ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬರಿಗೂ ಕನಿಷ್ಠ ₹ 9ಸಾವಿರ ಪಿಂಚಣಿ: ಎ.ಕೆ.ಪದ್ಮನಾಭನ್‌

ಭವಿಷ್ಯನಿಧಿ ಪಿಂಚಣಿದಾರರ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶ
Last Updated 14 ಮಾರ್ಚ್ 2023, 15:49 IST
ಅಕ್ಷರ ಗಾತ್ರ

ಮಂಗಳೂರು: ‘ಕನಿಷ್ಠ ಪಿಂಚಣಿ ಮೊತ್ತ 2014ರ ಬಳಿಕ ಪರಿಷ್ಕರಣೆಯೇ ಆಗಿಲ್ಲ. ಪ್ರತಿಯೊಬ್ಬರಿಗೂ ತಿಂಗಳಿಗೆ ಕನಿಷ್ಠ ₹ 9ಸಾವಿರ ಪಿಂಚಣಿ ಸಿಗುವಂತಾಗಬೇಕು. ಇದಕ್ಕಾಗಿ ಪಿಂಚಣಿದಾರರು ಸಂಘಟನೆಯನ್ನು ಬಲಗೊಳಿಸಿ ಹೋರಾಟಕ್ಕೆ ಮುಂದಾಗಬೇಕು’ ಎಂದು ಕಾರ್ಮಿಕರ ಭವಿಷ್ಯ ನಿಧಿಯ ಕೇಂದ್ರೀಯ ವಿಶ್ವಸ್ಥರ ಮಂಡಳಿ (ಸಿ.ಬಿ.ಟಿ) ಸದಸ್ಯರಾಗಿರುವ ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್ ಹೇಳಿದರು.

ಇಲ್ಲಿ ಏರ್ಪಡಿಸಿದ್ದ ಭವಿಷ್ಯನಿಧಿ ಪಿಂಚಣಿದಾರರ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಪಿಂಚಣಿ ವಿಚಾರದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳ ನಡುವೆ ಸಹಮತ ಮೂಡಿದ್ದು, ಒಂದೇ ವೇದಿಕೆಯಡಿ ಹೋರಾಟಕ್ಕೆ ಅಣಿಯಾಗಿವೆ. ಎಲ್ಲರಿಗೂ ತಿಂಗಳಿಗೆ ಕನಿಷ್ಠ ₹ 9 ಸಾವಿರ ಪಿಂಚಣಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಏ. 5ರಂದು ದೊಡ್ಡ ಮಟ್ಟದ ಹೋರಾಟ ನಡೆಯಲಿದೆ’ ಎಂದರು.

‘ದೇಶದಲ್ಲಿ 5 ಕೋಟಿಗೂ ಹೆಚ್ಚು ಕಾರ್ಮಿಕರು ಪಿಂಚಣಿಗಾಗಿ ತಮ್ಮ ವೇತನದಲ್ಲಿ ಕೊಡುಗೆ ನೀಡುತ್ತಿದ್ದಾರೆ. 72 ಲಕ್ಷ ಮಂದಿ ಭವಿಷ್ಯ ನಿಧಿ ಪಿಂಚಣಿದಾರರಿದ್ದಾರೆ. ಅವರಲ್ಲಿ ಸುಮಾರು 22 ಲಕ್ಷ ಮಂದಿಗೆ ತಿಂಗಳಿಗೆ ₹ 1ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಸಿಗುತ್ತದೆ’ ಎಂದು ತಿಳಿಸಿದರು.

‘ಪಿಂಚಣಿ ಹೆಚ್ಚಿಸಲು ಹಲವು ಸಮಿತಿಗಳನ್ನು ಸರ್ಕಾರವು ರಚಿಸಿದೆ. ಆದರೆ ಅವುಗಳ ವರದಿಯನ್ನು ಬಹಿರಂಗ ಮಾಡಿಲ್ಲ. ಸಮಿತಿಗಳ ಶಿಫಾರಸುಗಳನ್ನು ಜಾರಿಗೊಳಿಸಿಯೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಿಂಚಣಿಯು ಭಿಕ್ಷೆಯಲ್ಲ, ಅದು ಕಾರ್ಮಿಕರ ಹಕ್ಕು. ಸುಪ್ರಿಂ ಕೋರ್ಟ್ ಕೂಡಾ ಈ ಮಾತನ್ನು ಹೇಳಿದೆ. ಆದರೂ ಸರ್ಕಾರಕ್ಕೆ ಕಿವಿ ಕೇಳಿಸುವುದಿಲ್ಲ. ಜೀವಮಾನವಿಡೀ ದುಡಿದ ಕಾರ್ಮಿಕರಿಗೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಸಿಗುತ್ತಿದೆ ಎಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಯಾಗುವಾಗಲೇ ಅದನ್ನು ಸಿಐಟಿಯು ವಿರೋಧಿಸಿತ್ತು. ಆಗ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಅದೊಂದು ಪಿಂಚಣಿ ಯೋಜನೆಯೇ ಅಲ್ಲ. ಈಗ ಸರ್ಕಾರಿ ನೌಕರರು, ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳೆಲ್ಲರೂ ನಮಗೆ ಎನ್‌ಪಿಎಸ್‌ ಬೇಡ, ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಎನ್‌ಪಿಎಸ್‌ ವಿರೋಧಿಸಿ ನವದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ’ ಎಂದರು.

ಎ.ಕೆ.ಪದ್ಮನಾಭನ್‌ ಅವರ ಭಾಷಣವನ್ನು ತುಳುವಿಗೆ ಬಿ.ಎಂ.ಮಾಧವ ಭಾಷಾಂತರ ಮಾಡಿದರು.

ಪಿಎಫ್‍ಪಿಎಯ ಅಖಿಲ ಭಾರತ ಸಂಚಾಲಕ ಎಂ.ಧರ್ಮಜಂ, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಾರ್ಯಾಂಬು, ಬೇಬಿ ಶೆಟ್ಟಿ ಮಾತನಾಡಿದರು.

ಜೆ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯು.ಬಿ.ಲೋಕಯ್ಯ, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಪ್ರೇಮಾ ಮಂಜೇಶ್ವರ, ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ಜಯಂತಿ ಬಿ.ಶೆಟ್ಟಿ, ಪದ್ಮಾವತಿ ಶೆಟ್ಟಿ, ರಾಧಾ ಮೂಡುಬಿದಿರೆ, ನೋಣಯ್ಯ ಗೌಡ ಇದ್ದರು. ಸುಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಸದಾಶಿವ ದಾಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT