ಸೋಮವಾರ, ಮಾರ್ಚ್ 20, 2023
24 °C
ಶರಣ್‌ ಪಂಪ್‌ವೆಲ್‌ ಗಡಿಪಾರಿಗೆ ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಒತ್ತಾಯ

ಫಾಝಿಲ್‌ ಹತ್ಯೆ ಮರು ತನಿಖೆಗೆ ಖಾದರ್‌ ಆಗ್ರಹ

ಪ್ರಜಾವಾಣೆ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: 'ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‍ನ ಮೊಹಮ್ಮದ್‌ ಫಾಝಿಲ್‌ನನ್ನು ನಮ್ಮವರು ಕೊಲೆ ಮಾಡಿರುವುದಾಗಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‍ವೆಲ್ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಫಾಝಿಲ್‌ ಹತ್ಯೆ ಪ್ರಕರಣದ ಮರು ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಒತ್ತಾಯಿಸಿದರು.

ಇಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫಾಝಿಲ್‌ ಕೊಲೆಯನ್ನು ಸಮರ್ಥಿಸಿ ಹೇಳಿಕೆ ನೀಡುವ ಮೂಲಕ ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಯತ್ನಿಸಿದ ಈ ವ್ಯಕ್ತಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು’ ಎಂದೂ ಆಗ್ರಹಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈಚೆಗೆ ನಡೆದ ಸರಣಿ ಕೊಲೆ ಪ್ರಕರಣಗಳಿಂದಾಗಿ ನೋವುಂಡ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತೇವೆ. ಸಂತ್ರಸ್ತ ಕುಟುಂಬದವರು ಈ ಕೊಲೆಗಳ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಅಂತಹ ಪ್ರಕರಣಗಳ ಮರುತನಿಖೆ ನಡೆಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದರು. 

‘ಕೊಲೆ ರಕ್ತಪಾತವನ್ನು ಸಮರ್ಥಿಸುವವರು, ರಾಜಕೀಯ ಲಾಭಕ್ಕಾಗಿ, ಅಸ್ತಿತ್ವ ಪ್ರದರ್ಶನಕ್ಕಾಗಿ ಮತ್ತು ವ್ಯಾಪಾರಕ್ಕಾಗಿ ವಿವಿಧ ಧರ್ಮ, ಜಾತಿ, ಪಂಗಡ, ಸಮುದಾಯ, ಭಾಷೆಗಳ ಜನರ ನಡುವೆ ಅವಿಶ್ವಾಸ ಮೂಡಿಸುವಂತಹ ಹೇಳಿಕೆ ನೀಡುವವರು ದೇಶದ್ರೋಹಿಗಳು. ಇವರನ್ನು ಒಪ್ಪಿಕೊಳ್ಳುವುದು ಸಮಾಜಕ್ಕೆ ಅಪಾಯಕಾರಿ. ಯಾವುದೇ ಧರ್ಮದವರೂ ಕೊಲೆಯಾಗಬಾರದು. ಯಾರೇ ಕೊಲೆಯಾದರೂ, ಆ ನೋವಿನ ತೀವ್ರತೆ ಅವರನ್ನು ಕಳೆದುಕೊಂಡವರಿಗಷ್ಟೇ  ತಿಳಿದಿರುತ್ತದೆ’ ಎಂದರು.

‘ಕೊಲೆಗೆ ಪ್ರಚೋದನೆ ನೀಡುವುದು ಕಳವಳಕಾರಿ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸಾಮರಸ್ಯವನ್ನು ಕಾಪಾಡಲು ಎಲ್ಲ ವರ್ಗದವರೂ ಒಟ್ಟಾಗಿ ಪ್ರಯತ್ನಿಸಬೇಕು’ ಎಂದರು. 

‘ಸಮಾಜದ ಎಲ್ಲ ವರ್ಗದ ಜನರನ್ನು ಜೊತೆಗೆ ಕೊಂಡೊಯ್ಯುವ ಆಶಯವನ್ನು ಹೊಂದಿದ್ದ   ಭಾರತ ಜೋಡೊ ಯಾತ್ರೆಯ ಆಶಯವನ್ನು ಪಕ್ಷದ ಕಾರ್ಯಕರ್ತರು ಗ್ರಾಮ ಮತ್ತು ಬೂತ್ ಮಟ್ಟಕ್ಕೆ ತಲುಪಿಸಲಿದ್ದಾರೆ. ಬಿಜೆಪಿಯ ಅಪಪ್ರಚಾರದ ನಡುವೆಯೂ ಈ ಯಾತ್ರೆ ಯಶಸ್ವಿಯಾಗಿದೆ’ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡ ಸಂತೋಷ್ ಕುಮಾರ್ ಶೆಟ್ಟಿ, ಜಿ.ಕೆ.ಜಬ್ಬಾರ್, ಝಕರಿಯಾ ಮಲಾರ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು