ಶನಿವಾರ, ಏಪ್ರಿಲ್ 1, 2023
23 °C

ನೇತ್ರಾವತಿ ನದಿಗೆ ಸ್ನಾನಕ್ಕೆ ಇಳಿದ ಸಹೋದರರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ಸ್ನಾನಕ್ಕೆಂದು ಇಲ್ಲಿನ ನೇತ್ರಾವತಿ ನದಿ ನೀರಿಗೆ ಇಳಿದ ಗದಗದ ಇಬ್ಬರು ಸಹೋದರರು ಸೋಮವಾರ ಸಂಜೆ ಮುಳುಗಿ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸುಬ್ಬನಹಳ್ಳಿ ನಿವಾಸಿ, ಉಪ್ಪಿನಂಗಡಿಯಲ್ಲಿ ತೋಟದ ಕಾರ್ಮಿಕರಾದ ಧರ್ಮ ಮತ್ತು ಮೀನಾಕ್ಷಿ ಮಕ್ಕಳಾದ ನಿಂಗರಾಜು (16) ಮತ್ತು ಸತೀಶ್ (14) ಮೃತರು.

ನಿಂಗರಾಜು ಬೆಳ್ತಂಗಡಿ ತಾಲ್ಲೂಕು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತನೇ ತರಗತಿಯಲ್ಲಿ, ಆತನ ಸಹೋದರ ಸತೀಶ್, ಪುತ್ತೂರು ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ನಿಂಗರಾಜು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ.

ಧರ್ಮ ಮತ್ತು ಮೀನಾಕ್ಷಿ ದಂಪತಿಯು ಉಪ್ಪಿನಂಗಡಿ ಇಳಂತಿಲದ ಮನೆಯೊಂದರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್ ಕಾರಣದಿಂದಾಗಿ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಅವರ ಜತೆ ಇದ್ದರು. ಸೋಮವಾರ ಸಂಜೆ ಹೆತ್ತವರು ಕಾರ್ಯ ನಿಮಿತ್ತ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ನದಿಯ ಆಳದ ಅರಿವೇ ಇಲ್ಲದೆ ಸಹೋದರರು ಸ್ನಾನಕ್ಕೆಂದು ನೀರಿಗಿಳಿದಿದ್ದರು. ಮೊದಲಾಗಿ ನೀರಿಗಿಳಿದಿದ್ದ ಸತೀಶ ಮತ್ತು ನಿಂಗರಾಜು ಇಬ್ಬರೂ ನೀರಿನಲ್ಲಿ ಮುಳುಗುವುದನ್ನು ಕಂಡ ಜೊತೆಗಿದ್ದ ಮತ್ತೊಬ್ಬ ಸಹೋದರ ಸಂಬಂಧಿ ಬಸವ ಎಂಬಾತ ಭಯಗೊಂಡು ಮನೆಗೆ ಬಂದು ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರ ಸಹಕಾರ ಪಡೆದು, ನದಿಯಲ್ಲಿ ಶೋಧ ಮಾಡಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಮಕ್ಕಳನ್ನು ಚೆನ್ನಾಗಿ ಓದಿಸಿ ಸಾಧಕರಾಗಿಸಬೇಕೆಂದು ಕನಸು ಕಂಡಿದ್ದ ಧರ್ಮ ಮತ್ತು ಮೀನಾಕ್ಷಿ ದಂಪತಿಯು ಅದಕ್ಕಾಗಿ ಗದಗದಿಂದ 8 ವರ್ಷದ ಹಿಂದೆ ಉಪ್ಪಿನಂಗಡಿಗೆ ಬಂದು, ತೋಟದಲ್ಲಿ ಕೂಲಿಯಾಳುಗಳಾಗಿ ದುಡಿದು ಮಕ್ಕಳನ್ನು ಸಾಕಿ ಸಲಹುತ್ತಿದ್ದರು. ಏಕ ಕಾಲಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ದಂಪತಿಯ ರೋಧನ ಕಲ್ಲೆದೆಯನ್ನೂ ಕರಗಿಸುವಂತಿತ್ತು.

ವಿಖಾಯ ತಂಡದ ಸ್ಪಂದನೆ: ಬಾಲಕರಿಬ್ಬರು ನದಿಯಲ್ಲಿ ಮುಳುಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಉಪ್ಪಿನಂಗಡಿ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದ ಸ್ವಯಂ ಸೇವಕರಾದ ಯು.ಟಿ. ಫಯಾಜ್ ಅಹಮದ್, ಬಶೀರ್, ರಶೀದ್, ಸಲಾಂ, ಚೆಯ್ಯಬ್ಬ ಮತ್ತು ಸ್ಥಳೀಯರಾದ ಅಶ್ರಫ್ ಎಂಬುವರು ನೀರಿಗೆ ಧುಮುಕಿ 40 ನಿಮಿಷ ಹುಡುಕಾಡಿ ಮೊದಲಾಗಿ ನಿಂಗರಾಜುವಿನ ದೇಹವನ್ನು ಮೇಲೆತ್ತಿದ್ದರು. ಬಳಿಕ ಮತ್ತೆ ಸುಮಾರು ಅರ್ಧ ತಾಸು ಶೋಧ ಸತೀಶನ ದೇಹವನ್ನೂ ತಂದರು. ತಂಡದ ಸಮಯೋಚಿತ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.