ಶಬರಿಮಲೆಗೆ ಮಹಿಳೆಯರು: ತೀರ್ಪು ಮರುಪರಿಶೀಲನೆಗೆ ಆಗ್ರಹಿಸಿ ಸಭೆ

7
ರಾಜ್ಯ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ

ಶಬರಿಮಲೆಗೆ ಮಹಿಳೆಯರು: ತೀರ್ಪು ಮರುಪರಿಶೀಲನೆಗೆ ಆಗ್ರಹಿಸಿ ಸಭೆ

Published:
Updated:

ಮಂಗಳೂರು: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಸ್ತ್ರೀಯರಿಗೂ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದ ಕದ್ರಿ ಮೈದಾನದಲ್ಲಿ ಜಾಗೃತಿ ಸಭೆ ನಡೆಸಿದರು.

ಕದ್ರಿ ಮೈದಾನದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಅಯ್ಯಪ್ಪ ಸ್ವಾಮಿ ಭಕ್ತ ವೃಂದಗಳ ಪ್ರಮುಖರು, ಕೇರಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಏಳು ನ್ಯಾಯಮೂರ್ತಿಗಳಿರುವ ಪೀಠದಿಂದ ಈ ತೀರ್ಪಿನ ಮರುಪರಿಶೀಲನೆಗೆ ಒತ್ತಾಯಿಸಿ ರಾಜ್ಯ ಸರ್ಕಾರವೇ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಬಳಿಕ ಕದ್ರಿ ಮಂಜುನಾಥೇಶ್ವರ ದೇವಾಲಯದವರೆಗೆ ಪಾದಯಾತ್ರೆಯಲ್ಲಿ ಸಾಗಿ, ತೀರ್ಪಿನ ಮರುಪರಿಶೀಲನೆಗೆ ಮನವಿ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.

ಜಾಗೃತಿ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ‘ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸುತ್ತಿರುವ ಕೆಟ್ಟ ಶಕ್ತಿಗಳು ಸಲ್ಲಿಸಿದ ಅರ್ಜಿಯಿಂದ ಇಂತಹ ತೀರ್ಪು ಹೊರಬಿದ್ದಿದೆ. ಹಿಂದೂಗಳ ವಿರೋಧಿಯಾಗಿರುವ ಕೇರಳ ರಾಜ್ಯ ಸರ್ಕಾರವೂ ಅರ್ಜಿದಾರರಿಗೆ ಬೆಂಬಲ ನೀಡಿದೆ. ಶಬರಿಮಲೆಯ ಪರಂಪರೆ ಮತ್ತು ಸಂಪ್ರದಾಯದ ಮಹತ್ವದ ಕುರಿತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಲ್ಲ. ಈ ಕಾರಣದಿಂದಾಗಿಯೇ ಹಿಂದೂಗಳಿಗೆ ವಿರುದ್ಧವಾದ ತೀರ್ಪು ಬಂದಿದೆ’ ಎಂದರು.

ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ರೋಹಿಣಾಕ್ಷ ಮಾತನಾಡಿ, ‘ಈ ತೀರ್ಪನ್ನು ಹಿಂದೂ ಸಮಾಜ ಒಪ್ಪುವುದಿಲ್ಲ. ಎಲ್ಲ ಕಾಲಕ್ಕೂ ಸುಪ್ರೀಂ ಕೋರ್ಟ್‌ ದಮನಿತರ ಪರವಾಗಿ ಇರುತ್ತದೆ ಎಂಬ ನಂಬಿಕೆ ಇದೆ. ಈಗ ಹಿಂದೂಗಳು ದಮನಿತರ ಸ್ಥಾನದಲ್ಲಿದ್ದೇವೆ. ನಮ್ಮ ಮೇಲ್ಮನವಿಯನ್ನು ಸಹನೆಯಿಂದ ಆಲಿಸಿ ನ್ಯಾಯ ಕೊಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

ತೀರ್ಪು ಮರುಪರಿಶೀಲನೆ ಆಗುವವರೆಗೂ ಅದನ್ನು ಜಾರಿ ಮಾಡಬಾರದು. ಈ ಸಂಬಂಧ ಕೇರಳ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ರಾಜ್ಯ ಸರ್ಕಾರವೇ ಮೇಲ್ಮನವಿ ಸಲ್ಲಿಸಬೇಕು. ರಾಷ್ಟ್ರಪತಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಮೂಲಕ ಹಿಂದೂ ಧರ್ಮೀಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಆರ್‌ಎಸ್‌ಎಸ್‌ ನಗರ ಸಹ ಕಾರ್ಯವಾಹ ಪಿ.ಎಸ್‌.ಪ್ರಕಾಶ್ ಮಾತನಾಡಿ, ‘ಭಾರತದಲ್ಲಿ ಸ್ತ್ರೀಯರನ್ನು ಮಾತೆಯರು ಎಂದು ಗೌರವಿಸುತ್ತೇವೆ. ಸಮಾನತೆಗಿಂತಲೂ ಎತ್ತರದ ಸ್ಥಾನ ನೀಡಿದ್ದೇವೆ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯನ್ನೇ ಹೊಂದಿರದ ನಾಸ್ತಿಕರ ಅರ್ಜಿಯಿಂದ ನಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ. ಇದು ಹಿಂದೂ ಧರ್ಮವನ್ನು ಒಡೆಯುವ ಶಕ್ತಿಗಳು ಮಾಡಿದ ಸಂಚಿನ ಫಲ’ ಎಂದು ಹೇಳಿದರು.

ಅಯ್ಯಪ್ಪ ಭಕ್ತರಾದ ಸೇಸಪ್ಪ, ವಿಶ್ವನಾಥ್‌ ಮತ್ತು ಸೀತಾ ಮಾತನಾಡಿದರು. ಬಜರಂಗದಳದ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ಆರ್‌ಎಸ್‌ಎಸ್‌ ಮುಖಂಡ ಸುನೀಲ್‌ ಆಚಾರ್, ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ರಮಾನಾಥ ಹೆಗ್ಡೆ, ನಾಯರ್‌ ಸಮುದಾಯದ ಮುಖಂಡ ಮುರಳಿ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್‌, ಅಯ್ಯಪ್ಪ ಭಕ್ತೆ ಪುಷ್ಪಲತಾ ಗಟ್ಟಿ ವೇದಿಕೆಯಲ್ಲಿದ್ದರು.

* ಇದನ್ನೂ ಓದಿ...

ಶಬರಿಮಲೆಗೆ ಮಹಿಳೆಯರು: ತೀರ್ಪಿನ ಶೀಘ್ರ ಮರುಪರಿಶೀಲನೆ ಮನವಿ ತಳ್ಳಿಹಾಕಿದ ಸುಪ್ರೀಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !