ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ತಾಲ್ಲೂಕು ಸಾಹಿತ್ಯ ಸಮ್ಮೇಳನ, ಶ್ಯಾಮಲಾ ಅಧ್ಯಕ್ಷತೆ

ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳ ಸಭಾಂಗಣದಲ್ಲಿ 17ರಂದು ಆಯೋಜನೆ
Last Updated 1 ಮಾರ್ಚ್ 2023, 15:39 IST
ಅಕ್ಷರ ಗಾತ್ರ

ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲ್ಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇದೇ 17ರಂದು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ತಾಲ್ಲೂಕಿನ ಮೊದಲ ಸಾಹಿತ್ಯ ಸಮ್ಮೇಳನ ಇದಾಗಿದ್ದು ಸಾಹಿತಿ, ಅನುವಾದಕಿ ಶ್ಯಾಮಲಾ ಮಾಧವ ಅವರನ್ನು ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಮತ್ತು ತಜ್ಞರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ಕಸಾಪ ಉಳ್ಳಾಲ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಉಳ್ಳಾಲ ಸೋಮೇಶ್ವರದ ಉಚ್ಚಿಲ ಯು.ನಾರಾಯಣ ಮತ್ತು ವಸಂತಿ ದಂಪತಿಯ ಪುತ್ರಿ ಶ್ಯಾಮಲಾ ಮಾಧವ ಅವರು ಮುಂಬೈಯಲ್ಲಿ ವಾಸವಾಗಿದ್ದು ಹಿಂದಿ ಕಾದಂಬರಿ 'ಆಲಂಪನಾ', ಇಂಗ್ಲಿಷ್ ವಿಶ್ವ ಸಾಹಿತ್ಯ ಕೃತಿಗಳಾದ 'ಗಾನ್ ವಿದ್ ದ ವಿಂಡ್', 'ಫ್ರಾಂಕಿನ್ ಸ್ಟೈನ್', 'ಜೇನ್ ಏರ್', 'ವುದರಿಂಗ್ ಹೈಟ್ಸ್', ರಾಮಯ್ಯ ರೈ ಅವರ 'ಪೊಲೀಸ್ ಡೈರಿ', ಎಂ.ಆರ್ ಪೈ ಅವರ ‘ಆ್ಯನ್ ಅನ್ ಕಾಮನ್ ಕಾಮನ್ ಮ್ಯಾನ್' ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಯಾತ್ರಿ' ಎಂಬ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ ಎಂದು ಧನಂಜಯ ತಿಳಿಸಿದ್ದಾರೆ.

ವಿಲ್ ಡ್ಯುರಾಂಟ್ ಅವರ 'ದ ಸ್ಟೋರಿ ಆಫ್ ಸಿವಿಲೈಸೇಷನ್' ಗ್ರಂಥವನ್ನು, ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಸಂಪುಟವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. 'ಆ ಲೋಕ' ಕಥಾಸಂಕಲನ, 'ಬದುಕು ಚಿತ್ರ ಚಿತ್ತಾರ' ಲೇಖನ ಸಂಪುಟ, ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ, ಅರುಂಧತಿ ರಾಯ್ ಅವರ 'ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ನಾಳೆ ಇನ್ನೂ ಕಾದಿದೆ' ಎಂಬ ಆತ್ಮ ಕಥನ ಪ್ರಕಟಗೊಂಡಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಎಸ್.ವಿ ಪರಮೇಶ್ವರ ಭಟ್ಟ ಪ್ರಶಸ್ತಿಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಗೌರವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಗೌರವ ಪ್ರಶಸ್ತಿ ಅವರಿಗೆ ಸಂದಿದೆ ಎಂದು ವಿವರಿಸಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಮಂಗಳವಾರ ನಡೆದ ಸಭೆಯಲ್ಲಿ ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೊ, ಸ್ವಾಗತ ಸಮಿತಿಯ ಪ್ರಸಾದ್ ರೈ ಕಲ್ಲಿಮಾರು, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಉಳ್ಳಾಲ ಹೋಬಳಿ ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕಲ್ಲಿಮಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT