ಕೋಸ್ಟಲ್‌ವುಡ್‌ನ ಯುವ ನಿರ್ದೇಶಕ ಅಪಘಾತದಲ್ಲಿ ಮೃತ್ಯು

ಶುಕ್ರವಾರ, ಏಪ್ರಿಲ್ 26, 2019
28 °C
ಯುವ ಚಿತ್ರ ನಿರ್ದೇಶಕ

ಕೋಸ್ಟಲ್‌ವುಡ್‌ನ ಯುವ ನಿರ್ದೇಶಕ ಅಪಘಾತದಲ್ಲಿ ಮೃತ್ಯು

Published:
Updated:
Prajavani

ಮೂಡುಬಿದಿರೆ: ಮೂಡುಕೊಣಾಜೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತುಳು ಚಿತ್ರರಂಗದ ಯುವ ನಿರ್ದೇಶಕ ಮೊಹ್ಮದ್ ಹ್ಯಾರಿಸ್ (27) ಮೃತಪಟ್ಟಿದ್ದಾರೆ.

ಹ್ಯಾರಿಸ್ ಅವರು ಹೌದಾಲು ನಿವಾಸಿ ಆದಂ ಬ್ಯಾರಿ ಅವರ ಪುತ್ರ. ಅವರ ನಿರ್ದೇಶನದ ‘ಆಟಿಡೊಂಜಿ ದಿನ’ ಚಿತ್ರದ ಚಿತ್ರೀಕರಣ ಮೂಡುಬಿದಿರೆ ಪರಿಸರದಲ್ಲಿ ನಡೆಯುತ್ತಿತ್ತು. ಕೆಲವು ದಿನಗಳಿಂದ ಹಗಲು ರಾತ್ರಿ ಎಂಬಂತೆ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ಅವರು ಗುರುವಾರ ರಾತ್ರಿ ಮನೆಗೆ ಬಂದಿದ್ದರು. ಸ್ವಲ್ಪ ಹೊತ್ತಿನಲ್ಲಿ ಶಿರ್ತಾಡಿಯಲ್ಲಿದ್ದ ಚಿತ್ರದ ನಿರ್ಮಾಪಕರು ಹ್ಯಾರಿಸ್ ಮೊಬೈಲ್‌ಗೆ ಕರೆ ಮಾಡಿ ಬರ ಹೇಳಿದ್ದರು.

ರಾತ್ರಿ 11.30 ಆಗಿದ್ದು ನಿದ್ದೆಯ ಸಮಯವಾದ್ದರಿಂದ ‘ಈಗ ಮಲಗು, ನಾಳೆ ಬೆಳಿಗ್ಗೆ ಹೋಗು’ ಎಂದು ತಾಯಿ ತಿಳಿಸಿದ್ದರೆನ್ನಲಾಗಿದೆ. ಆದರೆ, ಹ್ಯಾರಿಸ್ ಆಮ್ನಿ ಕಾರಿನಲ್ಲಿ ಶಿರ್ತಾಡಿಗೆ ಹೊರಟಿದ್ದರು. ಮೂಡುಕೊಣಾಜೆ ಎಂಬಲ್ಲಿ ರಸ್ತೆ ಬದಿಯ ಮರಕ್ಕೆ ಇವರ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅದೇ ದಾರಿಯಲ್ಲಿ ಬೈಕ್‌ನಲ್ಲಿ ಬಂದ ಇವರ ಸ್ನೇಹಿತರೊಬ್ಬರು ಹ್ಯಾರಿಸ್‌ ಅವರನ್ನು ವಾಹನದಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಆದಂ ಅವರ ಐವರು ಮಕ್ಕಳ ಪೈಕಿ ಹ್ಯಾರಿಸ್ ಹಿರಿಯವರಾಗಿದ್ದು ಉಳಿದ ನಾಲ್ವರು ಹೆಣ್ಣುಮಕ್ಕಳು.

ಚಿಕ್ಕಂದಿನಿಂದಲೇ ಚಿತ್ರರಂಗದ ಆಸಕ್ತಿ: ಪಿಯುಸಿ ಓದಿದ್ದ ಹ್ಯಾರಿಸ್ ಅವರಿಗೆ ಚಿಕ್ಕಂದಿನಿಂದಲೇ ನಾಟಕ, ಚಿತ್ರರಂಗದ ಬಗ್ಗೆ ಆಸಕ್ತಿ ಇತ್ತು. ಶಂಕರ್‌ನಾಗ್ ಅಭಿಮಾನಿಯಾಗಿದ್ದು ಅವರ ಹೆಸರಿನಲ್ಲಿ ಊರಲ್ಲಿ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದ್ದರು. ಕಾಶೀನಾಥ್ ಜತೆ ಹಲವು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಲಕ್ಷ್ಮಿ, ಬ್ರೇಕಿಂಗ್ ನ್ಯೂಸ್, ಮುತ್ತು ಮಾವುತ, ಚೆಲ್ಲಾಪಿಲ್ಲಿ, ಮಾರ ಎಲ್ಎಲ್‌ಬಿ ಹೀಗೆ ಹಲವು ಕನ್ನಡ ಚಿತ್ರಗಳಿಗೆ ಮತ್ತು ಪಂಜರದ ಗಿಳಿ, ಮನೆಯೊಂದು ಮೂರುಬಾಗಿಲು, ಚಕ್ರವಾಹನ ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

‘ಬೈಲ ಕುರಲ್’ ತುಳು ಚಿತ್ರಕ್ಕೆ ನಿರ್ದೇಶಕರಾಗಿದ್ದರು. ಅವರು ನಿರ್ದೇಶಿಸುತ್ತಿದ್ದ ‘ಆಟಿಡೊಂಜಿ ದಿನ’ ಎರಡನೇ ತುಳುಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನೊಂದು ತುಳುಚಿತ್ರಕ್ಕೆ ಅವರು ತಯಾರಾಗಿದ್ದರು. ಟೆಲಿಫಿಲ್ಮ್ ನಿರ್ದೇಶಿಸಿ ಸ್ಥಳೀಯರಿಗೆ ಅವಕಾಶ ನೀಡಿದ್ದರು. ಸರಳ ವ್ಯಕ್ತಿತ್ವದ ಹ್ಯಾರಿಸ್‌ ಅವರು ಮಿತಭಾಷಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !