ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಮನೆಗೆ ಮರಳ‌ಲು ನೆರವಾದ ಖಾದರ್‌

ಇಟಲಿಯಿಂದ ಬಂದು ಬೆಂಗಳೂರಿನಲ್ಲಿ ಸಿಲುಕಿದ್ದ ಕುಳಾಯಿಯ ಶ್ರೀಮಧು
Last Updated 13 ಏಪ್ರಿಲ್ 2020, 15:47 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್‌ ಸೋಂಕು ವ್ಯಾಪಿಸಿ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಇಟಲಿಯಿಂದ ವಾಪಸಾಗಿ ಮನೆಗೆ ಮರಳಲಾಗದೇ ಮಾರ್ಗ ಮಧ್ಯದಲ್ಲಿ ಬೆಂಗಳೂರಿನಲ್ಲೇ ಉಳಿದಿದ್ದ ಕುಳಾಯಿಯ ವಿದ್ಯಾರ್ಥಿನಿಯೊಬ್ಬರಿಗೆ ಶಾಸಕ ಯು.ಟಿ. ಖಾದರ್‌ ನೆರವಾಗಿದ್ದಾರೆ. ಖುದ್ದಾಗಿ ಅವರೇ ವಿದ್ಯಾರ್ಥಿನಿಯನ್ನು ಕರೆತಂದು ಮನೆಗೆ ತಲುಪಿಸಿದ್ದಾರೆ.

ಕುಳಾಯಿ ನಿವಾಸಿ ಶಿವರಾಮ್‌ ಭಟ್‌ ಮತ್ತು ಡಾ.ಶೈಲಜಾ ವೈ. ದಂಪತಿಯ ಮಗಳು ಶ್ರೀಮಧು ಭಟ್‌ ಅವರು ಶಾಸಕ ಖಾದರ್‌ ನೆರವಿನಿಂದ ಕುಟುಂಬವನ್ನು ಸೇರಿಕೊಂಡಿದ್ದಾರೆ. ಮಣಿಪಾಲದಲ್ಲಿ ವೈರಾಣು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಇವರು, 2019ರ ಅಕ್ಟೋಬರ್‌ನಿಂದ ಇಟಲಿಯ ಟ್ಯೂರಿನ್‌ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಪ್ರವೇಶ ಪಡೆದಿದ್ದರು. ಅಂದಿನಿಂದಲೂ ಇಟಲಿಯಲ್ಲೇ ಉಳಿದಿದ್ದರು.

ಕೋವಿಡ್‌– 19 ಸೋಂಕು ವ್ಯಾಪಿಸುತ್ತಿದ್ದಂತೆ ಕೇಂದ್ರ ಸರ್ಕಾರ ಇಟಲಿಯಲ್ಲಿದ್ದ ಭಾರತೀಯರನ್ನು ವಿಮಾನದ ಮೂಲಕ ದೇಶಕ್ಕೆ ಕರೆಸಿಕೊಂಡಿತ್ತು. ಮಾರ್ಚ್‌ 14ರಂದು ಇಟಲಿಯ ಮಿಲಾನ್‌ ವಿಮಾನ ನಿಲ್ದಾಣದಿಂದ ಹೊರಟ ಶ್ರೀಮಧು, ಮಾರ್ಚ್‌ 15ರಂದು ದೆಹಲಿ ತಲುಪಿದ್ದರು. 14 ದಿನಗಳ ಕ್ವಾರಂಟೈನ್‌ ಮತ್ತು 12 ದಿನಗಳ ಹೋಂ ಐಸೋಲೇಷನ್‌ ಅನ್ನು ದೆಹಲಿಯಲ್ಲೇ ಮುಗಿಸಿದ್ದರು.

ದೆಹಲಿಯ ಸೇನಾ ಕ್ಯಾಂಪ್‌ನಲ್ಲಿ ಕ್ವಾರಂಟೈನ್‌ ಮತ್ತು ಐಸೋಲೇಷನ್‌ಗೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಕಳುಹಿಸಿದ್ದ ಬಸ್‌ನಲ್ಲಿ 21 ಮಂದಿ ಕನ್ನಡಿಗರು ಏಪ್ರಿಲ್‌ 8ರಂದು ದೆಹಲಿಯಿಂದ ಹೊರಟಿದ್ದರು. ಏಪ್ರಿಲ್‌ 11ಕ್ಕೆ ಬಸ್‌ ಬೆಂಗಳೂರು ತಲುಪಿತ್ತು. ಬಹುತೇಕರು ಪಾಸ್‌ ಪಡೆದು ತಮ್ಮ ಊರುಗಳನ್ನು ತಲುಪಿದ್ದರು. ಆದರೆ, ಶ್ರೀಮಧು ಅವರಿಗೆ ಪಾಸ್‌ ಲಭಿಸದ ಕಾರಣ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲೇ ಉಳಿಯುವಂತಾಗಿತ್ತು.

ನೆರವಿಗೆ ಬಂದ ಶಾಸಕ:ಶ್ರೀಮಧು ಅವರ ತಂದೆ ತಾಯಿ, ಮಗಳನ್ನು ಕರೆತರಲು ಪಾಸ್‌ ಕೋರಿ ಮಂಗಳೂರು ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅವರಿಂದ ಸ್ಪಂದನೆ ದೊರಕದಿದ್ದಾಗ ಜಿಲ್ಲಾಧಿಕಾರಿ ಬಳಿ ಹೋಗಿದ್ದರು. ಅಲ್ಲಿಯೂ ಪಾಸ್‌ ದೊರಯಲಿಲ್ಲ. ತಮ್ಮ ಕುಟುಂಬ ಸ್ನೇಹಿತರಾದ ವಕೀಲ ಅರುಣ್‌ ಬಂಗೇರ ಎಂಬುವವರನ್ನು ಸಂಪರ್ಕಿಸಿದ್ದ ದಂಪತಿ, ಮಗಳನ್ನು ಕರೆತರಲು ನೆರವಾಗುವಂತೆ ಕೋರಿದ್ದರು.

ಶಾಸಕ ಖಾದರ್‌ ಅವರನ್ನು ಸಂಪರ್ಕಿಸಿದ್ದ ಅರುಣ್‌ ಬಂಗೇರ, ನೆರವು ಕೋರಿದ್ದರು. ಭಾನುವಾರ ಬೆಂಗಳೂರಿನಲ್ಲೇ ಇದ್ದ ಖಾದರ್‌ ಸ್ವತಃ ಶ್ರೀಮಧು ಅವರ ಸಂಬಂಧಿಕರ ಮನೆಯ ಬಳಿ ಹೋಗಿ ಅವರನ್ನು ತಮ್ಮದೇ ಕಾರಿನಲ್ಲಿ ಕರೆತಂದು ಕುಳಾಯಿಯಲ್ಲಿರುವ ಕುಟುಂಬವನ್ನು ಸೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT