ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ: ತ್ಯಾಜ್ಯ ವಿಲೇವಾರಿ ಸಮಸ್ಯೆಯ ಚರ್ಚೆ

Last Updated 2 ಆಗಸ್ಟ್ 2022, 2:42 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಎಲ್ಲೆಡೆ ಸಮಸ್ಯೆ ಎದುರಾಗಿರುವ ಬಗ್ಗೆ ತೀವ್ರ ಚರ್ಚೆ ನಡೆದು, ‘ಒಬ್ಬರನ್ನೇ ಅವಲಂಬಿಸುವುದು ಸರಿಯಲ್ಲ. ಪರ್ಯಾಯ ವ್ಯವಸ್ಥೆಯನ್ನೂ ಹುಡುಕಿಕೊಳ್ಳಬೇಕು’ ಎಂಬ ಸಲಹೆ ವ್ಯಕ್ತವಾಯಿತು. ಈ ಮಧ್ಯೆ ಮಂಗಳೂರು ರಾಮಕೃಷ್ಣ ಆಶ್ರಮದವರ ಮನವೊಲಿಸಲಾಗಿ ಮತ್ತೆ ಅವರನ್ನೇ ಮುಂದುವರಿಸುವ ಬಗ್ಗೆ ಗ್ರಾಮ ಪಂಚಾಯಿತಿಯ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ ಅಧ್ಯಕ್ಷತೆಯ ಸಭೆಯು ಈ ನಿರ್ಣಯ ಅಂಗೀಕರಿಸಲಾಯಿತು. ಸದಸ್ಯ ಕೆ. ಅಬ್ದುಲ್ ರಹಿಮಾನ್ ಮಾತನಾಡಿ, ‘ಪೇಟೆಯಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸರಿ ಇಲ್ಲದೆ ಸಮಸ್ಯೆ ಉಂಟಾಗಿದೆ. ಎಲ್ಲೆಡೆ ಕಸದ ರಾಶಿ ಇರುತ್ತದೆ’ ಎಂದು ಸಭೆಯ ಗಮನಕ್ಕೆ ತಂದರು. ಆಗ ಸುರೇಶ್ ಅತ್ರೆಮಜಲು ಮಾತನಾಡಿ, ‘ರಾಮಕೃಷ್ಣ ಆಶ್ರಮದವರು ಸಮರ್ಪಕವಾಗಿ ಉಪ್ಪಿನಂಗಡಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರು. ಆದರೆ, ಅವರ ಸೇವಾ ಮನೋಭಾವವನ್ನು ಪಂಚಾಯಿತಿ ಮರೆತು ಬಿಟ್ಟಿತ್ತು. ಪ್ರತಿದಿನ 700 ಟನ್ ಮಾತ್ರ ಕಸ ವಿಲೇವಾರಿ ಮಾಡುವ ಅವರಲ್ಲಿ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ, ಈಗ ಪ್ರತಿದಿನ 1,800 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರೂ ಅದನ್ನು ವಿಲೇವಾರಿ ಮಾಡಿಕೊಂಡಿದ್ದರು. ಅವರಿಗೆ ನೋವಾಗುವಂತಹ ಕೆಲವೊಂದು ಘಟನೆಗಳು ಇಲ್ಲಿ ನಡೆದವು. ಆದ್ದರಿಂದ ಅವರು ಅರ್ಧದಲ್ಲೇ ಕೈಬಿಟ್ಟು ಹೋಗಿದ್ದಾರೆ’ ಎಂದು ಹೇಳಿದರು.

ಸದಸ್ಯ ಧನಂಜಯ ಕುಮಾರ್ ಮಾತನಾಡಿ, ನಮ್ಮ ವ್ಯವಸ್ಥೆ ಇಲ್ಲಿ ಸರಿಯಿಲ್ಲ ಎಂದರು. ಇದಕ್ಕೆ ಪೂರಕವಾಗಿ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುಲ್ ರಶೀದ್ ಮಾತನಾಡಿದರು. ಆಗ ಅಬ್ದುಲ್ ರಹಿಮಾನ್ ಮತ್ತೆ ಪ್ರತಿಕ್ರಿಯಿಸಿ, ‘ಕರಾರು ಒಪ್ಪಂದಕ್ಕಿಂತ ಹೆಚ್ಚುವರಿ ಕಸ ಇಲ್ಲಿ ಉತ್ಪಾದನೆಯಾಗುತ್ತಿದೆ ನಿಜ. ಆದರೆ, ಒಪ್ಪಂದ ಇರುವಾಗ ಅರ್ಧದಲ್ಲೇ ಕೈಬಿಟ್ಟು ಹೋಗಿರುವುದು ಸರಿಯಲ್ಲ’ ಎಂದರು.

ಸುರೇಶ್ ಅತ್ರಮಜಲು ಮತ್ತೆ ಪ್ರತಿಕ್ರಿಯಿಸಿ, ರಾಮಕೃಷ್ಣ ಆಶ್ರಮದವರು ಸೇವಾ ಮನೋಭಾವದಿಂದ ಈ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದಾಗ ಅವರ ಮೇಲೆ ವಿಶ್ವಾಸವಿಡುವ ಕೆಲಸ ನಮ್ಮಿಂದಾಗಬೇಕಿತ್ತು. ಅವರನ್ನು ಮನವೊಲಿಸಿದ ಬಳಿಕ ಕೊನೆಗೂ ಒಪ್ಪಿಕೊಂಡಿದ್ದಾರೆ. ಆಶ್ರಮದ ವತಿಯಿಂದ ಮತ್ತೆ ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಯುವ ವಿಶ್ವಾಸವಿದೆ ಎಂದರು.

ಅಬ್ದುರ್ ರಹಿಮಾನ್ ಮಾತನಾಡಿ, ಒಬ್ಬರನ್ನೇ ಯಾವತ್ತೂ ಅವಲಂಬಿಸುವುದು ಸರಿಯಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಹುಡುಕಿಕೊಳ್ಳಬೇಕು ಎಂದರು. ಆಗ ಅಧ್ಯಕ್ಷರು ಪ್ರತಿಕ್ರಿಯಿಸಿ ಮುಂದೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸುವಂತೆ ಸರ್ಕಾರದ ಆದೇಶವಿದೆ. ನಮ್ಮ ಗ್ರಾಮ ಪಂಚಾಯಿತಿನಲ್ಲಿಯೂ ಕಟ್ಟುನಿಟ್ಟಾಗಿ ಅನುಷ್ಠಾನಿಸಬೇಕಿದೆ ಎಂದರು.

ಆಗ ಸದಸ್ಯರು ಪ್ರತಿಕ್ರಿಯಿಸಿ, ಏಕಾಏಕಿ ನಿಷೇಧ ಬೇಡ, ವರ್ತಕರಿಗೆ ಈ ಬಗ್ಗೆ ಸ್ವಲ್ಪ ಸಮಯಾವಕಾಶ ಕೊಡೋಣ. ಘನ ತ್ಯಾಜ್ಯದ ಬಗ್ಗೆ ಮುದ್ರಿಸಲಿರುವ ಕರಪತ್ರದಲ್ಲಿ ಇದರ ಬಗ್ಗೆಯೂ ಮಾಹಿತಿ ನೀಡೋಣ. ಆ ಮೇಲೆಯೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ವಚ್ಛತಾ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಅಂಗೀಕರಿಸಲಾಯಿತು.

ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಲಲಿತಾ, ವಿದ್ಯಾಲಕ್ಷ್ಮೀ ಪ್ರಭು, ಉಷಾ ನಾಯ್ಕ, ಸಣ್ಣಣ್ಣ, ರುಕ್ಮಿಣಿ, ಇಬ್ರಾಹಿಂ ಯು.ಕೆ., ಮೈಸಿದ್ ಇಬ್ರಾಹೀಂ, ಜಯಂತಿ, ವನಿತಾ, ನೆಬಿಸಾ, ಸೌಧ ಇದ್ದರು. ಕಾರ್ಯದರ್ಶಿ ದಿನೇಶ್ ಎಂ. ಸ್ವಾಗತಿಸಿದರು. ಲೆಕ್ಕಾಧಿಕಾರಿ ಜ್ಯೋತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT