಶ್ಮಿತಾ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಉಕ್ಕಿನ ಸಲಾಕೆಯನ್ನು ಅಳವಡಿಸಲಾಗಿದೆ. ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

‘ಎಂಎಸ್ಸಿಯ ಪ್ರಾಜೆಕ್ಟ್‌ ಕೆಲಸಗಳಿದ್ದುದರಿಂದ ಅಂದು ದ್ವಿಚಕ್ರವಾಹನದಲ್ಲಿ ವಿಶ್ವವಿದ್ಯಾಲಯಕ್ಕೆ ತೆರಳಿದ್ದೆ. ಮನೆಗೆ ಮರಳುವ ಸಂದರ್ಭದಲ್ಲಿ ನೇತ್ರಾವತಿ ಸೇತುವೆಯಲ್ಲಿನ ಹೊಂಡದಿಂದಾಗಿ ಅಪಘಾತ ಉಂಟಾಗಿದೆ. ಎಂ.ಎಸ್ಸಿ ಅಂತಿಮ ವರ್ಷದ ಆಂತರಿಕ ಪರೀಕ್ಷೆಗಳು ಆಗಸ್ಟ್‌ನಲ್ಲಿ ನಡೆಯಲಿವೆ.ಕೈಯ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲದಂತಾಗಿದೆ. ಆ.12 ರಂದು ಯುಜಿಸಿ ಎನ್‌ಇಟಿಗೂ ಹಾಜರಾಗಲೂ ಸಾಧ್ಯವಾಗುತ್ತಿಲ್ಲ. ಒಂದು ವರ್ಷ ಅತಂತ್ರವಾಗಲಿದೆ’ ಎಂದು ನಿಶ್ಮಿತಾ ತಿಳಿಸಿದರು.

‘ಕೈಯ ಶಸ್ತ್ರಚಿಕಿತ್ಸೆಗೆ ಇದುವರೆಗೆ ₹ 65,000 ವೆಚ್ಚವಾಗಿದೆ. ಚಿಕಿತ್ಸೆಯ ವೆಚ್ಚವನ್ನು ಪೋಷಕರು ಭರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT